ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು- ಖಮೇನಿ- ಪ್ರಧಾನಿ ನರೇಂದ್ರ ಮೋದಿ online desk
ಅಂಕಣಗಳು

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

ಈ ಹಿಂದಿನ ಎರಡು ವಿಶ್ವಯುದ್ಧಗಳಲ್ಲಿ ಜಗತ್ತು ವಸಾಹತುಶಾಹಿ ವ್ಯವಸ್ಥೆಯಲ್ಲಿತ್ತು. ಹೀಗಾಗಿ ಇಂಗ್ಲೆಂಡಿನಂಥ ಪಾಶ್ಚಾತ್ಯ ಶಕ್ತಿಗೆ ತನ್ನ ಪರವಾಗಿ ಹೋರಾಡುವುದಕ್ಕೆ ಹಾಗೂ ಸಾಯುವುದಕ್ಕೆ ಜನಬಲವಿತ್ತು. ಆದರೆ ಈಗ...

ಸದ್ಯದ ಇರಾನ್ ಸಮರಾಂಗಣದ ಬಗ್ಗೆ ಟಿವಿಯಿಂದ ಹಿಡಿದು ಪಾಡ್ಕಾಸ್ಟ್ ಗಳವರೆಗೆ, ಪತ್ರಿಕೆಯಿಂದ ಹಿಡಿದು ಫೇಸ್ಬುಕ್ ಬರಹಗಳವರೆಗೆ ಎಲ್ಲರೂ ತಮ್ಮ ಅಭಿಪ್ರಾಯ, ಇಷ್ಟಾನಿಷ್ಟಗಳನ್ನು ದಾಖಲಿಸಿದ್ದಾಗಿದೆ. ಆ ಅಭಿಪ್ರಾಯಗಳ ಪಾಲಿಗೆ ಮತ್ತೊಂದನ್ನು ಸೇರಿಸುವುದಕ್ಕೆ ಹೋಗದೇ, ವ್ಯಕ್ತವಾಗಿರುವ ಅಭಿಪ್ರಾಯಗಳ ಪೈಕಿ ಯಾವುದರ ತರ್ಕದ ಅಡಿಪಾಯ ಗಟ್ಟಿ ಇಲ್ಲ ಎಂಬುದನ್ನಷ್ಟೇ ಇಲ್ಲಿ ಚರ್ಚಿಸೋಣ. ತೆರೆದ ಕಿಟಕಿಯ ಈ ಹಿಂದಿನ ಅಂಕಣಗಳನ್ನು ಓದಿದವರಿಗೆ ತಿಳಿದಿರುತ್ತದೆ, ಅಲ್ಲಿ ಇರಾನಿನಲ್ಲಿ ಆಡಳಿತ ಸೂತ್ರ ಬದಲಾವಣೆ ಬಹುತೇಕ ಖಚಿತ ಎಂದೇ ಪ್ರತಿಪಾದಿಸಲಾಗಿತ್ತು. ಮತ್ತದಕ್ಕೆ ತರ್ಕವನ್ನೂ ನೀಡಲಾಗಿತ್ತು. ಹೀಗಾಗಿ ಈಗಿನದ್ದೇನೂ ಅಚ್ಚರಿಯ ಬೆಳವಣಿಗೆ ಅಲ್ಲ. ಇದೀಗ ಯುದ್ಧ ತೆರೆದುಕೊಂಡಿರುವಾಗ ಅನೇಕ ಅಭಿಪ್ರಾಯಗಳ ಷರಾ ಬರೆಯಲಾಗುತ್ತಿದೆ. ಕೆಲವು ಜನಪ್ರಿಯ ಅಭಿಪ್ರಾಯಗಳು ಹಾಗೂ ಆ ಅಭಿಪ್ರಾಯಗಳು ಏಕೆ ನಿಜವಾಗಲಾರವು ಎಂಬುದಕ್ಕೆ ಕಾರಣಗಳನ್ನಷ್ಟೇ ಈ ವಾರ ನೋಡೋಣ.

ಇದು ಮೂರನೇ ಮಹಾಯುದ್ಧದ ಆರಂಭವಾ?

ಯಾವುದೇ ದೊಡ್ಡಮಟ್ಟದ ಸಂಘರ್ಷ ತೆರೆದುಕೊಂಡಾಗಲೂ ಹೀಗೊಂದು ವರ್ಲ್ಡ್ ವಾರ್ 3 ಎಂಬ ಪ್ರಶ್ನಾರ್ಥಕ ಚಿಹ್ನೆಯ ಹಣೆಪಟ್ಟಿ ಹಾಕಿ ವಿಡಿಯೊ ಮಾಡುವುದು, ಬರೆಯುವುದು ಎಲ್ಲ ಮಾಮೂಲಾಗಿಬಿಟ್ಟಿದೆ. ಯುದ್ಧ ವಾರ್ತೆ ಯಾವತ್ತೂ ರಮಣೀಯವಾಗಿರುತ್ತದೆ ಎಂಬ ಮಾತಿನಂತೆ ಇಂತಹ ಅಭಿಪ್ರಾಯಗಳಿಗೆ ಜನರ ಅನುಮೋದನೆಯೂ ಸುಲಭಕ್ಕೆ ಸಿಕ್ಕಿಬಿಡುತ್ತದೆ. ಆದರೆ, ಈ ಹಿಂದೆ ಎರಡು ವಿಶ್ವಯುದ್ಧಗಳಾಗಿರುವಂತೆ ಒಂದಿಷ್ಟು ಬಣಗಳು ಒಂದು ದೇಶದ ಬೆನ್ನಿಗೆ ಹಾಗೂ ಇನ್ನೊಂದಿಷ್ಟು ಬಣಗಳು ಮತ್ತೊಂದು ದೇಶದ ಬೆನ್ನಿಗೆ ನಿಂತು ಎರಡು ಧ್ರುವಗಳಲ್ಲಿ ಯುದ್ಧ ಮಾಡುವ ಜಮಾನಾವೇ ಮುಗಿದುಹೋಗಿದೆ. ಇದರರ್ಥ ಜಗತ್ತಿನಲ್ಲಿ ಸಂಘರ್ಷಗಳು ಕಡಿಮೆಯಾಗಿವೆ ಅಂತಲ್ಲ. ಆದರೆ, ಅತಿ ಚಿಕ್ಕ ದೇಶ ಸಹ ಇವತ್ತಿಗೆ ತನ್ನ ಹಿತಾಸಕ್ತಿ ಏನಿದೆ ಎಂದು ಯೋಚಿಸುತ್ತದೆ ಹೊರತು ಬಣಗಳಲ್ಲಿ ಗುರುತಿಸಿಕೊಳ್ಳುವುದಿಲ್ಲ. ಈಗಿರುವ ಸಂಘರ್ಷವನ್ನೇ ಗಮನಿಸಿ. ಸೌದಿ ಸೇರಿದಂತೆ ಹಲವು ಗಲ್ಫ್ ದೇಶಗಳು ಪ್ರಾರಂಭದಿಂದಲೂ ಇರಾನನ್ನು ಎದುರಾಳಿ ಎಂದೇ ನೋಡುತ್ತಿವೆಯಾದರೂ ಈ ವಿಷಯದಲ್ಲಿ ಬಹಿರಂಗವಾಗಿ ಅಮೆರಿಕ-ಇಸ್ರೇಲ್ ಜತೆ ಕೈಜೋಡಿಸುವ ಕೆಲಸ ಮಾಡಿಲ್ಲ. ಏಕೆಂದರೆ ದೀರ್ಘಾವಧಿಯಲ್ಲಿ ತಮ್ಮ ಆಂತರಿಕ ವ್ಯವಹಾರಗಳನ್ನು ಅಮೆರಿಕ ಹಾಗೂ ಇಸ್ರೇಲುಗಳ ಪ್ರಭಾವಕ್ಕೆ ಅತಿಯಾಗಿ ಒಪ್ಪಿಸುವುದಕ್ಕೆ ಅವಕ್ಕೆ ಇಷ್ಟವಿಲ್ಲ ಎಂಬ ಆಯಾಮ ಒಂದೆಡೆ ಆದರೆ, ತಮ್ಮ ಮುಸ್ಲಿಂ ಜನಸಂಖ್ಯೆಯನ್ನು ರಮಿಸಿ ಇಟ್ಟುಕೊಳ್ಳಬೇಕಾದ ಅಗತ್ಯವೂ ಈ ದೇಶಗಳಲ್ಲಿನ ರಾಜಾಡಳಿತಗಳಿಗಿದೆ. ಹಾಗೆಂದೇ, ಅವು ಅತ್ತಲೂ ಸೇರದೇ, ಇತ್ತಲೂ ಬರದೇ ಪರಿಸ್ಥಿತಿ ನಿಭಾಯಿಸಿಕೊಂಡಿವೆ.

ಈ ಹಿಂದೆ ಯುಎಸ್ಎಸ್ಆರ್ ವರ್ಸಸ್ ಅಮೆರಿಕ ಎಂಬ ವಿಷಯದಲ್ಲಾದಂತೆ ಪ್ರಸ್ತುತ ಜಗತ್ತಿನಲ್ಲಿ ದುಡ್ಡು ಖರ್ಚು ಮಾಡಲು ಸಿದ್ಧವಿರುವ ಎರಡು ಭಿನ್ನ ಬಣಗಳು ಈಗಿಲ್ಲ ಎಂಬುದೂ ಮೂರನೇ ವಿಶ್ವಯುದ್ಧ ಎಂಬಷ್ಟರಮಟ್ಟಿಗೆ ಯುದ್ಧ ವ್ಯಾಪಿಸಲಾರದೆಂಬುದಕ್ಕೆ ಇನ್ನೊಂದು ಕಾರಣ. ಅಮೆರಿಕಕ್ಕೆ ಸಹ ವೆನೆಜುವೆಲದಲ್ಲಾಗಲೀ, ಇರಾನಿನಲ್ಲಾಗಲೀ ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗಿಕೊಳ್ಳುವ ಸಂಪನ್ಮೂಲವು ಬದಲಾದ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿಯೇ ಅಧಿಕಾರಸ್ಥರನ್ನು ಅಪಹರಿಸುವ, ತಂತ್ರಜ್ಞಾನದ ಮೂಲಕ ಗುರಿ ನಿರ್ದೇಶಿತ ದಾಳಿಗಳನ್ನು ನಡೆಸಿ ಯುದ್ಧ ನಿರ್ದೇಶಿಸುವ ಮಾದರಿಗಳನ್ನೇ ಅದು ಆಯ್ದುಕೊಂಡಿದೆ.

ಈ ಹಿಂದಿನ ಎರಡು ವಿಶ್ವಯುದ್ಧಗಳಲ್ಲಿ ಜಗತ್ತು ವಸಾಹತುಶಾಹಿ ವ್ಯವಸ್ಥೆಯಲ್ಲಿತ್ತು. ಹೀಗಾಗಿ ಇಂಗ್ಲೆಂಡಿನಂಥ ಪಾಶ್ಚಾತ್ಯ ಶಕ್ತಿಗೆ ತನ್ನ ಪರವಾಗಿ ಹೋರಾಡುವುದಕ್ಕೆ ಹಾಗೂ ಸಾಯುವುದಕ್ಕೆ ಜನಬಲವಿತ್ತು. ಭಾರತದಿಂದಲೇ ಪ್ರಥಮ ವಿಶ್ವಯುದ್ಧದಲ್ಲಿ 80 ಸಾವಿರ ಯೋಧರು ಹಾಗೂ ಎರಡನೇ ವಿಶ್ವಯುದ್ಧದಲ್ಲಿ 87 ಸಾವಿರ ಸೈನಿಕರು ತಮ್ಮದಲ್ಲದ ಯುದ್ಧಗಳಿಗೆ ಪ್ರಾಣ ತೆತ್ತಿದ್ದಾರೆ. ಇವತ್ತಿಗೆ ಪಾಶ್ಚಾತ್ಯ ದೇಶಗಳಿಗೆ ಹೀಗೆ ತಮ್ಮ ಪರ ಸಾಯುವುದಕ್ಕೆ ಜನ ಇಲ್ಲದೇ ಇರುವುದರಿಂದ ವಿಶ್ವಯುದ್ಧವಾಗುವುದಿಲ್ಲ. ಅದೇನೇ ತಂತ್ರಜ್ಞಾನಾಧಾರಿತ ಸಮರದ ಯುಗವಿದು ಅಂದುಕೊಂಡರೂ ನೆಲದಲ್ಲಿ ನಿಂತು ಹೋರಾಡುವವರು ಬೇಕೇ ಬೇಕಾಗುತ್ತಾರೆ.

ಹೀಗಾಗಿ ಇನ್ನು ಮುಂದಿನದೆಲ್ಲ ಪ್ರಾಂತೀಯ ಯುದ್ಧಗಳೇ ಹೊರತು ವಿಶ್ವಯುದ್ಧಗಳಲ್ಲ. ಈ ಪ್ರಾಂತೀಯ ಯುದ್ಧ ಎಲ್ಲರಿಗೂ ಪರಿಣಾಮ ಬೀರುವುದು ಹೌದಾದರೂ ಯಾರೂ ಆ ಕಾರಣಕ್ಕಾಗಿ ಸಮರಾಂಗಣಕ್ಕೆ ಧುಮುಕುವ ಸ್ಥಿತಿ ಈಗಿಲ್ಲ.

ಇರಾನನ್ನು ಅಮೆರಿಕ - ಇಸ್ರೇಲ್ ತಪ್ಪಂದಾಜು ಮಾಡಿದವೇ?

ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹಾಗೂ ಮಾಧ್ಯಮಗಳಲ್ಲಿ ಕಾಣಸಿಗುತ್ತಿರುವ ಒಂದು ಅಭಿಪ್ರಾಯ ಎಂದರೆ, ಇರಾನ್ ತಿರುಗಿ ಕೊಡುತ್ತದೆ ಎಂಬ ಕಲ್ಪನೆಯೇ ಇಲ್ಲದೇ ಇಸ್ರೇಲ್ ಮತ್ತು ಅಮೆರಿಕಗಳು ಅಲ್ಲಿಗೆ ನುಗ್ಗಿಬಿಟ್ಟವು ಅನ್ನೋದು. ಇರಾನ್ ಸೌದಿ, ಯುಎಇ ಇತ್ಯಾದಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮಾಡಿದೆ. ಅಲ್ಲದೇ, ಅಮೆರಿಕದ ಯುದ್ಧವಿಮಾನಗಳು ಹಾಗೂ ಇಸ್ರೇಲಿ ನೆಲೆಗಳೂ ದಾಳಿಗೆ ಸಿಲುಕಿವೆ. ಈ ಉದಾಹರಣೆಗಳನ್ನಿಟ್ಟುಕೊಂಡು ಹೀಗೆ ವಾದ ಮಾಡಲಾಗುತ್ತಿದೆ. ಇರಾನ್ ತಾನು ಮುಳುಗುವುದಲ್ಲದೇ ಎಲ್ಲರನ್ನೂ ಮುಳುಗಿಸುತ್ತದೆ ನೋಡಿ, ತೈಲ ಸಾಗಣೆಯ ಹೊರ್ಮುಜ್ ಜಲಸಂಧಿಯನ್ನು ಇರಾನಿನ ಪಡೆಗಳು ಗೆರಿಲ್ಲಾ ಮಾದರಿಯಲ್ಲಿ ನಿಯಂತ್ರಿಸುತ್ತವೆ ಎಂದೆಲ್ಲ ಹೊಸಕತೆಗಳನ್ನು ಹೆಣೆಯಲಾಗುತ್ತಿದೆ.

ವಾಸ್ತವ ಏನೆಂದರೆ, ಒಮ್ಮೆ ಸಮರ ತೆರೆದುಕೊಂಡಮೇಲೆ ಅದೆಂಥ ಬಲಶಾಲಿಯೇ ಆದರೂ ಪ್ರತಿಘಾತಗಳನ್ನು ಪಡೆಯಲೇಬೇಕಾಗುತ್ತದೆ. ಇದನ್ನು ಎಷ್ಟು ಕಡಿಮೆ ಹಂತದಲ್ಲಿರಿಸಬಹುದು ಎಂಬುದಷ್ಟೇ ಕಾರ್ಯತಂತ್ರದ ವಿಷಯ. ಹೀಗಾಗಿ, ಇರಾನಿನ ಯಾವೆಲ್ಲ ಪ್ರತಿದಾಳಿಗಳು ನಮಗೆ ಅಚ್ಚರಿ ಎನಿಸುತ್ತಿವೆಯೋ ಅವ್ಯಾವವೂ ಇಸ್ರೇಲ್ - ಅಮೆರಿಕದ ಸಮರ ಯೋಜಕರಿಗೆ ಆಶ್ಚರ್ಯ ಇಲ್ಲವೇ ಆಘಾತದ ಸಂಗತಿ ಆಗಿರುವುದಿಲ್ಲ. ಅಷ್ಟರಮಟ್ಟಿಗೆ ತಾವು ಏಟು ತಿನ್ನಬೇಕಾಗುತ್ತದೆಂದು ನಿರೀಕ್ಷೆ ಇಟ್ಟುಕೊಂಡೇ ಯಾವುದೇ ದೇಶ ಹೆಜ್ಜೆ ಇಟ್ಟಿರುತ್ತದೆ. ಅಲ್ಲದೇ, ಅದನ್ನು ಮುಂದಿನ ಹಂತಗಳಲ್ಲಿ ಹೇಗೆ ನಿಭಾಯಿಸಬೇಕೆಂಬ ಎಲ್ಲ ಯೋಜನೆಗಳು ಇದ್ದಿರುತ್ತವೆ.

ಗಮನಿಸಬೇಕಾದ ಸಂಗತಿ ಎಂದರೆ, ಇವೆಲ್ಲ ಆರಂಭವಾಗಿದ್ದು 2023ರ ಅಕ್ಟೋಬರಿನಲ್ಲಿ ಇಸ್ರೇಲಿನ ಮೇಲೆ ಹಮಾಸ್ ದಾಳಿ ಆದಾಗಿನಿಂದ. ಅವತ್ತು ಇರಾನ್ ತಾನೇ ಅದನ್ನು ಮಾಡಿದ್ದಾಗಿ ಬೀಗಿಕೊಂಡಾಗಿನಿಂದ ಇಸ್ರೇಲ್ ಥರಹೇವಾರಿ ಪ್ರತಿ ಆಕ್ರಮಣಗಳನ್ನೆಲ್ಲ ನಡೆಸಿ, ಪೇಜರ್ ಸ್ಫೋಟದಂಥ ಊಹಿಸಲಾಗದ ಕಾರ್ಯತಂತ್ರದ ಮೂಲಕ ಇರಾನ್ ಪ್ರೇರಿತ ಹಿಜ್ಬುಲ್ಲಾಗಳನ್ನು ಮಟ್ಟಹಾಕಿ, ಇರಾನಿನ ಆಯಕಟ್ಟಿನ ಸ್ಥಾನಗಳಲ್ಲಿರುವವರನ್ನೆಲ್ಲ ಅವರವರ ಬೆಡ್ರೂಮಿನಲ್ಲೇ ಕೊಂದು, ಕೊನೆಯದಾಗಿ ಖಮೇನಿಯನ್ನು ಮುಗಿಸಿದೆ ಅಷ್ಟೆ.

ಇಲ್ಲೆಲ್ಲ ಹೆಜ್ಜೆ ಹೆಜ್ಜೆಗೂ ಅದು ಅತಿ ಖಚಿತ ಇಂಟೆಲಿಜೆನ್ಸ್ ಕಲೆ ಹಾಕಿದ್ದರಿಂದಲೇ ಯಶಸ್ಸು ದೊರೆತಿರುವುದು. ಅಂದಮೇಲೆ ಜಗತ್ತಿಗೇ ಗೊತ್ತಿರುವ ಇರಾನಿನ ಕ್ಷಿಪಣಿ ಹಾಗೂ ಡ್ರೋನ್ ಸಾಮರ್ಥ್ಯಗಳನ್ನೆಲ್ಲ ಅದು ಲೆಕ್ಕಕ್ಕೆ ತೆಗೆದುಕೊಳ್ಳದೇ ಮುನ್ನುಗ್ಗಿದೆ ಎಂದು ವಾದಿಸುವುದು ವಿಶ್ಲೇಷಕರ ದಡ್ಡತನವನ್ನಷ್ಟೇ ತೋರಿಸಬಲ್ಲದಷ್ಟೆ. ತನ್ನ ಮೇಲೆ ಸಣ್ಣ ಗೀರೂ ಆಗದೇ ಯಾರೋ ಯುದ್ಧ ಮುಗಿಸಿಬಿಟ್ಟರೆಂಬುದು ಇತಿಹಾಸದಲ್ಲೇ ಇಲ್ಲ. ಇಸ್ರೇಲ್ - ಅಮೆರಿಕಗಳಿಗೆ ಅಂಥ ಪ್ರತಿಘಾತಗಳು ಇರಾನಿನ ಪಡೆಗಳಿಂದ ಆಗುವುದು ನಿರೀಕ್ಷಿತವೇ. ಅದನ್ನಿಟ್ಟುಕೊಂಡು ಯುದ್ಧಗತಿಯೇ ಬದಲಾಗಿಹೋಯಿತೆಂದು ವಿಶ್ಲೇಷಿಸುವುದಕ್ಕೆ, ಊಹಿಸುವುದಕ್ಕೆ ಸದ್ಯಕ್ಕಂತೂ ಕಾರಣಗಳಿಲ್ಲ. ಹಾಗೆಂದು ಭವಿಷ್ಯದಲ್ಲಿ ಅಮೆರಿಕ ಇರಾನ್ ಅನ್ನು ಸಂಪೂರ್ಣ ನಿಯಂತ್ರಿಸುವುದು ಸುಲಭದ ಮಾತೇನಲ್ಲ. ಆದರೆ, ಮತಗುರು ಮತ್ತವರ ಹಿಡಿತದ ಸೇನೆ ಹಾಗೂ ಆಡಳಿತವಂತೂ ಬಲ ಕಳೆದುಕೊಳ್ಳುವುದು ಸ್ಪಷ್ಟ.

ಭಾರತದ ನಿಲುವೇ ಅಸ್ಪಷ್ಟ?

ಇರಾನಿನ ಈಗಿನ ಆಡಳಿತ ಭಾರತದ ಮಟ್ಟಿಗೆ ಸ್ನೇಹಮಯಿಯೇ ಆಗಿತ್ತು ಎಂದು ವಾದಿಸುವುದರಿಂದ ಹಿಡಿದು, ಅಮೆರಿಕವು ಇರಾನಿನಲ್ಲಿ ನೆಲೆ ನಿಲ್ಲುವುದು ಭಾರತಕ್ಕೆ ಹಿನ್ನಡೆ ಎನ್ನುವವರೆಗೆ ಹಲವು ಬಗೆಯಲ್ಲಿ ವಿಶ್ಲೇಷಿಸಿದವರಿದ್ದಾರೆ. ವಿಷಯವಿಷ್ಟೇ. ಭಾರತ ಈಗ ಎಲ್ಲ ಕಡೆಯಿಂದಲೂ ಚೌಕಾಶಿ ಮಾಡಬಲ್ಲ ಹಂತದಲ್ಲಿದೆ. ಅಫಘಾನಿಸ್ತಾನದಲ್ಲಿ ತಾಲಿಬಾನ್ ಮರಳಿ ಅಧಿಕಾರಕ್ಕೆ ಬಂದಾಗ ಅಲ್ಲಿ ಭಾರತದ ಪಾತ್ರವೇ ಇಲ್ಲವಾಗಿ ಹೋಯಿತು ಎಂಬ ವಿಶ್ಲೇಷಣೆಗಳು ಬಂದವು. ಪಾಕಿಸ್ತಾನವೇ ಅಲ್ಲಿ ತನ್ನ ತಂತ್ರ ಸಾಧಿಸಿತು ಎಂದೆಲ್ಲ ಹೇಳಲಾಗಿತ್ತು. ಆದರೆ, ವರ್ಷ ಕಳೆಯುವಷ್ಟರಲ್ಲಿ ಅದೇ ತಾಲಿಬಾನ್ ಆಡಳಿತದೊಂದಿಗೆ ಭಾರತವು ಸಾಧಿಸಿರುವ ಸಮತೋಲನ ಎಂಥಾದ್ದೆಂಬುದು ಈಗ ಕಣ್ಣ ಮುಂದೆಯೇ ಇದೆ. ಇರಾನ್ ವಿಚಾರದಲ್ಲಿ ಅಷ್ಟೇ, ಕಪ್ಪು-ಬಿಳುಪು ಎನ್ನುವ ರೀತಿ ವರ್ಗೀಕರಣ ಸಾಧ್ಯವಿಲ್ಲ. ಭಾರತದ ಜತೆ ವ್ಯವಹಾರ ಇರಿಸಿಕೊಳ್ಳುತ್ತಲೇ ಕಾಶ್ಮೀರ, ಸಿಎಎ ವಿಚಾರಗಳಲ್ಲೆಲ್ಲ ಭಾರತವನ್ನು ಖಮೇನಿ ಖಂಡಿಸಿದ್ದಿದೆ. ಚಬಹಾರ್ ಬಂದರಿನಲ್ಲಿ ಭಾರತವನ್ನು ಬಿಟ್ಟುಕೊಳ್ಳುತ್ತಲೇ ಅತ್ತ ಚೀನಾಕ್ಕೆ ಮಣೆ ಹಾಕಿದ್ದೂ ಆಗಿದೆ. ಹೀಗಿರುವಾಗ ಭಾರತವೂ ಕಾಲಕ್ಕೆ ತಕ್ಕಂತೆ ತನ್ನ ನಡೆಗಳನ್ನು ನಿರ್ಧರಿಸಿದೆ. ಸೌದಿ, ಯುಎಇಗಳ ಮೇಲಾಗುತ್ತಿರುವ ದಾಳಿಗೆ ಪ್ರಧಾನಿ ಬಹಿರಂಗವಾಗಿ ಆತಂಕ ಸೂಚಿಸುತ್ತ, ಅಲ್ಲಿನ ಭಾರತೀಯರ ಹಿತ ಕಾಪಾಡುವ ನಿಟ್ಟಿನಲ್ಲಿ ಅಲ್ಲಿನ ಆಡಳಿತ ಪ್ರಮುಖರೊಂದಿಗೆ ಮಾತಾಡಿದ್ದನ್ನು ಜಗತ್ತಿಗೆ ತೋರಿಸಿಕೊಂಡಿದ್ದಾರೆ. ಆದರೆ ಖಮೇನಿ ಸಾವಿಗೆ ಸಂತಾಪ ಸೂಚಿಸುವುದಕ್ಕೇನೂ ಹೋಗಿಲ್ಲ.

ಭವಿಷ್ಯದಲ್ಲಿ ಇರಾನಿನಲ್ಲಿ ಯಾರೇ ಕುಳಿತರೂ ಭಾರತ ಅವರೊಂದಿಗೆ ವ್ಯವಹರಿಸಲಿದೆ. ಏಕೆಂದರೆ ಅಲ್ಲಿ ಕೇವಲ ಅಮೆರಿಕದ ಪಾತ್ರ ಮಾತ್ರ ಇರುವುದಿಲ್ಲ, ಜತೆಗೆ ಇಸ್ರೇಲಿನ ಮಾತೂ ನಡೆಯುತ್ತದೆ. ಸಂಘರ್ಷ ತೆರೆದುಕೊಳ್ಳುವ ಎರಡು ದಿನ ಮುಂಚೆ ಭಾರತದ ಪ್ರಧಾನಿ ಇಸ್ರೇಲಿನಲ್ಲಿದ್ದದ್ದು, ಇವೆಲ್ಲ ಆರಂಭವಾಗುವುದಕ್ಕೆ ತಿಂಗಳು ಮುಂಚೆ ಯುಎಇ ಮುಖ್ಯಸ್ಥ ತರಾತುರಿಯಿಂದ ಭಾರತಕ್ಕೆ ಬಂದು ರಕ್ಷಣಾ ಸಹಭಾಗಿತ್ವವನ್ನು ಸಹ ಮಾಡಿಕೊಂಡು ಹೋಗಿರುವುದು, ಯುಎಇ- ಸೌದಿ - ಇಸ್ರೇಲ್ -ಯುರೋಪ್ ಒಳಗೊಂಡಂತೆ 2023ರಲ್ಲಿ ಭಾರತವು ಐಮೆಕ್ ವ್ಯಾಪಾರ ರಹದಾರಿ ನೀಲನಕ್ಷೆ ಬಿಚ್ಚಿಟ್ಟದ್ದು… ಇಂಥವೆಲ್ಲವೂ ಈಗ ನಡೆಯುತ್ತಿರುವುದನ್ನು ಯಾವತ್ತೋ ಮುಂಗಾಣಿಸಿಕೊಂಡು ಭಾರತದ ಸಹಭಾಗಿತ್ವದಲ್ಲಿ ಹಲವು ದೇಶಗಳು ವ್ಯೂಹಾತ್ಮಕವಾಗಿ ಸಿದ್ಧವಾಗಿರುವುದನ್ನು ಸಾರಿ ಹೇಳುತ್ತಿವೆ. ಇರಾನಿನ ಸಮರಭೂಮಿಯಲ್ಲಿ ನಮಗೆ ಈ ಕ್ಷಣಕ್ಕೆ ಅನಿರೀಕ್ಷಿತ, ಅಚ್ಚರಿ, ಆತಂಕ ಎನಿಸಿಕೊಳ್ಳುತ್ತಿರುವ ಯಾವ ಸಂಗತಿಗಳೂ ಭಾರತವೂ ಸೇರಿದಂತೆ ಪ್ರಮುಖ ದೇಶಗಳ ಅಧಿಕಾರಸ್ಥರ ಪಾಲಿಗೆ ಹಾಗೇನಲ್ಲ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ನಿರ್ಮೂಲನೆ ಮಾಡುತ್ತೇವೆ: ಇಸ್ರೇಲ್ ಬೆದರಿಕೆ

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

Israel-Iran war: Dohaದಲ್ಲಿ ಸಿಲುಕಿದ Indian basketball team, ತಂಡದಲ್ಲಿದ್ದಾರೆ ಮೂವರು ಕನ್ನಡಿಗರು..!

SCROLL FOR NEXT