ಇರಾನ್ ಏಕೆ ಮುಸ್ಲಿಂ ರಾಷ್ಟ್ರಗಳೇ ಆದ ಸೌದಿ, ಯುಎಇಗಳ ಮೇಲೆಲ್ಲ ಬಾಂಬ್ ಹಾಕುತ್ತಿದೆ ಎಂಬ ಪ್ರಶ್ನೆಗೆ ಅದಾಗಲೇ ವಿಶ್ಲೇಷಣೆಗಳು ಬಂದಿವೆ. ಇದು ಜಗತ್ತೆಲ್ಲ ಸೇರಿ ಯುದ್ಧ ವಿರಾಮಕ್ಕೆ ಅಮೆರಿಕ ಹಾಗೂ ಇಸ್ರೇಲ್ ಗಳ ಮೇಲೆ ಒತ್ತಡ ಹೇರುವಂತೆ ಮಾಡುತ್ತಿರುವ ಪ್ರಯತ್ನ ಎಂಬುದು ಪ್ರಮುಖ ಅಭಿಮತ. ಅದು ತಾರ್ಕಿಕವೇ ಹೌದು. ಆದರೆ, ಇದರಾಚೆಗೆ ಇತಿಹಾಸ ಹೇಳುತ್ತಿರುವ ಸತ್ಯ ಏನೆಂದರೆ ಈ ವಿಭಜನೆ ಯಾವತ್ತಿಗೂ ಇರುವ ಸಹಜ ವಿದ್ಯಮಾನ ಎನ್ನುವುದು.
ಮರುಭೂಮಿಯಲ್ಲಿ ಹುಟ್ಟಿ ಹೆಣ್ಣು-ಹೊನ್ನುಗಳೆಲ್ಲದರ ಬರ ಕಂಡಿದ್ದ ಮತವೊಂದು ಪ್ರಾರಂಭಿಕವಾಗಿ ತನ್ನ ದಾಹ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಜಗತ್ತನ್ನು ಆವರಿಸಿಕೊಂಡ ರೀತಿ ಎಲ್ಲರಿಗೂ ಹೆದರಿಕೆ ಹುಟ್ಟಿಸುವಂಥದ್ದೇ. ಅತ್ಯಂತ ಹಿಂಸಾತ್ಮಕ ನೆನಪುಗಳನ್ನು ಹೊತ್ತಿರುವ ನಮ್ಮ ಹತ್ತಿರದ ಚರಿತ್ರೆಯೂ ಹೌದದು. ಇದು ಇಸ್ಲಾಂ ಒಂದು ಏಕಬಲ ಎಂಬ ಗ್ರಹಿಕೆಯನ್ನು ಹೆಚ್ಚಿನವರ ಮಸ್ತಿಷ್ಕದಲ್ಲಿ ಬಿತ್ತಿತು.
ಹಾಗೆ ನೋಡಿದರೆ ಪ್ರವಾದಿಯವರ ಮರಣದ ನಂತರವೇ ಈ ಮತ ಕೇಂದ್ರಿತ ರಾಜಕೀಯ ಅಧಿಕಾರದ ಬಗ್ಗೆ ಅಂತರ್ಯುದ್ಧಗಳು ಪ್ರಾರಂಭವಾಗಿದ್ದವು. ಆದರೆ, ಕಾಫಿರರನ್ನು ಗೆಲ್ಲುವ ಉತ್ಕರ್ಷದಲ್ಲಿ ಅದರ ರಾಜಕಾರಣವು ತನ್ನೊಳಗಿನ ಸಂಘರ್ಷಗಳನ್ನು ಸಂಭಾಳಿಸಿಕೊಂಡು ಜಗತ್ತಿನೆಲ್ಲೆಡೆ ತನ್ನ ಅತಿ ಕ್ರೂರ ಪದಾಘಾತಗಳನ್ನು ಮಾಡಿತು. ಯಾವಾಗ ಈ ಮತವು ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಿತೋ ಆಗ ಅದರ ವಾಸ್ತವಗಳು ಬದಲಾದವು. ಇವತ್ತಿಗೆ ತೆರೆದುಕೊಂಡಿರುವ ಇರಾನ್ - ಇಸ್ರೇಲ್ ಸಂಘರ್ಷವು ಒಂದು ಗ್ರಹಿಕೆಯನ್ನು ಹುಡಿಮಾಡಿಬಿಟ್ಟಿದೆ. ಜಗತ್ತಿನಲ್ಲಿರುವ ತನ್ನ ಮತಸ್ಥರನ್ನೆಲ್ಲ ಒಂದುಗೂಡಿಸಿಬಿಡುವ ಅತಿ ಸದೃಢ ಉಮ್ಮಾ ವ್ಯವಸ್ಥೆಯೊಂದು ಈ ಮತದಲ್ಲಿ ಇದೆ ಎಂಬ ಗ್ರಹಿಕೆಯನ್ನು ವರ್ತಮಾನದ ಯುದ್ಧವು ಅಲ್ಲಾಡಿಸಿದೆ.
ಖಲೀಫತ್ ಕಾಲದಲ್ಲೇ ಇಸ್ಲಾಂ ಸಾಮ್ರಾಜ್ಯದಲ್ಲಿ ಪರಸ್ಪರ ಅಧಿಕಾರಕ್ಕಾಗಿ ನಡೆದಿರುವ ಹೋರಾಟ-ಹತ್ಯೆಗಳ ಪಟ್ಟಿ ದೊಡ್ಡದೇ ಇದೆ. ಪ್ರವಾದಿ ಮೊಮ್ಮಗ ಅಲಿ ಕರ್ಬಾಲಾದಲ್ಲಿ ಇಂಥದೇ ಸಂಘರ್ಷದಲ್ಲಿ ಮೃತವಾದ ವಿದ್ಯಮಾನ ಹಾಗೂ ಅಲ್ಲಿಂದ ಸುನ್ನಿ ಮತ್ತು ಶಿಯಾ ಕಂದಕ ದೊಡ್ಡದಾಗುತ್ತಲೇ ಸಾಗಿದ್ದು ಇವೆಲ್ಲವೂ ಇತಿಹಾಸ. ಆದರೆ, ಮೊದಲೇ ಹೇಳಿದಂತೆ, ಮರುಭೂಮಿ ಮತಕ್ಕೆ ಆಗಿನ್ನೂ ಗೆಲವಿನ ದಾಹ. ಜತೆಗೆ ಅದೃಷ್ಟವೆಂಬಂತೆ ಆ ಕಾಲದ ಎದುರಾಳಿಯ ದೌರ್ಬಲ್ಯಗಳೂ ವರದಾನವಾದವು. ಉದಾಹರಣೆಗೆ ಅವತ್ತಿನ ಬೈಜಾಂಟಿಯಮ್ ಮತ್ತು ಪರ್ಶಿಯನ್ ಸಾಮ್ರಾಜ್ಯಗಳು ಎರಡು ದಶಕಗಳ ಕಾಲ ಪರಸ್ಪರರ ಮೇಲೆ ಸಂಘರ್ಷ ಮಾಡಿಕೊಂಡು ಬಸವಳಿದಿದ್ದವು. ಹಾಗೆಂದೇ ಇರಾಕ್, ಇರಾನ್, ಸಿರಿಯಾ, ಪ್ಯಾಲಸ್ತೀನ್ ಪ್ರದೇಶಗಳೆಲ್ಲ ಇಸ್ಲಾಂ ಸಾರ್ಮಾಜ್ಯ ವಿಸ್ತರಣೆ ಹಸಿವಿಗೆ ಬೇಗ ತುತ್ತಾದವು. ಈ ಗೆಲುವುಗಳು ಇಸ್ಲಾಂ ಸಾಮ್ರಾಜ್ಯದ ಒಳಗಿದ್ದ ಸಂಘರ್ಷಗಳನ್ನು ಮರೆಸಿಹಾಕಿತಷ್ಟೆ.
ಹದಿನಾರು -ಹದಿನೆಂಟನೇ ಶತಮಾನದ ವೇಳೆಗೆ ಈ ವಿಸ್ತರಣೆಯೆಲ್ಲ ಒಂದು ಹಂತಕ್ಕೆ ಬಂದು, ಜಗತ್ತಿನಲ್ಲಿ ಮೂರು ಸಾಮ್ರಾಜ್ಯಗಳು ಪ್ರಬಲವಾಗಿದ್ದವು. ಇವತ್ತಿನ ಟುರ್ಕಿಯೆ, ಆಗಿನ ಅನತೊಲಿಯಾವನ್ನು ಕೇಂದ್ರೀಕರಿಸಿಕೊಂಡಿದ್ದ ಒಟ್ಟೊಮನ್ ತುರ್ಕ್ ಸಾಮ್ರಾಜ್ಯ, ಪರ್ಶಿಯಾವನ್ನು ಕೇಂದ್ರೀಕರಿಸಿಕೊಂಡಿದ್ದ ಸಫಾವಿದ್ ವಂಶಾಡಳಿತ, ಭಾರತವನ್ನು ಕೇಂದ್ರೀಕರಿಸಿಕೊಂಡು ಎದ್ದುನಿಂತಿದ್ದ ಮುಘಲ್ ಸಾಮ್ರಾಜ್ಯ. ಇಸ್ಲಾಂ ಹೆಸರಲ್ಲಿ ಇವೆಲ್ಲ ಅನ್ಯೋನ್ಯವಾಗಿದ್ದವಾ? ಅಂತಹ ಚಿತ್ರಣಗಳೇನೂ ಸಿಗುವುದಿಲ್ಲ. ಸುನ್ನಿ ಒಟ್ಟೊಮಾನ್ ಹಾಗೂ ಶಿಯಾ ಸಫಾವಿದ್ ಇನ್ನಿಲ್ಲದಂತೆ ಹೊಡೆದಾಡಿವೆ. ಬಾಗ್ದಾದ್ ಬಹಳಷ್ಟು ಬಾರಿ ಕೈಬದಲಾಯಿಸಿದೆ. ಕಂದಹಾರ್ ಪ್ರಾಂತ್ಯದ ಮೇಲೆ ಅಧಿಪತ್ಯಕ್ಕೆ ಮುಘಲರು ಮತ್ತು ಸಫಾವಿದ್ ನಡುವೆ ಸಂಘರ್ಷ ಇತ್ತು. ಈ ಸಫಾವಿದ್ ನಂತರ ಅಶ್ರಫದ್ ಸಾಮ್ರಾಜ್ಯದ ಮೂಲಕ ಇರಾನನ್ನು ಆಳುತ್ತಿದ್ದ ನಾದಿರ್ ಶಾ, ಅವತ್ತಿಗೆ ಬಲ ಕಳೆದುಕೊಂಡಿದ್ದ ಮುಘಲರ ಮೊಹಮ್ಮದ್ ಶಾನ ಮೇಲೆ ದಂಡೆತ್ತಿ ಬಂದು, ದೆಹಲಿಯನ್ನು ತೀರ ಕ್ರೂರವಾಗಿ ದೋಚಿಹೋಗಿದ್ದ.
ಇರಾನ್ ರಣಾಂಗಣದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳು ಸಹ ಮತ್ತದೇ ಸತ್ಯವನ್ನು ಸಾರಿ ಹೇಳುತ್ತಿವೆ. ಜಗತ್ತಿನ ಪ್ರತೀ ಅಧಿಕಾರ ಕೇಂದ್ರವೂ ತನ್ನ ಹಿತಾಸಕ್ತಿಗಾಗಿ ಸೆಣೆಸುತ್ತದೆ. ಈ ಹಂತದಲ್ಲಿ ಸಿದ್ಧಾಂತ ಹೊಂದಾಣಿಕೆ ಒಂದು ಬೆಸುಗೆಯ ಕಾರಣವಾಗಬಹುದೇ ಹೊರತು, ಸಿದ್ಧಾಂತವೇ ಎಲ್ಲವನ್ನೂ ನಿರ್ಧರಿಸುವುದಿಲ್ಲ. ಇವತ್ತಿಗೆ ಮುಸ್ಲಿಂ ರಾಷ್ಟ್ರಗಳಲ್ಲಿರುವ ಭಿನ್ನ ಅಧಿಕಾರ ಕೇಂದ್ರಗಳ ಹಿತಾಸಕ್ತಿಗಳೇ ಭಿನ್ನ ಬಗೆಯದ್ದಾಗಿವೆ. ಜಾಗತಿಕ ರಾಜಕಾರಣದ ಸನ್ನಿವೇಶಗಳೇ ಹಾಗಿವೆ.
ಇರಾನ್ ಪಡೆಗಳು ಹೇಳುತ್ತಿರುವುದೇನು? ಅರಬ್ ನೆಲದಲ್ಲಿರುವ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳೆಲ್ಲ ಪಾಶ್ಚಾತ್ಯ ಪ್ರಣೀತ ಮಾರುಕಟ್ಟೆ ವ್ಯವಸ್ಥೆಯ ಭಾಗಗಳು. ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಗಳು ನಮ್ಮ ಎದುರಾಳಿ ಅಂದಮೇಲೆ ಅವೆಲ್ಲ ನಮ್ಮ ದಾಳಿಗೆ ಗುರಿಯಾಗಿಯೇ ಆಗುತ್ತವೆ ಎನ್ನೋದು.
ವಾಸ್ತವದಲ್ಲಿ ಮುಸ್ಲಿಂ ಜಗತ್ತಿನಲ್ಲಾಗುತ್ತಿರುವ ಅರ್ಥಕೇಂದ್ರೀತ ಜಾಗತಿಕ ಸ್ಥರದ ಬದಲಾವಣೆಯೇ ಆಗಿದೆ. ಇನ್ನು ಕೆಲವು ವರ್ಷಗಳಲ್ಲಿ ಬೇರೆ ಬೇರೆ ಶಕ್ತಿ ಆಕರಗಳನ್ನು ಜಗತ್ತು ಅಭಿವೃದ್ಧಿಪಡಿಸಿಕೊಳ್ಳುತ್ತದೆಯಾದ್ದರಿಂದ, ತೈಲದ ಪ್ರಾಮುಖ್ಯ ಈಗಿನಷ್ಟು ಇರಲಾರದು ಎಂಬುದು ಒಂದು ಲೆಕ್ಕಾಚಾರ. ಆದರೆ, ತೈಲದ ಪ್ರಾಮುಖ್ಯ ಮುಗಿದ ನಂತರವೂ ನೈಸರ್ಗಿಕ ಅನಿಲದ ಪ್ರಾಮುಖ್ಯ ಮುಂದುವರಿದಿರುತ್ತದೆ ಎಂಬುದು ಇನ್ನೊಂದು ಲೆಕ್ಕಾಚಾರ. ಇವುಗಳ ಮೇಲೆಯೇ ಜಾಗತಿಕ ರಾಜಕೀಯದ ನಡೆಗಳು ನಿಂತಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಇರಾನ್ ತೈಲೋತ್ತರ ಆರ್ಥಿಕತೆಯಲ್ಲೂ ದೊಡ್ಡಮಟ್ಟದ ಪ್ರಸ್ತುತತೆ ಉಳಿಸಿಕೊಳ್ಳುತ್ತದೆ. ಅದು ಮಿಲಿಟರಿ ಶಕ್ತಿಯನ್ನೂ ಉಳಿಸಿಕೊಂಡು ಆರ್ಥಿಕತೆಯಲ್ಲೂ ಪ್ರಸ್ತುತವಾದರೆ ಜಾಗತಿಕ ಇಸ್ಲಾಂ ರಾಜಕಾರಣದಲ್ಲಿ ಉಳಿದವರೆಲ್ಲರಿಗಿಂತ ಭವಿಷ್ಯದಲ್ಲಿ ಅದೇ ಪ್ರಾಮುಖ್ಯ ಪಡೆಯಬೇಕು. ಇದು ಇಸ್ಲಾಮಿನ ಇತರ ರಾಜಕೀಯ ಶಕ್ತಿಗಳಿಗೂ ಸಮ್ಮತವೇನಲ್ಲ. ಅಲ್ಲದೇ, ಇಸ್ರೇಲ್ ಅಸ್ತಿತ್ವ್ವವನ್ನೇ ಒಪ್ಪುವುದಿಲ್ಲ ಎಂಬುದು ಇರಾನಿನ ಘೋಷಿತ ನಿಲುವಾಗಿರುವುದರಿಂದ, ಭವಿಷ್ಯದಲ್ಲಿ ಇರಾನ್ ಮಿಲಿಟರಿ ಪ್ಲಸ್ ಆರ್ಥಿಕ ಶಕ್ತಿಯಾಗುವುದು ಇಸ್ರೇಲಿಗೆ ದೊಡ್ಡ ಅಪಾಯವಂತೂ ಹೌದು. ಇರಾನಿನಲ್ಲಿ ತೆರೆದುಕೊಂಡಿರುವ ರಣಾಂಗಣದಲ್ಲಿ ಇಂಥ ಎಲ್ಲ ಸಮೀಕರಣಗಳೂ ಮಿಶ್ರಗೊಂಡಿವೆ.
ಅಂದಹಾಗೆ, ಇರಾನ್ ಮಾದರಿಯಲ್ಲಿ ಎಲ್ ಪಿ ಜಿ ಬಲ ಇಲ್ಲದಿರುವ ಅರಬ್ ದೇಶಗಳು ತೈಲೋತ್ತರ ಆರ್ಥಿಕತೆಗೆ ತಮ್ಮನ್ನು ಬೇರೆ ಬೇರೆ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳುತ್ತಿವೆ. ಸೌದಿ ಅರೇಬಿಯವು ತಾನು ಜಗತ್ತಿನ ಹಣಕಾಸು ಸೇವೆ ಹಾಗೂ ಮನರಂಜನಾ ಕೇಂದ್ರವಾಗಬೇಕೆಂದು ತಯಾರಿಯಲ್ಲಿದೆ. ಜಾಗತಿಕ ವಹಿವಾಟಿಗೆ ಅನುವಾಗುವ ಮೂರು ಬಂದರುಗಳನ್ನು ಅಭಿವೃದ್ಧಿಪಡಿಸಿರುವ ಒಮಾನ್ ತಾನು ಸರಕುಸಾಗಣೆ ವ್ಯವಸ್ಥೆಯ ಮುಖ್ಯಬಿಂದುವಾಗುವತ್ತ ತಯಾರಿ ನಡೆಸಿದೆ. ಫೈನಾನ್ಸ್, ಪ್ರವಾಸೋದ್ಯಮ, ಸಾಗಣೆಜಾಲ ಹೀಗೆ ಎಲ್ಲದರಲ್ಲೂ ಸ್ವಲ್ಪ ತೊಡಗಿಸಿಕೊಂಡಿದೆ ದುಬೈ. ಈ ಪೈಕಿ ಕತಾರ್ ಭಿನ್ನವಾಗಿರುವುದಕ್ಕೂ ಅನಿಲ ಲೆಕ್ಕಾಚಾರವೇ ಕಾರಣ. ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ಹೊಂದಿರುವ ಈ ದೇಶವು ತೈಲ ಪ್ರಾಮುಖ್ಯ ಕಡಿಮೆಯಾದರೂ ತಾನು ಮುಖ್ಯವಾಗಿರುತ್ತೇನೆ ಎಂದುಕೊಳ್ಳುತ್ತ, ಮಾಧ್ಯಮ ವಲಯದಲ್ಲಿ ತನ್ನ ಹೂಡಿಕೆ ಹೆಚ್ಚಾಗಿಸಿದೆ.
ಹೀಗೆಲ್ಲ ತಮ್ಮ ಅರ್ಥನೀತಿ ಮರುನಿರೂಪಣೆಗೆ ಒಳಪಡಿಸಿಕೊಳ್ಳುತ್ತಿರುವ ಗಲ್ಫ್ ದೇಶಗಳು ಸಹಜವಾಗಿಯೇ ಪಾಶ್ಚಾತ್ಯರು, ಚೀನಾ, ಭಾರತ ಎಲ್ಲವನ್ನೂ ತಮ್ಮ ಉದ್ಯಮ ಪರಿಧಿಯಲ್ಲಿ ಬಿಟ್ಟುಕೊಂಡಿವೆ. ಭವಿಷ್ಯಕ್ಕೆ ಸಿದ್ಧವಾಗುವ ಈ ಪೈಪೋಟಿಯಲ್ಲಿ ಸೌದಿ ಅರೇಬಿಯಾ ಯಾರನ್ನು ನೆಚ್ಚಿಕೊಂಡಿದೆ ಗೊತ್ತೇ? ಬ್ಲಾಕ್ ರಾಕ್ ಎಂಬ ಜಾಗತಿಕ ದೈತ್ಯ ಹೂಡಿಕೆ ಕಂಪನಿಯನ್ನು. ಈ ಕಂಪನಿಯ ಆಡಳಿತ ಮಂಡಳಿಯಲ್ಲಿರುವ ಪ್ರಮುಖರು ಯಹೂದಿಗಳು! ಜಾಗತಿಕ ಆರ್ಥಿಕ ರಾಜಕಾರಣದಲ್ಲಿ ಯಾರು ಮಿತ್ರರು, ಯಾರು ಶತ್ರುಗಳೆಂದು ಹೇಳುವುದು ಅಷ್ಟು ಸುಲಭದಲ್ಲಿಲ್ಲ.
ಈ ಟುರ್ಕಿಯೆ ಎಂಬ ದೇಶವಿದೆಯಲ್ಲ… ಅದು ತಾನು ಒಟ್ಟೊಮಾನ್ ತುರ್ಕರ ವಾರಸುದಾರ ಎಂದು ಬಿಂಬಿಸಿಕೊಳ್ಳುತ್ತದೆ. ಒಂದುಮಟ್ಟದ ಸೇನಾಬಲವನ್ನೂ ಇಟ್ಟುಕೊಂಡಿದೆ. ಈ ತುರ್ಕ್ ಐಡೆಂಟಿಟಿ ಕಾರಣಕ್ಕೆ ಅದಕ್ಕೆ ಎಲ್ಲ ಮುಸ್ಲಿಂ ರಾಷ್ಟ್ರಗಳ ಪೈಕಿ ತಾನೊಂದಾಗುವುದಕ್ಕೆ ಬಿಗುಮಾನ. ಅಲ್ಲದೇ ಅರಬ್ ದೇಶಗಳು ಮತ್ತು ಇರಾನ್ ರೀತಿ ಇದಕ್ಕೆ ತೈಲದ ಬಲವೂ ಇಲ್ಲ. ಪ್ರವಾಸೋದ್ಯಮ ಮತ್ತು ವಿಮಾನಯಾನ ಅದರ ವಹಿವಾಟು ಗುರುತು.
ಟರ್ಕಿ ಮತ್ತು ಇಸ್ರೇಲ್ ಸಂಬಂಧ ಕಹಿಯಾಗಿಯೇ ಇದೆ. ಆದರೆ, ಜಾಗತಿಕ ರಾಜಕಾರಣ ಹೇಗೆಲ್ಲ ಆಟ ಆಡಿಸುತ್ತದೆ ನೋಡಿ. 2020ರಲ್ಲಿ ಅರ್ಮೆನಿಯ ಮತ್ತು ಅಜರ್ಬೈಜಾನ್ ನಡುವೆ ಕಾದಾಟವಾಯಿತು. ಆಗ ಅಜರ್ಬೈಜಾನ್ ಬೆನ್ನಿಗೆ ನಿಂತ ಎರಡು ಪ್ರಮುಖ ದೇಶಗಳೆಂದರೆ ಟುರ್ಕಿಯೆ ಮತ್ತು ಇಸ್ರೇಲ್. ತಮಾಷೆ ಏನೆಂದರೆ, ಈ ಸಂದರ್ಭದಲ್ಲಿ ಭಾರತವು ಅರ್ಮೆನಿಯಾಕ್ಕೆ ಪಿನಾಕಾ ಕ್ಷಿಪಣಿ ಸೇರಿದಂತೆ ಶಸ್ತ್ರಗಳನ್ನು ಮಾರಿದ್ದಕ್ಕೆ ಅಜರ್ಬೈಜಾನ್ ಮುನಿಸಿಕೊಂಡಿತ್ತು.
ಇಸ್ರೇಲಿಗೆ ಪೈಪ್ಲೈನ್ ಮೂಲಕ ಗ್ಯಾಸ್ ಪೂರೈಸುವ ಪ್ರಮುಖ ದೇಶ ಅಜರ್ಬೈಜಾನ್. ಈ ಪೈಪ್ಲೈನ್ ಟರ್ಕಿಯನ್ನೂ ಒಳಗೊಂಡಿದೆ. ಇತ್ತೀಚೆಗೆ ಇರಾನ್ ಈ ಪೈಪ್ಲೈನ್ ಗುರಿಯಾಗಿರಿಸಿಕೊಂಡು ದಾಳಿಗೆ ಪ್ರಯತ್ನಿಸಿದಾಗ ಇಸ್ರೇಲ್ ಮತ್ತು ಟುರ್ಕಿಯೆ ಒಟ್ಟಿಗೇ ಕೋಪಗೊಂಡಿದ್ದವು!
- ಚೈತನ್ಯ ಹೆಗಡೆ
cchegde@gmail.com