

ಟೆಹ್ರಾನ್: ಹಾರ್ಮುಜ್ ಜಲಸಂಧಿಯ ನಿಯಂತ್ರಣ ವಿಚಾರವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಅಮೆರಿಕಾ ಹಾರ್ಮುಜ್ ಜಲಸಂಧಿಯ ಸಮೀಪವಿರುವ ಇರಾನ್‌ನ ಪ್ರಮುಖ ಕಡಲ ತಾಣಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ನಿರ್ದೇಶನದ ಮೇರೆಗೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಈ ಕಾರ್ಯಾಚರಣೆಯನ್ನು ಮುನ್ನಡೆಸಿದೆ.
ಇರಾನ್‌ನ ದಕ್ಷಿಣ ಬಂದರು ನಗರಗಳಾದ ಬಂದರ್ ಅಬ್ಬಾಸ್, ಜಾಸ್ಕ್, ಸಿರಿಕ್ ಮತ್ತು ಕೇಶ್ಮ್ ದ್ವೀಪಗಳಲ್ಲಿರುವ ಇರಾನ್ ಸೇನಾ ನೆಲೆಗಳು ಮತ್ತು ಕಡಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ ಹೋರ್ಮುಜ್ ಜಲಸಂಧಿ ತೆರೆದಿದೆಯೇ ಅಥವಾ ಮುಚ್ಚಲಾಗಿದೆಯೇ ಎಂಬುದರ ಕುರಿತು ವಾಷಿಂಗ್ಟನ್ ಮತ್ತು ಟೆಹ್ರಾನ್ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿವೆ.
ಇರಾನ್ ತನ್ನ ದಕ್ಷಿಣ ಭಾಗದ ಖೆಶ್ಮ್ (Qeshm) ಮತ್ತು ಫರೂರ್ (Farur) ದ್ವೀಪಗಳ ಮೇಲೆ ಕ್ಷಿಪಣಿ ದಾಳಿ ನಡೆದಿರುವುದಾಗಿ ತಿಳಿಸಿದೆ.
ಮತ್ತೊಂದೆಡೆ, ಅಮೆರಿಕದ ಸೇನಾ ನೆಲೆಗಳ ಕಾರಣದಿಂದ ಈ ಹಿಂದೆಯೂ ಇರಾನ್ ದಾಳಿಯ ಗುರಿಯಾಗಿದ್ದ ಕುವೈತ್, ತನ್ನ ಉತ್ತರ ಗಡಿ ತಪಾಸಣಾ ಕೇಂದ್ರಗಳು ಮತ್ತು ಸಮುದ್ರದಲ್ಲಿರುವ ತೈಲ ಕೊರೆತ ವೇದಿಕೆಯ ಮೇಲೂ ದಾಳಿ ನಡೆದಿರುವುದಾಗಿ ತಿಳಿಸಿದೆ.
ಒಮಾನ್ ಕರಾವಳಿಯಲ್ಲಿ ಯುಎಇ ಒಡೆತನದ ಹಾಗೂ ಸೈಪ್ರಸ್ ಧ್ವಜ ಹೊಂದಿದ್ದ ‘ಜಿಎಫ್ಎಸ್ ಗ್ಯಾಲಕ್ಸಿ’ ಎಂಬ ವಾಣಿಜ್ಯ ಕಂಟೈನರ್ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದಾಳಿ ನಡೆಸಿತ್ತು. ಈ ದಾಳಿಯಿಂದಾಗಿ ಹಡಗು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.
ಈ ದಾಳಿಗೂ ಮುನ್ನ, ಹಡಗು ಅನಧಿಕೃತ ಮಾರ್ಗದಲ್ಲಿ ಚಲಿಸುತ್ತಿದೆ ಎಂದು ಆರೋಪಿಸಿ ಇರಾನ್ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಏಕಪಕ್ಷೀಯವಾಗಿ ಘೋಷಿಸಿತ್ತು. ಇರಾನ್‌ನ ಈ ಉದ್ಧಟತನಕ್ಕೆ ಪ್ರತಿಕಾರವಾಗಿ ಅಮೆರಿಕ ಈಗ ಬೃಹತ್ ಮಿಲಿಟರಿ ಕಾರ್ಯಾಚರಣೆಗೆ ಇಳಿದಿದೆ.
ಯುಎಸ್ ಮಿಲಿಟರಿ ಪಡೆಗಳು ಯುದ್ಧವಿಮಾನಗಳು, ಯುದ್ಧನೌಕೆಗಳು ಮತ್ತು ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿ ಕಳೆದ ಮೂರು ದಿನಗಳಲ್ಲಿ ಇರಾನ್‌ನ 300ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿವೆ. ಇದರಲ್ಲಿ 140ಕ್ಕೂ ಹೆಚ್ಚು ಪ್ರಮುಖ ಮಿಲಿಟರಿ ತಾಣಗಳು ಸೇರಿವೆ.
ಇರಾನ್‌ನ ಕರಾವಳಿ ರಾಡಾರ್‌ಗಳು, ರಹಸ್ಯ ಸಂವಹನ ಜಾಲಗಳು, ಯುದ್ಧಸಾಮಗ್ರಿ ಡಿಪೋಗಳು, ಹಡಗು ವಿರೋಧಿ ಕ್ಷಿಪಣಿ ಉಡಾವಣಾ ಕೇಂದ್ರಗಳು ಮತ್ತು IRGC ನೌಕಾಪಡೆಯ ಯುದ್ಧ ಬೋಟ್‌ಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು CENTCOM ಪ್ರಕಟಿಸಿದೆ.
ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಇರಾನ್ ಹೇಳಿಕೊಂಡಿದ್ದರೂ, ಒಮಾನ್ ಸಮೀಪದ ದಕ್ಷಿಣದ ಸುರಕ್ಷಿತ ಮಾರ್ಗದ ಮೂಲಕ ಹೊರ್ಮುಜ್ ಜಲಸಂಧಿ ಮುಕ್ತವಾಗಿದೆ ಎಂದು ಯುಎಸ್ ಮಿಲಿಟರಿ ಸ್ಪಷ್ಟಪಡಿಸಿದೆ.
ಅಮೆರಿಕದ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್, ಯುಎಸ್ ಮಿಲಿಟರಿ ನೆಲೆಗಳನ್ನು ಹೊಂದಿರುವ ನೆರೆಯ ಗಲ್ಫ್ ರಾಷ್ಟ್ರಗಳ ಮೇಲೆ ಏಕಕಾಲದಲ್ಲಿ ಕ್ಷಿಪಣಿ ಮತ್ತು ಸರಣಿ ಡ್ರೋನ್ ದಾಳಿಗಳನ್ನು ಆರಂಭಿಸಿದೆ.
ಜೋರ್ಡಾನ್'ನಲ್ಲಿನ ಪ್ರಿನ್ಸ್ ಹಸನ್ ಏರ್ ಬೇಸ್ ಮೇಲಿನ ಇರಾನ್ ದಾಳಿಯಲ್ಲಿ ಕಮಾಂಡ್ ಸೆಂಟರ್‌ಗಳು ಮತ್ತು ಡ್ರೋನ್ ಹ್ಯಾಂಗರ್‌ಗಳು ಹಾನಿಗೊಳಗಾಗಿದ್ದುಸ ಕುವೈತ್‌ನ ಉತ್ತರ ಭೂ ಗಡಿ ಪೋಸ್ಟ್‌ಗಳು ಮತ್ತು ಕುವೈತ್ ಆಯಿಲ್ ಕಂಪನಿಯ ಕಡಲಾಚೆಯ ತೈಲ ಬಾವಿ (Drilling Platform) ಮೇಲೂ ದಾಳಿ ನಡೆದಿದೆ.
ಖತಾರ್ ಮತ್ತು ಬಹ್ರೇನ್'ನಲ್ಲಿ ಕ್ಷಿಪಣಿ ಮುನ್ನೆಚ್ಚರಿಕೆ ಸೈರನ್‌ಗಳು ಮೊಳಗಿದ್ದು, ಖತಾರ್ ಕೆಲವು ಇರಾನಿ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ಈ ನಡುವೆ ತನ್ನ ಭೂಪ್ರದೇಶದ ಮೇಲಿನ ಡ್ರೋನ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಒಮಾನ್ ಸರ್ಕಾರ, ಇರಾನ್ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಮಹಾ ಸಂಘರ್ಷದ ಬೆನ್ನಲ್ಲೇ ಇರಾನ್‌ನ ತೈಲ ಮಾರಾಟಕ್ಕೆ ನೀಡಲಾಗಿದ್ದ ಸಾಮಾನ್ಯ ಪರವಾನಗಿಗಳನ್ನು ಅಮೆರಿಕ ತಕ್ಷಣದಿಂದಲೇ ರದ್ದುಗೊಳಿಸಿದ್ದು, ಭಾರೀ ಆರ್ಥಿಕ ನಿರ್ಬಂಧಗಳನ್ನು ಮರು ಹೇರಿದೆ.
ಕದನ ವಿರಾಮ ಮುರಿದುಬಿದ್ದಿರುವುದು ಇಡೀ ಮಧ್ಯಪ್ರಾಚ್ಯವನ್ನು ಪೂರ್ಣ ಪ್ರಮಾಣದ ಯುದ್ಧಕ್ಕೆ ತಳ್ಳುವ ಭೀತಿ ಮೂಡಿಸಿದೆ. ಈ ಸಂಘರ್ಷವು ಜಾಗತಿಕ ವ್ಯಾಪಾರ ಮತ್ತು ಇಂಧನ (ಕಚ್ಚಾ ತೈಲ) ಪೂರೈಕೆಗೆ ಮಾರಕವಾಗಬಹುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇರಾನ್ ಹಾಗೂ ಅಮೆರಿಕಾ ನಾಯಕರು ತಕ್ಷಣವೇ ಮಾತುಕತೆಗೆ ಮರಳಬೇಕೆಂದು ಒತ್ತಾಯಿಸಿದ್ದಾರೆ.