ಇರಾನ್ ಶಸ್ತ್ರಾಸ್ತ್ರಗಳು (ಸಂಗ್ರಹ ಚಿತ್ರ) online desk
ಅಂಕಣಗಳು

ಜಗತ್ತನ್ನೇ ನಡುಗಿಸುತ್ತಿರುವ ಇರಾನಿನ ಯುದ್ಧೋತ್ಸಾಹ (ಜಾಗತಿಕ ಜಗಲಿ)

ಇರಾನ್ ಮತ್ತು ಇಸ್ರೇಲ್ - ಅಮೆರಿಕಾಗಳು ಈಗ ಕೆಲ ಸಮಯದಿಂದ ಪರಸ್ಪರರ ಮೇಲೆ ತೀಕ್ಷ್ಣವಾಗಿ ದಾಳಿ ನಡೆಸುತ್ತಾ ಹೋಗುತ್ತಿವೆ.

ನೀವು ಈಗ ಯಾವುದೇ ಸುದ್ದಿ ವಾಹಿನಿಯನ್ನು ನೋಡುತ್ತಿದ್ದರೂ, ನಿಮ್ಮ ಕಿವಿಗೆ 'ಬ್ಯಾಲಿಸ್ಟಿಕ್ ಕ್ಷಿಪಣಿ', 'ಹೈಪರ್‌ಸಾನಿಕ್', 'ಡ್ರೋನ್ ದಾಳಿ' ಎಂಬಂತಹ ಪದಗಳೇ ಕಿವಿಗೆ ಬೀಳುತ್ತವೆ. ವಾರ್ತಾ ವಾಚಕರು ವೇಗವಾಗಿ, ಆತಂಕದಿಂದ ಸುದ್ದಿ ಹೇಳುತ್ತಿರುತ್ತಾರೆ. ಇನ್ನು ಟಿವಿಯಲ್ಲಿನ ಗ್ರಾಫಿಕ್ಸ್ ಅಂತೂ ಆತಂಕಕಾರಿಯಾಗಿ ಕಾಣುತ್ತವೆ. ಆದರೆ, ಜನ ಸಾಮಾನ್ಯರ ಮೇಲೆ ಇದೆಲ್ಲದರ ಪರಿಣಾಮ ಏನು ಎನ್ನುವುದನ್ನು ಮಾತ್ರ ಯಾರೂ ವಿವರಿಸುತ್ತಿಲ್ಲ. ಆದ್ದರಿಂದ, ಈ ವಿಚಾರಗಳನ್ನು ನಾವು ಈ ಲೇಖನದಲ್ಲಿ ಸರಳವಾಗಿ ಗಮನಿಸುತ್ತಾ ಹೋಗೋಣ.

ಇರಾನ್ ಮತ್ತು ಇಸ್ರೇಲ್ - ಅಮೆರಿಕಾಗಳು ಈಗ ಕೆಲ ಸಮಯದಿಂದ ಪರಸ್ಪರರ ಮೇಲೆ ತೀಕ್ಷ್ಣವಾಗಿ ದಾಳಿ ನಡೆಸುತ್ತಾ ಹೋಗುತ್ತಿವೆ. ಈ ಬಾರಿ ತನ್ನ ಮೇಲಾಗಿರುವ ದಾಳಿಗೆ ಇರಾನಿನ ಪ್ರತಿಕ್ರಿಯೆ ಬಹಳಷ್ಟು ಜೋರಾಗಿಯೇ ಇದೆ. ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕನ್ ನೆಲೆಗಳನ್ನು ಗುರಿಯಾಗಿಸಿ ಇರಾನ್ ನಿರಂತರವಾಗಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸುತ್ತಲೇ ಇದೆ. ಆದರೆ, ಇರಾನ್ ನಿಜಕ್ಕೂ ಪ್ರಯೋಗಿಸುತ್ತಿರುವ ಆಯುಧಗಳು ಯಾವುವು? ಈಗ ಸಂಪೂರ್ಣ ಜಗತ್ತು ಏಕೆ ಆತಂಕಕ್ಕೆ ಒಳಗಾಗಿದೆ? ಇದನ್ನು ನಾವು ಹಂತ ಹಂತವಾಗಿ ಅರ್ಥ ಮಾಡಿಕೊಳ್ಳೋಣ.

ಇರಾನ್ ಇಷ್ಟು ಶಕ್ತಿಶಾಲಿ ರಾಷ್ಟ್ರವಾಗಿದ್ದು ಹೇಗೆ?

ಇರಾನ್ ತನ್ನೆಲ್ಲ ಸಾಮರ್ಥ್ಯವನ್ನು ರಾತ್ರೋರಾತ್ರಿ ನಿರ್ಮಿಸಿಕೊಂಡಿಲ್ಲ. ಈ ಅಭಿವೃದ್ಧಿ 1980ರ ದಶಕದಲ್ಲಿ ನಡೆದ ಇರಾಕ್ ಜೊತೆಗಿನ ಸುದೀರ್ಘ, ಭೀಕರ ಕದನದಿಂದ ಆರಂಭಗೊಂಡಿತು. ಈ ಯುದ್ಧ ಇರಾನ್‌ಗೆ ತಾನು ತನ್ನ ಮೇಲೆ ಮಾತ್ರ ಅವಲಂಬಿತವಾಗಿರಬೇಕು ಎನ್ನುವ ಬಹುದೊಡ್ಡ ಪಾಠವನ್ನು ಕಲಿಸಿತ್ತು. ಅಂದಿನಿಂದ ಇರಾನ್ ಮೌನವಾಗಿ ಈ ಸಂಪೂರ್ಣ ಪ್ರದೇಶದಲ್ಲಿನ ಬಹುದೊಡ್ಡ ಕ್ಷಿಪಣಿ ಸಂಗ್ರಹವನ್ನು ಆರಂಭಿಸಿತು. ಹಲವು ದಶಕಗಳ ಕೆಲಸದ ಪರಿಣಾಮವಾಗಿ, ಇಂದು ಇರಾನಿನ ಕ್ಷಿಪಣಿ ಸಂಗ್ರಹ ಬೃಹತ್ತಾಗಿ ಬೆಳೆದಿದೆ.

ಬ್ಯಾಲಿಸ್ಟಿಕ್ ಕ್ಷಿಪಣಿಗಳು - ಬೃಹತ್ ಆಯುಧ

ಬ್ಯಾಲಿಸ್ಟಿಕ್ ಕ್ಷಿಪಣಿ ಎನ್ನುವುದು ಅತ್ಯಂತ ದೀರ್ಘವಾದ ಪಥದಲ್ಲಿ ಮೇಲಕ್ಕೆ ಎಸೆಯುವ ಒಂದು ಬೃಹತ್ ಕಲ್ಲಿನಂತೆ ಎಂದು ಭಾವಿಸಿಕೊಳ್ಳಿ. ಇದು ಆಕಾಶಕ್ಕೆ ಚಿಮ್ಮಿ, ಬಳಿಕ ಅತ್ಯಂತ ಹೆಚ್ಚಿನ ವೇಗದಲ್ಲಿ ನೆಲಕ್ಕೆ ಚಿಮ್ಮುತ್ತದೆ. ಇದು ಬಹಳ ವೇಗವಾಗಿ, ಬಾಗಿದ ಪಥದಲ್ಲಿ ಸಾಗುವುದರಿಂದ, ಇದನ್ನು ಹೊಡೆದುರುಳಿಸುವುದು ಬಹಳ ಕಷ್ಟಕರ. ಈ ಸಾಮರ್ಥ್ಯವೇ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅತ್ಯಂತ ಅಪಾಯಕಾರಿಯಾಗಿಸುವುದು.

ಇರಾನ್ ಬಳಿ ಮೂರು ಗಾತ್ರಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳಿವೆ. ಸಣ್ಣ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಗರಿಷ್ಠ 1,000 ಕಿಲೋಮೀಟರ್ ತನಕ ಸಾಗಬಲ್ಲವಾಗಿದ್ದು, ಸನಿಹದ ದೇಶಗಳ ಮೇಲೆ ದಾಳಿ ನಡೆಸಬಲ್ಲವು. ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು 1,000ದಿಂದ 3,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಬಹುತೇಕ ಮಧ್ಯ ಪೂರ್ವವನ್ನು ವ್ಯಾಪಿಸಬಲ್ಲದು. ಇನ್ನು ಇಂಟರ್‌ಮೀಡಿಯಟ್ ವ್ಯಾಪ್ತಿಯ ಕ್ಷಿಪಣಿಗಳು 5,500 ಕಿಲೋಮೀಟರ್ ತನಕ ಕ್ರಮಿಸಬಲ್ಲವಾಗಿದ್ದು, ಬ್ರಿಟನ್, ಫ್ರಾನ್ಸ್, ಜರ್ಮನಿಯಂತಹ ಯುರೋಪಿಯನ್ ಪ್ರದೇಶಗಳನ್ನು ತಲುಪಬಲ್ಲವು.

ಇರಾನಿನ ಪ್ರಸಿದ್ಧ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಾದ ಸೆಜಿಲ್, ಘದರ್, ಖೊರಮ್‌ಶಹರ್, ಮತ್ತು ಖೈಬರ್ ಕ್ಷಿಪಣಿಗಳು 2,000 ಕಿಲೋಮೀಟರ್ ತನಕ ತಲುಪಬಲ್ಲವು. ಶಹಾಬ್-3, ಎಮಾದ್, ಹೊವೇಜೆ಼ಹ್ ರಂತಹ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು 1,300ರಿಂದ 1,700 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಫತೇಹ್-110 ಮತ್ತು ಜೊ಼ಲ್ಫಾಘರ್ ಕ್ಷಿಪಣಿಗಳು ಬಹಳ ಶಕ್ತಿಶಾಲಿಯಾಗಿದ್ದು, ಹತ್ತಿರದ ಪ್ರದೇಶಗಳಿಗೆ ಭಾರೀ ಹಾನಿ ಉಂಟುಮಾಡಬಲ್ಲವು.

ಇಲ್ಲೊಂದು ಬಹಳ ಪ್ರಮುಖ ಅಂಶವಿದೆ. ಸದ್ಯದ ಮಟ್ಟಿಗೆ ಅಮೆರಿಕ ಸುರಕ್ಷಿತವಾಗಿದೆ. ಇರಾನ್ ಬಳಿ ಇನ್ನೂ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ಸ್ ಅಥವಾ ಐಸಿಬಿಎಂ ಇಲ್ಲ. ಐಸಿಬಿಎಂ ಎನ್ನುವುದು 5,500 ಕಿಲೋಮೀಟರ್‌ಗೂ ಹೆಚ್ಚು ವ್ಯಾಪ್ತಿ ಹೊಂದಿದ್ದು, ಖಂಡಾಂತರ ವ್ಯಾಪ್ತಿ ಹೊಂದಿದೆ. ಇರಾನ್ ಇನ್ನೂ ಐಸಿಬಿಎಂ ನಿರ್ಮಿಸಿಲ್ಲವಾದರೂ, ಅದು ಘಾಯೆಮ್-100 ಎನ್ನುವ ಉಪಗ್ರಹ ಉಡಾವಣಾ ರಾಕೆಟ್ ಅಭಿವೃದ್ಧಿಯಲ್ಲಿ ಮುಂದೆ ಸಾಗಿದೆ. ಇರಾನ್ ಈ ಸಾಧನೆ ನಡೆಸುವ ತನಕ, ಅಮೆರಿಕದ ಮುಖ್ಯ ಭೂಮಿ ಇರಾನಿನ‌ ವ್ಯಾಪ್ತಿಯಿಂದ ಹೊರಗಿರಲಿದೆ.

ಕ್ರೂಸ್ ಕ್ಷಿಪಣಿಗಳು - ಕದ್ದು ನುಸುಳುವ ಆಯುಧ

ಬ್ಯಾಲಿಸ್ಟಿಕ್ ಕ್ಷಿಪಣಿಗಳು ಎತ್ತರಕ್ಕೆ ಸಾಗಿ ದಾಳಿ ನಡೆಸಿದರೆ, ಕ್ರೂಸ್ ಕ್ಷಿಪಣಿಗಳು ಕೆಳ ಹಂತದಲ್ಲಿ ಹಾರುತ್ತವೆ. ಇವು ಬಹುತೇಕ ವಿಮಾನಗಳ ರೀತಿಯಲ್ಲಿ ಸಾಗುತ್ತವೆ. ಇವು ನಿಧಾನಗತಿಯಲ್ಲಿ ಸಾಗಿದರೂ, ಬಹಳ ನಿಖರವಾಗಿವೆ. ಇವು ಭೂಮಿಗೆ ಅತ್ಯಂತ ಸನಿಹದಲ್ಲಿ ಸಾಗುವುದರಿಂದ, ರೇಡಾರ್ ಕಣ್ಣಿಗೆ ಬೀಳುವುದಿಲ್ಲ.

ಇರಾನ್ ಬಳಿ ಹಳೆಯದಾದ, ಸೋವಿಯತ್ ನಿರ್ಮಾಣದ ಕೆಎಚ್-55 ಕ್ರೂಸ್ ಕ್ಷಿಪಣಿಗಳಿವೆ ಎನ್ನಲಾಗಿದ್ದು, ಇವನ್ನು ಉಕ್ರೇನಿನಿಂದ ಪಡೆದಿದೆ ಎಂದು ವರದಿಗಳು ಹೇಳಿವೆ. ಇವು ಅಂದಾಜು 3,000 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಇರಾನ್ ಇದೇ ವ್ಯಾಪ್ತಿಯಲ್ಲಿ ತನ್ನ ಸ್ವಂತ ಸೌಮಾರ್ ಕ್ರೂಸ್ ಕ್ಷಿಪಣಿಯನ್ನೂ ಅಭಿವೃದ್ಧಿ ಪಡಿಸಿದೆ. ಇನ್ನು ಯಾ ಆಲಿ ಕ್ಷಿಪಣಿ 700 ಕಿಲೋಮೀಟರ್ ದೂರದಲ್ಲಿನ ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ರಾಡ್ ಆ್ಯಂಟಿ ಶಿಪ್ ಕ್ಷಿಪಣಿಯನ್ನು ವಿಶೇಷವಾಗಿ ನೌಕಾಪಡೆಯ ಹಡಗುಗಳನ್ನು ನಾಶಪಡಿಸಲು ನಿರ್ಮಿಸಲಾಗಿದೆ.

ಜೂನ್ 2023ರಲ್ಲಿ, ಇರಾನ್ ತನ್ನ ಮೊದಲ ದೇಶೀಯ ನಿರ್ಮಾಣದ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಜಗತ್ತಿಗೆ ಪ್ರದರ್ಶಿಸಿತ್ತು. ಹೈಪರ್‌ಸಾನಿಕ್ ಕ್ಷಿಪಣಿ ಸದ್ಯ ಯುದ್ಧಗಳಲ್ಲಿ ಬಳಸುತ್ತಿರುವ ಯಾವುದೇ ಕ್ಷಿಪಣಿಯಿಂದ ಹೆಚ್ಚು ವೇಗದಲ್ಲಿ ಸಾಗುತ್ತದೆ. ಇಂತಹ ಕ್ಷಿಪಣಿಯನ್ನು ಈಗಾಗಲೇ ಬಳಕೆಯಲ್ಲಿರುವ ರಕ್ಷಣಾ ವ್ಯವಸ್ಥೆಗಳ ಮೂಲಕ ಹೊಡೆದುರುಳಿಸುವುದು ಬಹುತೇಕ ಅಸಾಧ್ಯ.

ಡ್ರೋನ್‌ಗಳು - ಆಗಸದ ಸಮೂಹ ದಾಳಿಕೋರರು

ಡ್ರೋನ್‌ಗಳು ಆಧುನಿಕ ಆಯುಧಗಳಾಗಿದ್ದು, ಯುದ್ಧದ ರೀತಿಯನ್ನೇ ಬದಲಿಸುತ್ತಿವೆ. ಭಾರತದ ಬಳಿ ಅಬಾಬಿಲ್-3, ಮೊಹಾಜೆರ್-6, ಶಾಹೆದ್-129, ಶಾಹೆದ್-136, ಶಾಹೆದ್-199, ಮತ್ತು ಕಮಾನ್-22 ರಂತಹ ಡ್ರೋನ್‌ಗಳ ಸಂಗ್ರಹವಿದೆ. ಇವುಗಳ ವ್ಯಾಪ್ತಿ 200ರಿಂದ ಬಹುತೇಕ 3,000 ಕಿಲೋಮೀಟರ್ ಇದೆ.

ಇವುಗಳ ಪೈಕಿ, ಶಾಹೆದ್-136, ಹದೀದ್-110, ಮತ್ತು ಅರಾಶ್ ಡ್ರೋನ್‌ಗಳನ್ನು ಒಂದೇ ಉದ್ದೇಶದಿಂದ ನಿರ್ಮಿಸಲಾಗಿದೆ. ಅದೇನೆಂದರೆ, ಗುರಿಯತ್ತ ಹಾರಿ, ಸ್ವತಃ ಸ್ಫೋಟಗೊಳ್ಳುವುದು. ಇವುಗಳನ್ನು ಹಾರಾಡುವ ಬಾಂಬ್‌ಗಳು ಎಂದುಕೊಳ್ಳಬಹುದು. ಇದರಲ್ಲಿ ಯಾವುದೇ ಪೈಲಟ್ ಇಲ್ಲ, ಮರಳಿ ತೆರಳುವುದೂ ಇಲ್ಲ. ಕೇವಲ ಗುರಿಯನ್ನು ತಲುಪೊ, ಸ್ಫೋಟಿಸುತ್ತದೆ.

ಇಸ್ರೇಲ್ ಮತ್ತು ಅಮೆರಿಕಗಳ ದಾಳಿಗೆ ತುತ್ತಾಗಿರುವ ಇರಾನ್, ಬಹರೇನ್ ಮತ್ತು ಕುವೈತ್‌ಗಳಲ್ಲಿರುವ ಅಮೆರಿಕನ್ ನೆಲೆಗಳನ್ನು ಗುರಿಯಾಗಿಸಿ, ಪ್ರತಿದಾಳಿ ನಡೆಸುವ ಮೂಲಕ ಪ್ರತಿಕ್ರಿಯೆ ನೀಡಿದೆ. ದುಬೈ, ದೋಹಾಗಳಲ್ಲಿನ ನಾಗರಿಕ ಪ್ರದೇಶಗಳ ಮೇಲೂ ದಾಳಿಯಾಗಿರುವ ವರದಿಗಳಿವೆ.

ಈ ಕದನ ನಮಗೇಕೆ ಮುಖ್ಯ?

ಶಕ್ತಿಶಾಲಿ ರಾಷ್ಟ್ರಗಳು ಪರಸ್ಪರರ ಮೇಲೆ ಕ್ಷಿಪಣಿಗಳನ್ನು ಉಡಾವಣೆಗೊಳಿಸಲು ಆರಂಭಿಸಿದಾಗ, ತೈಲ ಬೆಲೆ ಏರಿಕೆಯಾಗುತ್ತದೆ, ಜಾಗತಿಕ ಪೂರೈಕೆ ಸರಪಳಿ ವ್ಯತ್ಯಯವಾಗುತ್ತದೆ, ಮತ್ತು ಜಗತ್ತಿನಾದ್ಯಂತ ಉದ್ವಿಗ್ನತೆಗಳು ಹರಡುತ್ತವೆ. ಇದು ನಮ್ಮ ಜನಜೀವನದ ಮೇಲೂ ಪರಿಣಾಮ ಬೀರುತ್ತದೆ. ಏನಾಗುತ್ತಿದೆ ಎನ್ನುವುದನ್ನು ಕೇವಲ ರಕ್ಷಣಾ ತಜ್ಞರು ಮಾತ್ರ ಅರ್ಥ ಮಾಡಿಕೊಳ್ಳುವುದಲ್ಲ. ಇದು ನಮ್ಮೆಲ್ಲರಿಗೂ ಸಂಬಂಧಿಸಿದ ವಿಚಾರವೂ ಹೌದು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವೈಮಾನಿಕ ದಾಳಿಗಳನ್ನು ಹಿಮ್ಮೆಟ್ಟಿಸಿದ ಕುವೈತ್; ಏಕಾಂಗಿ ಆಯ್ತಾ ಇರಾನ್?

2028ರ ವಿಧಾನಸಭಾ ಚುನಾವಣೆ: Jds ಗೆ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ; ಸೀಟು ಹಂಚಿಕೆ ಬಗ್ಗೆ ವಿಜಯಪುರ ಜಿಲ್ಲಾ BJP ನಾಯಕರಲ್ಲಿ ಅಸಮಾಧಾನದ ದಳ್ಳುರಿ!

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!

IRGC ಪ್ರಧಾನ ಕಚೇರಿ ಧ್ವಂಸ! ಹಾವಿನ ತಲೆಯನ್ನು ಕತ್ತರಿಸಿದ್ದೇವೆ: ಅಮೆರಿಕ

ThinkEdu 2026: ಚೆನ್ನೈನಲ್ಲಿಂದು ಸಮಾವೇಶ ಆರಂಭ, 'ಆತ್ಮನಿರ್ಭರ ಭಾರತದ ಕನಸಿಗೆ ಶಿಕ್ಷಣವೇ ದಿಕ್ಕು' ಕುರಿತು ಗಂಭೀರ ಚರ್ಚೆ

SCROLL FOR NEXT