ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭುಗಿಲೆದ್ದಿದೆ. ಈ ಯುದ್ಧ ಭಾರತದ ಗಡಿಗಳಿಂದ ಸಾಕಷ್ಟು ದೂರದಲ್ಲಿದ್ದು, ನಮ್ಮ ದೈನಂದಿನ ಚಿಂತೆ, ಆತಂಕಗಳಿಂದಲೂ ದೂರದಲ್ಲಿದೆ. ಆದರೆ, ಒಂದು ವಿಚಾರವನ್ನು ಮಾತ್ರ ಯಾರೂ ಭಾರತೀಯರಿಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ಅದೇನೆಂದರೆ, ಯುದ್ಧ ಮೌನವಾಗಿಯೇ ನಮ್ಮ ಮನೆಗೆ, ಅಡುಗೆ ಮನೆಗೆ, ನಮ್ಮ ಹೊಲ - ತೋಟಗಳಿಗೆ, ಮತ್ತು ನಮ್ಮ ಕಾರ್ಖಾನೆಗಳಿಗೆ ಬರುತ್ತಿದೆ. ಅದು ಬರುತ್ತಿರುವುದು ನಮ್ಮ ಕಣ್ಣಿಗೆ ಕಾಣದಿರಬಹುದು. ಆದರೆ, ಅದು ನಮ್ಮ ಅನುಭವಕ್ಕೆ ಖಂಡಿತಾ ಬರುತ್ತದೆ.
ಅದು ಹೇಗೆ? ನಮ್ಮ ಮೇಲೆ ಈ ಯುದ್ಧದ ಪರಿಣಾಮಗಳೇನು ಎನ್ನುವುದನ್ನು ಈ ಲೇಖನದಲ್ಲಿ ಗಮನಿಸೋಣ.
ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಇರಾಕ್ ಮತ್ತು ಇರಾನ್‌ಗಳಂತಹ ದೇಶಗಳನ್ನು ಒಳಗೊಂಡಿರುವ ಪಶ್ಚಿಮ ಏಷ್ಯಾ ಕೇವಲ ಜಗತ್ತಿನ ಪೆಟ್ರೋಲ್ ಪಂಪ್ ಮಾತ್ರವೇ ಅಲ್ಲ. ಬದಲಿಗೆ, ಇದು ಭಾರತ ಅಪಾರವಾಗಿ ಅವಲಂಬಿತವಾಗಿರುವ ಕಚ್ಚಾವಸ್ತುಗಳ ದಾಸ್ತಾನೂ ಹೌದು. 2025ರ ಒಂದೇ ವರ್ಷದಲ್ಲಿ ಭಾರತ ಈ ಪ್ರದೇಶದಿಂದ ಬಹುತೇಕ 8.3 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಖಂಡಿತಾ ಸಣ್ಣ ಸಂಖ್ಯೆಯಲ್ಲ. ಇದು ನಾವು ಪ್ರತಿದಿನವೂ ಬಳಸುವ ಅದೆಷ್ಟೋ ವಸ್ತುಗಳಿಗೆ ಇದೇ ಬುನಾದಿಯಾಗಿದೆ.
ಈಗ, ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳು ಗಲ್ಫ್ ಪ್ರಾಂತ್ಯದಾದ್ಯಂತ ಇಂಧನ ಘಟಕಗಳ ಮೇಲೆ ದಾಳಿ ಎಸಗುತ್ತಿವೆ. ಹಡಗುಗಳು ಹೊರ್ಮುಸ್ ಜಲಸಂಧಿಯ ಮೂಲಕ ಹಾದು ಹೋಗಲು ಹೆದರುವಂತಾಗಿದೆ. ಹೊರ್ಮುಸ್ ಜಲಸಂಧಿ ಎನ್ನುವುದು ಒಂದು ಕಿರಿದಾದ ಸಮುದ್ರ ಮಾರ್ಗವಾಗಿದ್ದು, ಇದರ ಮೂಲಕ ಜಗತ್ತಿನ ಬಹುಪಾಲು ತೈಲ ಮತ್ತು ಅನಿಲ ಸಾಗಾಣಿಕೆಯಾಗುತ್ತದೆ. ಈಗ ಹೊರ್ಮುಸ್ ಜಲಸಂಧಿ ಭಾರೀ ಅಪಾಯಕ್ಕೆ ಸಿಲುಕಿದೆ. ಒಂದು ವೇಳೆ ಈ ಮಾರ್ಗ ಏನಾದರೂ ಮುಚ್ಚಲ್ಪಟ್ಟರೆ, ಇದರ ಪರಿಣಾಮ ಕೇವಲ ಪೆಟ್ರೋಲ್ ದರದ ಮೇಲೆ ಮಾತ್ರ ಉಂಟಾಗುವುದಿಲ್ಲ. ಅದರ ಪರಿಣಾಮಗಳು ಇನ್ನಷ್ಟು ಆಳ, ಗಂಭೀರವಾಗಿರಲಿವೆ.
ಭಾರತ ತನ್ನ 68% ಸುಣ್ಣಕಲ್ಲನ್ನು ಪಶ್ಚಿಮ ಏಷ್ಯಾದಿಂದಲೇ ಪಡೆಯುತ್ತದೆ. ಈ ಸುಣ್ಣಕಲ್ಲು ಸಿಮೆಂಟ್ ತಯಾರಿಕೆಯ ಬಹುಮುಖ್ಯ ಕಚ್ಚಾವಸ್ತುವಾಗಿದೆ. ಸಿಮೆಂಟ್ ಇಲ್ಲದಿದ್ದರೆ, ಕಟ್ಟಡ ನಿರ್ಮಾಣ ಸಾಧ್ಯವಿಲ್ಲ. ಒಂದು ವೇಳೆ ಸಿಮೆಂಟ್ ಲಭ್ಯವಿದ್ದರೂ, ಅದರ ಬೆಲೆಗಳು ಗಗನಕ್ಕೇರಲಿವೆ. ಗೋಡೆಗಳ ಪ್ಲಾಸ್ಟರಿಂಗ್ ಮಾಡಲು ಬಳಸುವ, ಫಾಲ್ಸ್ ಸೀಲಿಂಗ್‌ಗೆ ಬಳಕೆಯಾಗುವ, ಮನೆಗೆ ಸುಗಮವಾದ ಫಿನಿಶಿಂಗ್ ನೀಡುವ ಜಿಪ್ಸಂ ಸಹ 62% ಪಶ್ಚಿಮ ಏಷ್ಯಾದಿಂದಲೇ ಬರುತ್ತದೆ. ಒಂದು ವೇಳೆ ಹಡಗುಗಳು ನಿಲುಗಡೆಯಾದರೆ, ನಮ್ಮ ಕನಸಿನ ಮನೆ ನಿರ್ಮಾಣ ಯೋಜನೆಯೂ ಸ್ಥಗಿತಗೊಳ್ಳಬಹುದು. ಅಥವಾ, ಮನೆ ನಿರ್ಮಾಣ ಬೆಲೆ ಹೆಚ್ಚಳವಾಗಿ, ಜೇಬಿಗೆ ಹೆಚ್ಚಿನ ಬಿಸಿ ಮುಟ್ಟಿಸಬಹುದು.
ಭಾರತ ತನ್ನ ಬಹುತೇಕ 65% ಗಂಧಕವನ್ನು ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಗಂಧಕ ಎನ್ನುವುದು ನಾವು ನಮ್ಮ ದೈನಂದಿನ ಜೀವನದಲ್ಲಿ ನೋಡುವ, ಅಥವಾ ಸ್ಪರ್ಶಿಸುವ ವಸ್ತುವಲ್ಲ. ಆದರೆ, ಅದು ರಸಗೊಬ್ಬರ ನಿರ್ಮಾಣಕ್ಕೆ ಬಳಕೆಯಾಗುವ ಗಂಧಕಾಮ್ಲದ ತಯಾರಿಕೆಗೆ ಬಳಕೆಯಾಗುತ್ತದೆ. ರಸಗೊಬ್ಬರಗಳು ನಮ್ಮ ಬೆಳೆಗಳಿಗೆ ಆಹಾರವಾದರೆ, ಬೆಳೆಗಳು ನಮಗೆ ಆಹಾರ ಒದಗಿಸುತ್ತವೆ. ಒಂದು ವೇಳೆ ಗಂಧಕದ ಪೂರೈಕೆಯಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ವ್ಯತ್ಯಯವಾದರೆ, ಭಾರತದಲ್ಲಿನ ಫಾಸ್ಪೇಟ್ ರಸಗೊಬ್ಬರ ಉತ್ಪಾದನೆಗೂ ಹೊಡೆತ ಬೀಳುತ್ತದೆ.
ಇದೇ ವೇಳೆ, ಒಂದೊಮ್ಮೆ ಎಲ್ಎನ್‌ಜಿ ಅಥವಾ ಗಂಧಕದ ಪೂರೈಕೆಯಲ್ಲಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯತ್ಯಯ ಉಂಟಾದರೆ, ಯೂರಿಯಾ ಮತ್ತು ಫಾಸ್ಫೇಟ್ ರಸಗೊಬ್ಬರ ಸೇರಿದಂತೆ, ಭಾರತದ ಒಟ್ಟಾರೆ ರಸಗೊಬ್ಬರ ಉತ್ಪಾದನೆಗೆ ತೊಂದರೆ ಎದುರಾಗಲಿದೆ. ಇದರಿಂದ ಮುಂದಿನ ಬೆಳೆ ಅವಧಿಗೆ ರೈತರು ತೊಂದರೆಗೆ ಸಿಲುಕಲಿದ್ದಾರೆ.
ಭಾರತದಲ್ಲಿ ಯೂರಿಯಾ ಕೊರತೆ ಉಂಟಾದರೆ, ರೈತರಿಗೆ ಮುಂದಿನ ಬೆಳೆ ಕಾಲಕ್ಕೆ ತೊಂದರೆ ಉಂಟಾಗುತ್ತದೆ. ಯಾವಾಗ ರೈತರಿಗೆ ಬೆಳೆ ಬೆಳೆಯಲು ಕಷ್ಟವಾಗುತ್ತದೋ, ಆಗ ಆಹಾರ ಬೆಲೆಯೂ ಏರುತ್ತದೆ. ಆಹಾರ ಉತ್ಪನ್ನಗಳ ಬೆಲೆ ಹೆಚ್ಚಳವಾದಾಗ ಅದು ನೇರವಾಗಿ ನಮ್ಮ ತಿಂಗಳ ಖರ್ಚು ವೆಚ್ಚದ ಮೇಲೆಯೇ ಪರಿಣಾಮ ಬೀರುತ್ತದೆ. ಅದರಲ್ಲೂ ಆದಾಯ ಕಡಿಮೆಯಿದ್ದು, ಮನೆ ವೆಚ್ಚ ಕಷ್ಟಕರ ಎನ್ನುವ ಪರಿಸ್ಥಿತಿ ಇದ್ದರೆ, ಮನೆ ನಿಭಾಯಿಸುವುದು ಕಷ್ಟವಾಗುತ್ತದೆ.
ಭಾರತ ಉಕ್ಕು ತಯಾರಿಕೆಗೆ ಬೇಕಾಗುವ ಪ್ರಮುಖ ಕಚ್ಚಾ ವಸ್ತುವಾದ ಡೈರೆಕ್ಟ್ ರೆಡ್ಯೂಸ್ಡ್ ಐರನ್ನಿನ 59%ವನ್ನು ಪಶ್ಚಿಮ ಏಷ್ಯಾದಿಂದಲೇ ಪಡೆಯುತ್ತದೆ. ಉಕ್ಕು ಇಂದು ಎಲ್ಲೆಡೆಯೂ ಬಳಕೆಯಾಗುತ್ತಿದೆ. ನಿರ್ಮಾಣವಾಗುತ್ತಿರುವ ಕಟ್ಟಡಗಳ ತೊಲೆಗಳಿಂದ, ನಗರಗಳ ಮೂಲಭೂತ ಅಭಿವೃದ್ಧಿ ಯೋಜನೆಗಳು, ವಾಹನಗಳ ಬಿಡಿಭಾಗಗಳು, ಯಂತ್ರೋಪಕರಣಗಳು, ಎಲ್ಲಕ್ಕೂ ಉಕ್ಕು ಅತ್ಯವಶ್ಯಕವಾಗಿದೆ. ಸುಣ್ಣಕಲ್ಲು, ಡಿಆರ್‌ಐನಂತಹ ವಸ್ತುಗಳಿಗೆ ಬೇರೆ ಪರ್ಯಾಯ ಆಯ್ಕೆ ಲಭಿಸಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದು, ತೈಲ ಮತ್ತು ಅನಿಲದ ಅನಿಯಂತ್ರಿತ ಬೆಲೆ ಏರಿಕೆ ನಿಜಕ್ಕೂ ತಲೆನೋವಿನ ವಿಚಾರವಾಗಿದೆ. ಬಹಳಷ್ಟು ಉಕ್ಕಿನ ಘಟಕಗಳು ಎಲ್‌ಪಿಜಿ ಮತ್ತು ಎಲ್ಎನ್‌ಜಿ ಬಳಸಿ ಕಾರ್ಯಾಚರಿಸುತ್ತವೆ. ಅನಿಲ ದರ ಹೆಚ್ಚಳವಾದಾಗ, ಉಕ್ಕಿನ ತಯಾರಿಕಾ ವೆಚ್ಚವೂ ಹೆಚ್ಚಾಗಿ, ಅಂತಿಮವಾಗಿ ಆ ದರದ ಹೊರೆ ಗ್ರಾಹಕರ ಹೆಗಲೇರುತ್ತದೆ.
ಭಾರತದ ವಜ್ರ ಕತ್ತರಿಸುವ, ಹೊಳಪು ನೀಡುವ ಉದ್ಯಮ ವಿಶೇಷವಾಗಿ ಗುಜರಾತಿನಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಆದರೆ, ಇದಕ್ಕೆ ಕಚ್ಚಾ ವಜ್ರದ 40% ಪಶ್ಚಿಮ ಏಷ್ಯಾದಿಂದಲೇ ಬರುತ್ತಿದೆ. ಒಂದು ವೇಳೆ ಕದನದ ಪರಿಣಾಮವಾಗಿ ವ್ಯಾಪಾರಕ್ಕೆ ತೊಂದರೆ ಉಂಟಾದರೆ, ಈ ಉದ್ಯೋಗಿಗಳಿಗೆ ಮೊದಲ ಹೊಡೆತ ಬೀಳುತ್ತದೆ. ಉದ್ಯೋಗ ಕಡಿತ ಉಂಟಾಗಿ, ಆದಾಯವೂ ನಶಿಸುತ್ತದೆ.
ಭಾರತ ಈಗಾಗಲೇ ಹೊಂದಾಣಿಕೆ ನಡೆಸುತ್ತಿದೆ. ತೈಲ ಸಂಸ್ಕರಣಾಗಾರಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಹೆಚ್ಚಿನ ತೈಲ ಖರೀದಿಸುತ್ತಿವೆ. ರಸಗೊಬ್ಬರ ಕಂಪನಿಗಳು ಗಂಧಕಕ್ಕಾಗಿ ಆಗ್ನೇಯ ಏಷ್ಯಾದತ್ತ ಮುಖ ಮಾಡಿವೆ. ಸುಣ್ಣಕಲ್ಲನ್ನು ಥೈಲ್ಯಾಂಡ್ ಅಥವಾ ವಿಯೆಟ್ನಾಂನಿಂದಲೂ ತರಬಹುದು. ಆದರೆ, ಈ ರೀತಿ ಪರ್ಯಾಯ ವ್ಯವಸ್ಥೆಗಳನ್ನು ಹೊಂದಲು ಹೆಚ್ಚಿನ ಸಮಯ ಹಿಡಿಯುತ್ತದೆ, ಸಾಗಾಣಿಕಾ ದರವೂ ಹೆಚ್ಚಾಗುತ್ತದೆ. ರಾತ್ರೋರಾತ್ರಿ ಪಶ್ಚಿಮ ಏಷ್ಯಾಗೆ ಬದಲಿ ಆಯ್ಕೆ ಸಂಪಾದಿಸಲು ಸಾಧ್ಯವಿಲ್ಲ.
ಈಗ ಭಾರತದಲ್ಲಿ ಬೆಳೆ ತೆಗೆಯುವ ಕಾಲ ಅಲ್ಲದ್ದರಿಂದ ರಸಗೊಬ್ಬರ ವಲಯ ಕೊಂಚ ನಿರಾಳವಾಗಿದೆ. ಆದರೆ, ತಜ್ಞರು ಸ್ಪಷ್ಟವಾಗಿ ಎಚ್ಚರಿಕೆ ನೀಡುತ್ತಿದ್ದು, ಈ ರೀತಿಯ ಪೂರೈಕೆ ವ್ಯತ್ಯಯ ಒಂದು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿದರೆ, ಮುಂದಿನ ಬೆಳೆಯ ಅವಧಿಗೆ ಭಾರೀ ಸಮಸ್ಯೆ ಎದುರಾಗಲಿದೆ. ಅಂದರೆ, ಪಂಜಾಬಿನ ರೈತರು, ಮಹಾರಾಷ್ಟ್ರದ ತರಕಾರಿ ಬೆಳೆಗಾರರು, ಆಂಧ್ರ ಪ್ರದೇಶ, ಕರ್ನಾಟಕದ ಭತ್ತ ಬೆಳೆಗಾರರು, ಎಲ್ಲರಿಗೂ ವೆಚ್ಚ ಹೆಚ್ಚಾಗಲಿದೆ. ಆದರೆ, ಕೃಷಿಯ ಆದಾಯ ಹೆಚ್ಚಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಇಲ್ಲಿ ನಾವು ನೇರವಾಗಿಯೇ ಹೇಳಬೇಕಾದ ಸತ್ಯವೊಂದಿದೆ. ಯುದ್ಧಗಳು ಅವು ಆರಂಭಗೊಂಡ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗುವುದಿಲ್ಲ. ಅವುಗಳು ವ್ಯಾಪಾರ ಮಾರ್ಗಗಳ ಮೂಲಕ, ಹಡಗು ಮಾರ್ಗಗಳ ಮೂಲಕ, ಸ್ಥಳೀಯ ಮಾರುಕಟ್ಟೆಗಳಲ್ಲಿ ವಸ್ತುಗಳ ಬೆಲೆಯ ಮೂಲಕ, ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತವೆ.
ಬೆಲೆ ಹೆಚ್ಚಾಗುವ ಪ್ರತಿಯೊಂದು ಇಟ್ಟಿಗೆ, ವಿಳಂಬವಾಗುವ ರಸಗೊಬ್ಬರ, ಹೆಚ್ಚಾಗುವ ವಿದ್ಯುತ್ ದರ, ಇವೆಲ್ಲವೂ ಕೇವಲ ಆರ್ಥಿಕ ಅಂಕಿ ಸಂಖ್ಯೆಗಳಲ್ಲ. ಇವು ಈಗಾಗಲೇ ಕಠಿಣ ಬಜೆಟ್‌ನಲ್ಲಿ, ಹೆಚ್ಚುತ್ತಿರುವ ವೆಚ್ಚದಲ್ಲಿ, ಮತ್ತು ಅನಿಶ್ಚಿತ ಭವಿಷ್ಯದ ಚಿಂತೆಯಲ್ಲಿ ಜೀವನ ನಡೆಸುತ್ತಿರುವ ಸಾಮಾನ್ಯ ಕುಟುಂಬಗಳ ಪಾಲಿಗೆ ನೈಜ ಹೊರೆಯಾಗಲಿವೆ.
ಈಗ ಯುದ್ಧ ನಮ್ಮಿಂದ ದೂರದಲ್ಲಿರಬಹುದು. ಆದರೆ, ಅದರ ಕರಿ ನೆರಳು ಈಗಾಗಲೇ ನಮ್ಮ ಮೇಲೆ ನಿಧಾನವಾಗಿ, ಮೌನವಾಗಿ, ಮತ್ತು ಖಚಿತವಾಗಿ ಬೀಳಲಾರಂಭಿಸಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com