ವಿಮಾನ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಾ, ನಿಮ್ಮ ವಸ್ತುಗಳನ್ನು ತುಂಬಿಸಿಕೊಳ್ಳುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನೀವು ಜಾಗರೂಕತೆಯಿಂದ ನಿಮ್ಮ ಟೂತ್ ಬ್ರಷ್, ಚಾರ್ಜರ್, ಮತ್ತು ನಿಮ್ಮ ನೆಚ್ಚಿನ ಶ್ಯಾಂಪೂವನ್ನು ನಿಮ್ಮ ಹೆಗಲ ಚೀಲಕ್ಕೆ ತುಂಬಿಸಿಕೊಳ್ಳುತ್ತೀರಿ. ಎಲ್ಲವೂ ಸರಿಯಾಗಿಯೇ ಇದೆ ಎಂದು ನಿರಾಳರಾಗುತ್ತೀರಿ. ಆದರೆ, ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಸಂದರ್ಭದಲ್ಲಿ, ಓರ್ವ ಅಧಿಕಾರಿ ನಿಮ್ಮನ್ನು ತಡೆದು, ನಿಮ್ಮ ಬಾಟಲ್ ತುಂಬಾ ದೊಡ್ಡದಾಗಿದ್ದು, ನೀವು ಅದನ್ನು ಎಸೆಯಬೇಕಾಗುತ್ತದೆ ಎನ್ನುತ್ತಾರೆ. ನಿಮಗೆ ಅವರ ಆದೇಶ ವಿಚಿತ್ರವೆನಿಸುತ್ತದೆ, ನ್ಯಾಯಯುತವಲ್ಲ ಎನಿಸುತ್ತದೆ. ಹೆಚ್ಚೆಂದರೆ, ನೀವು ದ್ರವ ರೂಪದಲ್ಲಿ ಶ್ಯಾಂಪೂ, ನೀರು ಅಥವಾ ತಂಪು ಪಾನೀಯಗಳನ್ನು ಮಾತ್ರವೇ ಒಯ್ದಿರುತ್ತೀರಿ. ಹೀಗಿರುವಾಗ, ಇಷ್ಟು ಸರಳವಾದ, ಒಂದು ದ್ರವ ವಸ್ತುವನ್ನು ಹೊಂದಿರುವ ಬಾಟಲಿಗೆ ವಿಮಾನ ನಿಲ್ದಾಣಗಳೇಕೆ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿವೆ ಎಂದು ನಿಮಗೆ ಅನಿಸುತ್ತದಲ್ಲವೇ?
ಇದಕ್ಕೆ ನೈಜ ಉತ್ತರ, ಜಗತ್ತಿನಾದ್ಯಂತ ವಿಮಾನಯಾನ ಭದ್ರತೆಯನ್ನೇ ಬದಲಾಯಿಸಿದ ಒಂದು ನಾಟಕೀಯ ಘಟನೆಯಲ್ಲಿದೆ. ಈ ಘಟನೆ ಒಂದು ಅಚ್ಚರಿಯ, ಮತ್ತು ಭೀತಿದಾಯಕವಾದ ಸಮಸ್ಯೆಯನ್ನು ಪ್ರದರ್ಶಿಸಿತು: ಕೆಲವೊಂದು ಅಪಾಯಕಾರಿ ವಸ್ತುಗಳು ಮೇಲ್ನೋಟಕ್ಕೆ ನಿರಪಾಯಕಾರಿಯಾದ, ದೈನಂದಿನ ಬಳಕೆಯ ದ್ರವ ವಸ್ತುಗಳಂತೆಯೇ ಕಾಣಬಹುದು. ಹಾಗಾದರೆ, ವಿಮಾನ ನಿಲ್ದಾಣಗಳು ಏಕೆ ನೀವು ಒಯ್ಯುವ ದ್ರವ ವಸ್ತುಗಳ ಮೇಲೆ ಮಿತಿ ಹೇರುತ್ತವೆ ಮತ್ತು ಇಂತಹ ಕಟ್ಟುನಿಟ್ಟಿನ ನಿಯಮಗಳು ಹೇಗೆ ಜಾರಿಗೆ ಬಂದವು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.
2000ನೇ ದಶಕದ ಮೊದಲಾರ್ಧದ ತನಕ, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳು ಇಂದಿಗಿಂತ ಬಹಳಷ್ಟು ಭಿನ್ನವಾಗಿದ್ದವು. ಪ್ರಯಾಣಿಕರು ನೀರು, ತಂಪು ಪಾನೀಯಗಳು, ಶ್ಯಾಂಪೂ, ಸುಗಂಧ ದ್ರವ್ಯಗಳು, ಸೇರಿದಂತೆ, ವಿವಿಧ ದ್ರವ ಪದಾರ್ಥಗಳ ದೊಡ್ಡ ಬಾಟಲಿಗಳನ್ನು ವಿಮಾನದಲ್ಲಿ ಯಾವುದೇ ಆತಂಕವಿಲ್ಲದೆ ಒಯ್ಯಬಹುದಾಗಿತ್ತು. ಹಾಗೆಂದು ಭದ್ರತಾ ತಪಾಸಣೆ ಆಗಲೂ ಇತ್ತು. ಆದರೆ, ದ್ರವ ವಸ್ತುಗಳು ಗಂಭೀರ ಅಪಾಯವೆಂಬಂತೆ ಪರಿಗಣಿತವಾಗಿರಲಿಲ್ಲ. ಹೆಚ್ಚಿನ ಗಮನ ಬಂದೂಕು, ಚಾಕುವಿನಂತ ಆಯುಧಗಳ ಸಾಗಾಣಿಕೆಯತ್ತಲೇ ಇತ್ತು. ನೀರಿನ ಅಥವಾ ಲೋಷನ್ನಿನ ಬಾಟಲಿ ಸಂಪೂರ್ಣವಾಗಿ ನಿರಪಾಯಕಾರಿ ಎಂಬಂತಿತ್ತು. ಹಲವಾರು ವರ್ಷಗಳ ಕಾಲ, ಈ ಪರಿಸ್ಥಿತಿ ಉತ್ತಮ ಎನ್ನುವಂತಿತ್ತು. ಆದರೆ, ನಿಧಾನವಾಗಿ ತಜ್ಞರು ಒಂದು ಪ್ರಮುಖ ಸತ್ಯವನ್ನು ಅರ್ಥ ಮಾಡಿಕೊಂಡರು. ಅದೇನೆಂದರೆ, ಅಪಾಯಕಾರಿ ವಸ್ತುಗಳು ಯಾವಾಗಲೂ ಒಂದು ನಿರ್ದಿಷ್ಟ ರೂಪ ಅಥವಾ ಆಕಾರದಲ್ಲಿ ಇರುವುದಿಲ್ಲ!
ಆಧುನಿಕ ದ್ರವ ವಸ್ತುಗಳ ನಿಯಮಗಳು 2006ರಲ್ಲಿ ಪತ್ತೆಯಾದ ಒಂದು ಭಯೋತ್ಪಾದನಾ ಹುನ್ನಾರದ ಬಳಿಕ ಬಹುಮಟ್ಟಿಗೆ ಜಾರಿಗೆ ಬಂದವು. ಒಂದಷ್ಟು ವ್ಯಕ್ತಿಗಳು ವಾಣಿಜ್ಯಿಕ ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮೊಡನೆ ದ್ರವ ರೂಪದ ಸ್ಫೋಟಕಗಳನ್ನು ಒಯ್ಯಲು ಯೋಜನೆ ರೂಪಿಸಿದ್ದನ್ನು ಯುನೈಟೆಡ್ ಕಿಂಗ್‌ಡಮ್ ಅಧಿಕಾರಿಗಳು ಪತ್ತೆಹಚ್ಚಿದರು. ಅವರು ಇಂತಹ ಅಪಾಯಕಾರಿ ದ್ರವಗಳನ್ನು ಸಾಮಾನ್ಯ ಪಾನೀಯಗಳ ಬಾಟಲಿಗಳೊಡನೆ ಒಯ್ಯಲು ಲೆಕ್ಕಾಚಾರ ಹಾಕಿದ್ದರು. ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿ ವಿಚಾರವೆಂದರೆ, ಈ ದ್ರವ ಸ್ಫೋಟಕಗಳು ಮತ್ತು ಸಾಮಾನ್ಯ ಪಾನೀಯಗಳ ನಡುವೆ ಸುಲಭವಾಗಿ ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಿರಲಿಲ್ಲ. ಇದೊಂದು ಸತ್ಯವೇ ಎಲ್ಲ ಲೆಕ್ಕಾಚಾರಗಳನ್ನು ಬದಲಾಯಿಸಿತು. ಬಹುತೇಕ ರಾತ್ರೋರಾತ್ರಿ ಎಲ್ಲ ದೇಶಗಳ ಸರ್ಕಾರಗಳು ತಮ್ಮ ಹಳೆಯ ಭದ್ರತಾ ವ್ಯವಸ್ಥೆಗಳು ತಾವು ಅಂದುಕೊಂಡಷ್ಟು ಪರಿಣಾಮಕಾರಿ, ಸುರಕ್ಷಿತವಲ್ಲ ಎಂದು ಅರ್ಥ ಮಾಡಿಕೊಂಡು, ವೈಮಾನಿಕ ಭದ್ರತೆಯನ್ನು ಬಲಪಡಿಸಲು ಮುಂದಾದವು. ಬಹಳಷ್ಟು ಬೇಗನೆ ದ್ರವ ಪದಾರ್ಥಗಳ ಮೇಲೆ ನಿರ್ಬಂಧಗಳು ಜಾರಿಗೆ ಬಂದವು. ಇಂದಿಗೂ ಪಾಲನೆಯಾಗುತ್ತಿರುವ ಬಹಳಷ್ಟು ನಿಯಮಗಳು ಆ ತುರ್ತು ಕ್ರಮದ ರೂಪದಲ್ಲಿ ಜಾರಿಗೆ ಬಂದವೇ ಆಗಿವೆ.
ಅತ್ಯಂತ ಪ್ರಸಿದ್ಧವಾದ ವಿಮಾನ ನಿಲ್ದಾಣ ನಿಯಮವೆಂದರೆ 100 ಮಿಲಿ ಲೀಟರ್ ನಿಯಮ. ಬಹಳಷ್ಟು ದೇಶಗಳಲ್ಲಿ, ಪ್ರಯಾಣಿಕರು ನೂರು ಮಿಲಿ ಲೀಟರ್ ಇಡುವ ಸಂಗ್ರಾಹಕಗಳಲ್ಲಿ ಮಾತ್ರವೇ ಸಾಗಿಸಬಹುದು. ಈ ಸಣ್ಣ ಸಂಗ್ರಾಹಕಗಳನ್ನು ಸಾಮಾನ್ಯವಾಗಿ ಒಂದು ಪಾರದರ್ಶಕ ಪ್ಲಾಸ್ಟಿಕ್ ಚೀಲದಲ್ಲಿ ಇಡಲಾಗುತ್ತದೆ. ಸುರಕ್ಷತೆ ಮತ್ತು ಬಳಕೆಯ ಅವಶ್ಯಕತೆಗಳ ನಡುವೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಈ ಪ್ರಮಾಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಣ್ಣ ಸಂಗ್ರಾಹಕಗಳು ಅಪಾಯಕಾರಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುವುದನ್ನು ತಡೆಯುತ್ತವೆ. ಆದರೆ, ಪ್ರಯಾಣಿಕರಿಗೆ ಅವಶ್ಯಕವಾದ ಟೂತ್ ಪೇಸ್ಟ್, ಕಾಸ್ಮೆಟಿಕ್ಸ್, ಮತ್ತು ಕಣ್ಣಿನ ಲೆನ್ಸ್ ದ್ರವಗಳನ್ನು ಒಯ್ಯಲು ಅನುಮತಿಸುತ್ತವೆ. ಈ ನಿಯಮ ಅರ್ಥ ಮಾಡಿಕೊಳ್ಳಲು ಸರಳವಾಗಿರುವುದು ಸಹ ಅಷ್ಟೇ ಮುಖ್ಯವಾಗಿದೆ. ಸ್ಪಷ್ಟವಾದ ಮಿತಿಯನ್ನು ವಿಧಿಸುವುದು ಪ್ರಯಾಣಿಕರು ಮತ್ತು ಅಧಿಕಾರಿಗಳು ಇಬ್ಬರಿಗೂ ಸುಲಭವಾಗಿದ್ದು, ಇಲ್ಲಿ ಯಾವುದೇ ಸಂಕೀರ್ಣತೆ ಇರುವುದಿಲ್ಲ.
ಬಹಳಷ್ಟು ಜನರಿಗೆ ಒಂದು ವಿಚಾರ ಗೊಂದಲ ಉಂಟುಮಾಡುತ್ತದೆ. ಒಂದು ವೇಳೆ, ನಿಮ್ಮ ಬಳಿ ಇರುವ 500 ಎಂಎಲ್ ಬಾಟಲಿಯಲಿ ಸ್ವಲ್ಪವಷ್ಟೇ ದ್ರವ ವಸ್ತು ಇದೆ ಎಂದರೆ ಏನಾಗುತ್ತದೆ? ಅದನ್ನೂ ಏಕೆ ನಿಷೇಧಿಸಲಾಗುತ್ತದೆ? ಏಕೆಂದರೆ, ಭದ್ರತಾ ತಪಾಸಣೆಯಲ್ಲಿ ಸಂಗ್ರಾಹಕದ ಗಾತ್ರವನ್ನು ಪರಿಶೀಲಿಸಲಾಗುತ್ತದೆಯೇ ಹೊರತು, ಅದರ ಒಳಗಿರುವ ವಸ್ತುವಿನ ಪ್ರಮಾಣವನ್ನಲ್ಲ. ಪ್ರತಿಯೊಂದು ಬಾಟಲಿಯನ್ನು ಅಳತೆ ಮಾಡುವುದು ಅತ್ಯಂತ ನಿಧಾನಗತಿಯ ಪ್ರಕ್ರಿಯೆಯಾಗಿದ್ದು, ಪ್ರಾಯೋಗಿಕ ಪರಿಹಾರವಲ್ಲ. ಆದರೆ, ಸಂಗ್ರಾಹಕದ ಗಾತ್ರವನ್ನು ಒಂದೇ ಪ್ರಮಾಣಕ್ಕೆ ನಿರ್ಧರಿಸುವುದರಿಂದ, ಅದನ್ನು ಪ್ರತಿವರ್ಷವೂ ಲಕ್ಷಾಂತರ ಪ್ರಯಾಣಿಕರಿಗೆ ಸಮಾನವಾಗಿ ಜಾರಿಗೆ ತರಬಹುದು. ಇದು ಅನನುಕೂಲಕರ ಎನ್ನುವಂತೆ ಭಾಸವಾಗಬಹುದು. ಆದರೆ, ಇದು ಭದ್ರತಾ ವ್ಯವಸ್ಥೆಯನ್ನು ಸುಗಮವಾಗಿ ಸಾಗುವಂತೆ ಮಾಡುತ್ತದೆ.
ಬಹಳಷ್ಟು ಪ್ರಯಾಣಿಕರು ಒಂದು ಅಸಹಜ ವಿಚಾರವನ್ನು ಗಮನಿಸುತ್ತಾರೆ. ಅದೇನೆಂದರೆ, ಭದ್ರತಾ ತಪಾಸಣೆಯ ಹೊರಗೆ ಖರೀದಿಸಿದ ನೀರಿನ ಬಾಟಲಿಯನ್ನು ಒಯ್ಯಲು ಅನುಮತಿ ನೀಡುವುದಿಲ್ಲ. ಆದರೆ, ತಪಾಸಣೆಯ ಬಳಿಕ ಕೊಳ್ಳುವ ಬಾಟಲಿಗೆ ಅನುಮತಿ ಇದೆ. ಇದಕ್ಕೆ ಸರಳ ಕಾರಣವೆಂದರೆ ಅದನ್ನು ಖರೀದಿಸುವ ಜಾಗವಷ್ಟೇ. ಸುರಕ್ಷಿತ ಸ್ಥಳದ ಒಳಗೆ ಮಾರಾಟವಾಗುವ ವಸ್ತುಗಳು ಈಗಾಗಲೇ ಸುರಕ್ಷಿತವಾಗಿರುತ್ತವೆ. ಅವು ನಿಯಂತ್ರಿತ ಪ್ರದೇಶದಲ್ಲೇ ಇರುತ್ತವೆ. ಆದ್ದರಿಂದ ಅಧಿಕಾರಿಗಳು ಅಲ್ಲಿ ಖರೀದಿಸುವ ಪಾನೀಯಗಳನ್ನು ವಿಮಾನದೊಳಗೆ ಒಯ್ಯಲು ಅನುಮತಿಸುತ್ತಾರೆ.
ಇಂತಹ ನಿಯಮಗಳು ಎಲ್ಲೆಡೆಯೂ ಒಂದೇ ರೀತಿ ಇರುತ್ತವೆಯೇ? ನಿಖರವಾಗಿ ಇದೇ ರೀತಿ ಎನ್ನಲು ಸಾಧ್ಯವಿಲ್ಲ. ಬಹಳಷ್ಟು ದೇಶಗಳು ಒಂದೇ ರೀತಿಯದು ಎನ್ನಬಹುದಾದ ನಿಯಮಗಳನ್ನು ಅನುಸರಿಸುತ್ತವಾದರೂ, ಒಂದಷ್ಟು ಸಣ್ಣ ಪುಟ್ಟ ವ್ಯತ್ಯಾಸಗಳು ಇರಬಹುದು. ಕೆಲವು ವಿಮಾನ ನಿಲ್ದಾಣಗಳು ಈಗ ಆಧುನಿಕ ಸ್ಕ್ಯಾನರ್‌ಗಳನ್ನು ಬಳಸುತ್ತಿದ್ದು, ಅವು ಮೂರು ಆಯಾಮಗಳ ಚಿತ್ರಣವನ್ನು ಒದಗಿಸಿ (3D), ದ್ರವಗಳ ಕುರಿತು ಹೆಚ್ಚಿನ ಮಾಹಿತಿ ಒದಗಿಸುತ್ತವೆ.
ಇದು ನಿಜಕ್ಕೂ ಹೆಚ್ಚು ರೋಮಾಂಚಕ ವಿಚಾರ. ಈ ತಂತ್ರಜ್ಞಾನ ಹೆಚ್ಚು ಹೆಚ್ಚು ವ್ಯಾಪಿಸಿ, ಯಂತ್ರಗಳು ನಂಬಿಕಾರ್ಹವಾಗಿ ಅಪಾಯಗಳನ್ನು ಗುರುತಿಸಲು ಸಾಧ್ಯವಾದರೆ, ಆಗ ಹಳೆಯ ಮಿತಿಗಳು ಬಹುಶಃ ನಿಧಾನವಾಗಿ ಇಲ್ಲವಾಗಬಹುದು. ಆ ದಿನ ಬಂದಾಗ, ನಾವು ಯಾವ ಪ್ಲಾಸ್ಟಿಕ್ ಚೀಲದ ಅಗತ್ಯವಿಲ್ಲದೆ, ನೀರಿನ ಬಾಟಲಿಯನ್ನು ಸಹಜವಾಗಿಯೇ ಒಯ್ಯಬಹುದು. ಆದ್ದರಿಂದ, ಮುಂದಿನ ಬಾರಿ ವಿಮಾನ ನಿಲ್ದಾಣದ ತಪಾಸಣಾ ಕೇಂದ್ರದಲ್ಲಿ ನಿಮ್ಮ ಬಾಟಲಿಯನ್ನು ತೆಗೆದುಕೊಂಡಾಗ, ಅದು ಹಿಂದಿನ ಅಪಾಯದಿಂದ ಜಾರಿಗೆ ಬಂದಿರುವ ಭದ್ರತಾ ಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಸ್ಮಾರ್ಟ್ ಯಂತ್ರೋಪಕರಣಗಳು ಕೊನೆಗೂ ಇದರಿಂದ ನಿಮ್ಮನ್ನು ಮುಕ್ತಗೊಳಿಸಬಹುದು ಎನ್ನುವುದನ್ನು ನೆನಪಿಟ್ಟುಕೊಳ್ಳಿ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)