ಇಸ್ರೇಲ್-ಇರಾನ್ ಯುದ್ಧ online desk
ಅಂಕಣಗಳು

ಯುದ್ಧ ಒಂದು ಪರಿಣಾಮ ಹಲವು! (ಹಣಕ್ಲಾಸು)

ಯುದ್ಧ ಬಹಳಷ್ಟು ಸಮಯ ಮುಂದುವರಿದರೆ , ಸಮಾಜದಲ್ಲಿನ ಸ್ಥಿತಿವಂತರು ಮತ್ತು ಬುದ್ದಿವಂತರು ಬೇರೆ ಕಡೆಗೆ ಕೆಲಸ ಮತ್ತು ಬದುಕು ಹುಡುಕಿಕೊಂಡು ಹೋಗುತ್ತಾರೆ.

ಅಮೆರಿಕಾದ ಫೆಡರಲ್ ಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ವಿವಿಧ ದೇಶಗಳ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆ ತಪ್ಪು ಮತ್ತು ಅದನ್ನು ಆಯಾ ದೇಶಗಳಿಗೆ ವಾಪಸ್ಸು ನೀಡಬೇಕು ಎನ್ನುವ ಆದೇಶ ಹೊರಡಿಸಿದ್ದು ಎಲ್ಲರಿಗು ಗೊತ್ತಿರುವ ವಿಷಯ . ಕೋರ್ಟು ಆದೇಶದ ಮೇಲೆ ಕೊಡಬೇಕಾದ ಹಣದ ಮೊತ್ತ 130 ಬಿಲಿಯನ್ ಅಂದರೆ ಸರಿ ಸುಮಾರು ಹನ್ನೊಂದು ಸಾವಿರ ಎಪ್ಪತ್ತು ಲಕ್ಷ ಕೋಟಿ ರೂಪಾಯಿ ಭಾರತೀಯ ರೂಪಾಯಿ. ಇಷ್ಟು ದೊಡ್ಡ ಮೊತ್ತವನ್ನು ನೀಡಲು ಅಮೇರಿಕಾ ಸರಕಾರದ ಬಳಿ ಹಣವಿಲ್ಲ ಎನ್ನುವುದು ಇವತ್ತಿನ ಕಟು ಸತ್ಯ. ಹೀಗಾಗಿ ಹಣವನ್ನು ಮರಳಿ ನೀಡಲು ಕೋರ್ಟು ನೀಡಿರುವ ಸಮಯ ಸಾಲುವುದಿಲ್ಲ , ಅದನ್ನು ಹೇಗಾದರೂ ಮಾಡಿ ಇನ್ನಷ್ಟು ಮುಂದೂಡಬೇಕು ಎನ್ನುವ ಟ್ರಂಪ್ ಸರಕಾರದ ಎಲ್ಲಾ ಕಸರತ್ತುಗಳು ಸೋತಿವೆ.

ಫೆಡರಲ್ ಕೋರ್ಟ್ ತಕ್ಷಣ ಹಣ ವಾಪಸ್ಸು ನೀಡುವಂತೆ ಹೇಳಿದೆ. ಹೀಗಾಗಿ ಟ್ರಂಪ್ ಸರಕಾರ ಹಾಕಿದ್ದ ಎಲ್ಲಾ ದಾವೆಗಳೂ ನೆಲ ಕಚ್ಚಿವೆ. ಹಣವನ್ನು ವಾಪಸ್ಸು ನೀಡುವುದು ಅನಿವಾರ್ಯವಾಗಿದೆ. ಹಣ ನೀಡಬೇಕು ಎಂದರೆ ಅದನ್ನು ಪ್ರಿಂಟ್ ಮಾಡಿ ನೀಡಬೇಕು ಅಷ್ಟೇ. ಅಮೇರಿಕಾ ಸರಕಾರ ಹೊಸದಾಗಿ ಇಷ್ಟು ಹಣವನ್ನು ಮುದ್ರಿಸಿ ಯಾವ ದೇಶಗಳಿಂದ ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸಿತ್ತು ಅದನ್ನು ವಾಪಸ್ಸು ಮಾಡಲಿದೆ.

ಈ ರೀತಿ ಹೆಚ್ಚುವರಿ ಹಣವನ್ನು ಮುದ್ರಿಸಿ ವಾಪಸ್ಸು ನೀಡುವುದರಿಂದ ಅಮೇರಿಕಾದಲ್ಲಿ ಇನ್ನಷ್ಟು ಹಣದುಬ್ಬರ ಹೆಚ್ಚಾಗಲಿದೆ. ಮುಂದಿನ ಒಂದು ವರ್ಷದಲ್ಲಿ ಡಾಲರಿನ ಮೌಲ್ಯ ಬೇರೆಲ್ಲಾ ದೇಶಗಳ ಮುಂದೆ ಕರೆಕ್ಷನ್ ಆಗಲೇಬೇಕು. ಅನ್ಯ ಮಾರ್ಗವಿಲ್ಲ. ಅಂದರೆ ಡಾಲರಿನ ಮೌಲ್ಯ ಕುಸಿತವನ್ನು ತಪ್ಪಿಸುವುದು ಅಸಾಧ್ಯ ಎನ್ನುವ ಮಟ್ಟಕ್ಕೆ ಡಾಲರ್ ಕುಸಿತ ಈಗಾಗಲೇ ಕಂಡಿದೆ. ಕುಸಿಯುತ್ತಿರುವ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಈಗಿರುವುದು ಒಂದೇ ಮಾರ್ಗ. ಅದೇ ನೇರ ಯುದ್ಧದ ಮಾರ್ಗ. ತೆರಿಗೆ ಯುದ್ಧ , ಬೆಲೆ ಯುದ್ಧ , ವ್ಯಾಪಾರ ಯುದ್ಧ ಹೀಗೆ ಎಲ್ಲಾ ತರಹದ ಯುದ್ದದಲ್ಲೂ ಅಮೇರಿಕಾ ಸೋತಿರುವುದು ನಿಚ್ಚಳ. ಹೀಗಾಗಿ ಅದರ ಮುಂದಿರುವುದು ನೇರ ಯುದ್ಧಕ್ಕೆ ನಿಲ್ಲುವುದು. ಇವತ್ತಿಗೂ ಜಗತ್ತಿನ ಅತ್ಯಂತ ಬಲಶಾಲಿ ಮಿಲಿಟರಿ , ನೌಕೆ ಮತ್ತು ವಾಯುಬಲವನ್ನು ಹೊಂದಿರುವುದು ಅಮೇರಿಕಾ ಎನ್ನುವುದು ನೆನಪಿರಲಿ . ಹೀಗಾಗಿ ಅದು ಇದೀಗ ನೇರ ಯುದ್ಧಕ್ಕೆ ಇಳಿದಿದೆ.

ಇರಾನ್ ಮೇಲಿನ ದಾಳಿ ಆಗಿ ಇಂದಿಗೆ ನಾಲ್ಕು ದಿನ. ಆದರೆ ಇದರ ಮೇಲೆ ದಾಳಿ ಮಾಡುವ ಹುನ್ನಾರ ಮಾತ್ರ ವರ್ಷಗಳಿಂದ ಸಾಗುತ್ತಿತ್ತು ಎನ್ನುವುದು ನಿರ್ವಿವಾದ. ಈ ರೀತಿಯ ಯುದ್ಧಕ್ಕೆ ಪ್ರಥಮ ದಿನದಲ್ಲೇ ಸರಿಸುಮಾರು 800, ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಖರ್ಚು ಮಾಡಿದೆ. ಹೆಚ್ಚುವರಿ ತೆರಿಗೆ ಸಂಗ್ರಹಣೆ ವಾಪಸ್ಸು ನೀಡಲು ಹಣವಿಲ್ಲ ಎಂದು ಕೋರ್ಟಿನ ಮುಂದೆ ಹೆಚ್ಚಿನ ಸಮಯ ಕೇಳಿ ಅಂಗಲಾಚುವ ಟ್ರಂಪ್ ಯುದ್ಧಕೆ ಮಾತ್ರ ನೀರಿನಂತೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಯುದ್ಧ ಮುಗಿಯುವುದರಲ್ಲಿ ಇವುಗಳ ಲೆಕ್ಕಾಚಾರ ಹುಬ್ಬೇರಿಸಿವಷ್ಟು ಆಗಿರುತ್ತದೆ. ಯುದ್ದಕ್ಕಾಗಿ ಅಮೇರಿಕಾ ಇಷ್ಟೊಂದು ಹಣವನ್ನು ಏಕೆ ಖರ್ಚು ಮಾಡುತ್ತದೆ ? ಮೊದಲಿಗೆ ಅದು ವೆನಿಜುವೆಲಾ ದೇಶವನ್ನು ಆಕ್ರಮಿಸಿ ಅಲ್ಲಿನ ತೈಲ ನಿಕ್ಷೇಪವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈಗ ಅದು ಇರಾನ್ ಮೇಲೆ ದಾಳಿ ಮಾಡಿದೆ. ಆದರೆ ವೆನಿಜುವೆಲಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಷ್ಟು ಸುಲಭ ತುತ್ತಲ್ಲ ಇರಾನ್ ಎನ್ನುವುದು ಕೂಡ ಅವರಿಗೆ ಗೊತ್ತು. ಸ್ವತಃ ಟ್ರಂಪ್ ಈ ಯುದ್ಧ ಮುಗಿಯಲು 4 ರಿಂದ 5 ವಾರ ಬೇಕಾಗುತ್ತದೆ ಎಂದಿದ್ದಾರೆ. ಅದು ತಿಂಗಳುಗಳು ಎಳೆದಾಡುವ ಸಾಧ್ಯತೆ ಇದೀಗ ನಿಚ್ಚಳವಾಗಿದೆ.

ಇರಾನ್ ಮೇಲೆ ಕೂಡ ನಿಯಂತ್ರಣ ಹೊಂದಿದರೆ ಆಗ ಅದು ಚೀನಾಕ್ಕೆ ಚೆಕ್ ಮೇಟ್ ನೀಡಿದಂತಾಗುತ್ತದೆ. ಚೀನಾಗೆ ತೈಲ ಸರಬರಾಜು ಮಾಡುವ ಎರಡು ದೇಶಗಳ ಮೇಲೆ ಅಮೇರಿಕಾ ನಿಯಂತ್ರಣ ಹೊಂದಿದಾಗ ಅದು ಚೀನಾವನ್ನು ಮಣಿಸಬಹುದು . ಚೀನಾ ಜಗತ್ತಿನ ಬಹುದೊಡ್ಡ ಭಾಗದ ರೇರ್ ಅರ್ಥ್ ಮೆಟೀರಿಯಲ್ ಹೊಂದಿದೆ. ಅದು ಈ ರೇರ್ ಅರ್ಥ್ ಮೆಟೀರಿಯಲ್ ನೀಡಲಿದ್ದಿದ್ದರೆ ಜಗತ್ತಿನ ಬಹುತೇಕ ತಯಾರಿಕಾ ಘಟಕಗಳು ಖಾಲಿ ಹೊಡೆಯಲು ಶುರು ಮಾಡುತ್ತವೆ. ಇವತ್ತಿನ ದಿನದಲ್ಲಿ ಜಗತ್ತು ಪೂರ್ಣವಾಗಿ ಅಲ್ಲದಿದ್ದರೂ ಚೀನಾದ ಮೇಲೆ ಒಂದಲ್ಲ ಒಂದು ಕಾರಣಕ್ಕೆ ಅವಲಂಬಿತವಾಗಿವೆ . ಹೀಗಾಗಿ ಅಮೇರಿಕಾ ನೇರವಾಗಿ ಚೀನಾದ ಜೊತೆಗೆ ಸಂಘರ್ಷಕ್ಕೆ ಇಳಿಯುವ ಬದಲು ಅಪರೋಕ್ಷವಾಗಿ ಚೀನಾವನ್ನು ಪ್ರಚೋದಿಸುತ್ತಿದೆ. ಹಾಗೆ ನೋಡಲು ಹೋದರೆ ಚೀನಾ ಮತ್ತು ರಷ್ಯಾ ಎರಡೂ ದೇಶಗಳಿಗೆ ಇರಾನ್ ಮಿತ್ರ ದೇಶವಾಗಿದೆ. ಹೀಗಿದ್ದೂ ಕೂಡ ರಷ್ಯಾ ಅಥವಾ ಚೀನಾ ಇರಾನಿನ ರಕ್ಷಣೆಗೆ ಬಂದಿಲ್ಲ. ಯುದ್ಧವೆಂದರೆ ಅದು ಬಹಳಷ್ಟು ಹಣ ಬೇಡುತ್ತದೆ. ಇದರ ಜೊತೆಗೆ ಸಾವು ನೋವುಗಳ ಲೆಕ್ಕಾಚಾರ ಬೆಲೆ ಕಟ್ಟಲಾಗುವುದಿಲ್ಲ. ರಷ್ಯಾ ಈಗಾಗಲೇ ವರ್ಷಗಳಿಂದ ಉಕ್ರೈನ್ ಜೊತೆ ಯುದ್ದದಲ್ಲಿ ಬಸವಳಿದಿದೆ. ಅದು ಯುದ್ಧಕ್ಕೆ ಪ್ರವೇಶ ನೀಡುವ ಸಾಧ್ಯತೆ ಕಡಿಮೆ. ಇನ್ನು ಚೀನಾ ನೀಡಿದ ಯುದ್ದೋಪಕರಣಗಳು ಹೇಳಿಕೊಳ್ಳುವ ಗುಣಮಟ್ಟದಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ್ ಮಾಡಿದ ಸಮಯದಲ್ಲೂ ಈ ಮಾತುಗಳು ಕೇಳಿ ಬಂದಿದ್ದವು.

ಚೀನಾ ಅಥವಾ ಅಮೇರಿಕಾ ಎರಡೂ ದೇಶಗಳು ಬೇರೆ ದೇಶಗಳಿಗೆ ಮಾರುವ ಯುದ್ದೋಪಕರಣಗಳು ಉತ್ತಮಗುಣಮಟ್ಟದಾಗಿರುವುದಿಲ್ಲ. ಅವರ ಪಾಲಿಸಿ ಶತ್ರುವನ್ನು ಈ ರೀತಿಯ ಉಪಕರಣವಿದೆ ಎಂದು ಹೆದರಿಸುವುದೇ ಆಗಿರುತ್ತದೆ . ಆದರೆ ಅದು ನಿಜವಾಗಿ ಅಷ್ಟು ಸಾಮರ್ಥ್ಯದಿಂದ ಕೆಲಸ ಮಾಡುವುದಿಲ್ಲ ಎನ್ನುವ ಸತ್ಯವನ್ನು ಕೂಡ ಈ ಯುದ್ಧಗಳು ತೆರೆದಿಸಿರಿಸಿವೆ.

ಗಮನಿಸಿ ನೋಡಿ ಅಮೇರಿಕಾ ಶುರು ಮಾಡಿದ ಅಭಿವೃದ್ಧಿ ಆಟದಲ್ಲಿ ಅದಕ್ಕೆ ಸರಿಸಮನಾಗಿ ಅಥವಾ ಅದಕ್ಕಿಂತ ಚನ್ನಾಗಿ ಈ ಕಲೆಯನ್ನು ಕರಗತ ಮಾಡಿಕೊಂಡ ದೇಶಗಳು ಅಮೆರಿಕಾವನ್ನು ಹಿಂದಿಕ್ಕುವ ಸಾಧ್ಯತೆಗಳು ಹೆಚ್ಚಾಗಿವೆ. ಅಮೇರಿಕಾ ವಿತ್ತ ಜಗತ್ತಿನ ರಾಜನಾಗಿ ಮೆರೆಯಲು ಕಾರಣವಾಗಿದ್ದು ಡಾಲರ್ . ಅಂತಹ ಡಾಲರ್ ಕೂಡ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಅಮೇರಿಕಾ ಇಂದಿಗೂ ಮಿಲಿಟರಿ ಶಕ್ತಿಯ ಲೆಕ್ಕಾಚಾರದಲ್ಲಿ ಜಗತ್ತಿಗೆ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ತನ್ನ ಹಿರಿಯಣ್ಣನ ಸ್ಥಾನವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಅದು ಯುದ್ಧಕ್ಕೆ ಮುಂದಾಗಿದೆ . ಅಮೇರಿಕಾ ಮುಂದೆ ಬೇರೆ ಯಾವುದೇ ಆಯ್ಕೆಯಿಲ್ಲ. ಇದು ಚೀನಾಕ್ಕೆ ಚನ್ನಾಗಿ ಗೊತ್ತಿದೆ. ಅದು ಸದ್ಯಕ್ಕೆ ಯುದ್ಧಕ್ಕೆ ಬರುವ ಸಾಧ್ಯತೆ ಕಡಿಮೆ. ತಿಂಗಳುಗಟ್ಟಲೆ ಇರಾನಿನ ಮೇಲೆ ಯುದ್ಧ ಮಾಡಿ ಅಮೇರಿಕಾ ಸಾಕಪ್ಪ ಎನ್ನುವ ವೇಳೆಗೆ ಅದು ಯುದ್ಧಕ್ಕೆ ಎಂಟ್ರಿ ಕೊಡಬಹುದು. ಇಲ್ಲವೇ ಅದು ಕೂಡ ಪಕ್ಕದ ತೈವಾನ್ ಆಕ್ರಮಿಸಿ ಕೊಳ್ಳಬಹುದು. ಇವತ್ತಿನ ದಿನಗಳಲ್ಲಿ ಇಂತಹುದು ಆಗುವುದಿಲ್ಲ ಎಂದು ನಿಖರವಾಗಿ ಹೇಳಲಾಗುವುದಿಲ್ಲ.

ಯುದ್ಧದ ಸಮಯದಲ್ಲಿ ನಮ್ಮ ಉತ್ಪತ್ತಿ ಮೊದಲಿನಂತಿರಲು ಸಾಧ್ಯವಿಲ್ಲ. ಸಪ್ಪ್ಲೈ ಚೈನ್ ಕುಸಿತ ಸಹಜವಾಗೇ ಉಂಟಾಗುತ್ತದೆ. ಇದರಿಂದ ನಾವು ಬಯಸಿದ ಉತ್ಪನ್ನಗಳ ತಯಾರಿಕೆಯಲ್ಲಿ ಕುಸಿತ ಉಂಟಾಗುತ್ತದೆ. ಸಮಾಜದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಪೂರೈಕೆ ಕಡಿಮೆಯಾಗುತ್ತದೆ. ಹೀಗಾಗಿ ಬೆಲೆಗಳು ಏರಿಕೆಯಾಗಲು ಶುರುವಾಗುತ್ತದೆ. ಕೆಲಸ ಮತ್ತು ಗಳಿಕೆಯಲ್ಲಿ ಕುಸಿತವಾಗುತ್ತದೆ. ಗಮನಿಸಿ ಆದಾಯ ಕಡಿಮೆಯಾಗುತ್ತದೆ ಅದೇ ಸಮಯದಲ್ಲಿ ಖರ್ಚು ದುಪ್ಪಟಾಗುತ್ತದೆ. ಹೀಗಾಗಿ ಸಮಾಜದಲ್ಲಿ ಸಮತೋಲನ ಕೆಡುತ್ತದೆ. ಇದು ನಿಧಾನವಾಗಿ ಆಂತರಿಕ ಯುದ್ಧ , ಏರುಪೇರುಗಳಿಗೂ ಕಾರಣವಾಗುತ್ತದೆ. ಟ್ರಂಪ್ ಹುನ್ನಾರ ಕೂಡ ಇದೆ ಇರುತ್ತದೆ. ಐದಾರು ವಾರದಲ್ಲಿ ದೇಶವನ್ನು ಹಾಳುಗೆಡವಿ ಬಿಟ್ಟರೆ ಸಾಕು ಆ ನಂತರ ಹೆಚ್ಚಿನ ಖರ್ಚಿಲ್ಲದೆ ಆಂತರಿಕ ಯುದ್ಧ ಶುರುವಾಗುತ್ತದೆ. ಅದಕ್ಕೆ ಫಂಡ್ ಮಾಡಿದರೆ ಸಾಕು.

ಯುದ್ಧ ಬಹಳಷ್ಟು ಸಮಯ ಮುಂದುವರಿದರೆ , ಸಮಾಜದಲ್ಲಿನ ಸ್ಥಿತಿವಂತರು ಮತ್ತು ಬುದ್ದಿವಂತರು ಬೇರೆ ಕಡೆಗೆ ಕೆಲಸ ಮತ್ತು ಬದುಕು ಹುಡುಕಿಕೊಂಡು ಹೋಗುತ್ತಾರೆ. ಇದರಿಂದ ಸಮಾಜಕ್ಕೆ ತುಂಬಲಾಗದ ನಷ್ಟ ಉಂಟಾಗುತ್ತದೆ. ಗಮನಿಸಿ ಒಬ್ಬ ಉತ್ತಮ ವೈದ್ಯ , ವಿಜ್ಞಾನಿ ಅಥವಾ ಶಿಕ್ಷಕನನ್ನು ತಯಾರಿಸಲು ಕೆಲವೊಮ್ಮೆ 50 ರಿಂದ 100 ವರ್ಷ ತಗಲುತ್ತದೆ. ಹೀಗಿದ್ದೂ ಅದೇ ಗುಣಮಟ್ಟದ ಪ್ರೊಫೆಷನಲ್ ತಯಾರು ಮಾಡಲು ಸಾಧ್ಯವಾಗುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಮತ್ತೆ ಯುದ್ಧಕ್ಕೆ ಮುಂಚಿನ ಸಮಾಜ ಕಟ್ಟಲು ಸಾವಿರಾರು ಕೋಟಿ ಹಣ ಖರ್ಚಾಗುತ್ತದೆ.

ಯುದ್ಧದ ಪರಿಣಾಮ ಒಂದು ದಿನ , ತಿಂಗಳು ಮತ್ತು ವರ್ಷಕ್ಕೆ ಸೀಮಿತವಲ್ಲ. ಯುದ್ಧದ ಭೀಕರತೆ ಮೇಲೆ ಅದು ಕೆಲವೊಮ್ಮೆ ಒಂದೆರೆಡು ತಲೆಮಾರುಗಳನ್ನು ಕೂಡ ಕಾಡುತ್ತದೆ. ಇದರ ಜೊತೆಗೆ ರಿಕವರಿ ಗೆ ತಗಲುವ ಸಮಯವನ್ನು ನಾವು ಇಷ್ಟೇ ಎಂದು ಖಂಡಿತ ಹೇಳಾಗುವುದಿಲ್ಲ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಣುಬಾಂಬಿಗೆ ತುತ್ತಾದ ಜಪಾನ್ ಮತ್ತೆ ಹಿರೋಷಿಮಾದಲ್ಲಿ ಬದುಕು ಕಟ್ಟಿಕೊಳ್ಳಲು ಎರಡೂವರೆಯಿಂದ ಮೂರು ದಶಕ ಬೇಕಾಯ್ತು. ಅದೂ ಕೂಡ ಜಪಾನಿಗರು ಎಲ್ಲವನ್ನೂ ಮರೆತು ಪೂರ್ಣಪ್ರಮಾಣವಾಗಿ ದೇಶ ಕಟ್ಟಲು ಒಂದಾಗಿ ನಿಂತದ್ದಕ್ಕೆ , ಇಲ್ಲವಾದಲ್ಲಿ ರಿಕವರಿಗೆ 50 ವರ್ಷ ಬೇಕಾಗುತ್ತಿತ್ತು.ಇರಾನ್ ಮತ್ತೊಂದು ಇರಾಕ್ ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

ಕೊನೆಮಾತು: ಅಮೆರಿಕಕ್ಕೆ ತನ್ನ ಹಿರಿಯಣ್ಣನ ಸ್ಥಾನ ಉಳಿಸಿಕೊಳ್ಳಬೇಕು , ಇಸ್ರೇಲಿಗೆ ತನ್ನ ಅಕ್ಕಪಕ್ಕದ ಶತ್ರುಗಳನ್ನು ನಿತ್ರಾಣ ಮಾಡಬೇಕು , ತನ್ನ ಪ್ರದೇಶದ ವ್ಯಾಪ್ತಿ ಹೆಚ್ಚಿಸಿಕೊಳ್ಳಬೇಕು. ಮಿತ್ರ ದೇಶವಾದರೂ ಇರಾನಿನ ಸಹಾಯಕ್ಕೆ ರಷ್ಯಾ ಮತ್ತು ಚೀನಾ ಬರುತ್ತಿಲ್ಲ. ಜಾಗತಿಕ ವಿತ್ತ ಜಗತ್ತು ಕಂಪ್ಯೂಟರ್ ಭಾಷೆಯನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ . ಅಂದರೆ ಈ ಭಾಷೆ ಬೈನರಿ. ಕಂಪ್ಯೂಟರಿಗೆ ಸೊನ್ನೆ ಮತ್ತು ಒಂದು ಬಿಟ್ಟು ಬೇರೇನೂ ಗೊತ್ತಾಗುವುದಿಲ್ಲ. ಜಾಗತಿಕ ವಿತ್ತ ಜಗತ್ತಿನ ಆಟದಲ್ಲಿ ಲಾಭ ಮತ್ತು ನಷ್ಟ ಎರಡೇ ಅರ್ಥವಾಗುವ ಪದಗಳು. ಹೆಚ್ಚುವರಿ ಸಂಗ್ರಹಿಸಿದ ತೆರಿಗೆ ಹಣ ವಾಪಸ್ಸು ಮಾಡಲು ಹಣವಿಲ್ಲ ಎಂದ ಟ್ರಂಪ್ ಸರಕಾರ , ಯುದ್ಧದಲ್ಲಿ ಮಾತ್ರ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಖರ್ಚು ಮಾಡಿದ್ದಕ್ಕಿಂತ ದುಪಟ್ಟು ಗಳಿಸುವ ಆಲೋಚನೆಯಿಂದ ಮಾತ್ರ ಈ ಖರ್ಚು ಮಾಡುತ್ತಿದ್ದಾರೆ. ಜಗತ್ತಿನ ಜನರಿಗೆ ಧರ್ಮದ ನರೇಟಿವ್ ಬಿಟ್ಟು ಬೇರೇನೂ ಅರ್ಹವಾಗುವುದಿಲ್ಲ. ಅವರ ಹುನ್ನಾರಗಳು ನಿಂತಿರುವುದು ಧರ್ಮದ ಮೇಲಲ್ಲ. ಕೇವಲ ಲಾಭ , ನಷ್ಟದ ಲೆಕ್ಕಾಚಾರ ಮೇಲೆ ಮಾತ್ರ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US–Iran conflict| ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ; 6ನೇ ದಿನಕ್ಕೆ ಕಾಲಿಟ್ಟ ಯುದ್ಧ –ಡೊನಾಲ್ಡ್ ಟ್ರಂಪ್ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಸೆನೆಟ್ ವಿಫಲ

'ಮಧ್ಯಪ್ರಾಚ್ಯ ಸಂಘರ್ಷ: ಇರಾನ್ ಯುದ್ಧಕ್ಕೆ ನಾನು 10ಕ್ಕೆ 15 ಅಂಕ ಕೊಡುತ್ತೇನೆ, ಅಮೆರಿಕಾ ಈಗ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ': Donald Trump

ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯಿಂದ ರಾಜ್ಯಕ್ಕೆ ಭಾರೀ ಆದಾಯ, ಆದಾಯ ಗುರಿ 45,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ..!

'ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಬೆಲೆ ಬೆಲೆ ಏರಿಕೆ ಭೀತಿ, ಪೆಟ್ರೋಲ್ ಬಂಕ್‌'ಗಳಿಗೆ ಮುಗಿಬಿದ್ದ ಜನ..!

ಸಿಎಂ ಕುರ್ಚಿ ಕದನ ಮಧ್ಯೆ ಡಿಕೆಶಿಯಿಂದ ಮಾ.10ಕ್ಕೆ ಡಿನ್ನರ್ ಪಾರ್ಟಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುತ್ತಾರಾ ಡಿಸಿಎಂ?

SCROLL FOR NEXT