

ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ತಂಡದ ಅದೃಷ್ಟವೇ ಸರಿಯಿಲ್ಲ. ಆರಂಭದಿಂದ ಕಳಪೆ ಪ್ರದರ್ಶನದಿಂದ ತೀವ್ರ ಟೀಕೆಗಳಿಗೆ ಗುರಿಯಾಗಿರುವಂತೆಯೇ ಮತ್ತೊಂದು ಸೋಲು ಕಂಡಿದೆ.
ಹೌದು. ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 44ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ 8 ವಿಕೆಟ್ ಗಳಿಂದ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾದ ವಿಲ್ ಜಾಕ್ಸ್ ಕೇವಲ 1 ರನ್ ಗಳಿಸಿ ಘೋಷ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ರಿಯಾನ್ ರಿಕೆಲ್ಟಾನ್ 37 ರನ್ ಗಳಿಸಿದಾಗ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಪಾಟೀಲ್ ಗೆ ಕ್ಯಾಚ್ ನೀಡಿದರು.
ತದನಂತರ ನಮನ್ ದಿರ್ 4 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 57 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 21, ತಿಲಕ್ ವರ್ಮಾ 5, ನಾಯಕ ಹಾರ್ದಿಕ್ ಪಾಂಡ್ಯ ಕೇವಲ 18 ರನ್ ಗಳಿಸಿ ಔಟ್ ಆದರು.
ಬಳಿಕ ರಾಬಿನ್ ಮಿಂಜ್ 5, ಕ್ರಿಸ್ ಭಗತ್ 3, ಟ್ರೆಂಟ್ ಬೌಲ್ಟ್ 7 ರನ್ ಗಳಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಅಂಶುಲ್ ಕಾಂಬೊಜ್ 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 2, ರಾಮಕೃಷ್ಣ ಘೋಷ್, ವೋವಾರ್ಟನ್ ತಲಾ ಒಂದೊಂದು ವಿಕೆಟ್ ಗಳಿಸಿದರು.
ಮುಂಬೈ ಇಂಡಿಯನ್ಸ್ ನೀಡಿದ 160 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ಋತುರಾಜ್ ಗಾಯಕ್ವಾಡ್ ಅಜೇಯ 67 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 11, ಉರ್ವಿಲ್ ಪಟೇಲ್ 24 ಹಾಗೂ ಕಾರ್ತಿಕ್ ಶರ್ಮಾ ಅಜೇಯ 54 ರನ್ ಗಳಿಸಿದರು.
ಇದರೊಂದಿಗೆ 18.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸುವುದರೊಂದಿಗೆ CSK ಗೆಲುವಿನ ನಗೆ ಬೀರಿತು. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬೂಮ್ರಾ ಹಾಗೂ ಎಎಂ ಘಾಜನ್ ಫರ್ ತಲಾ ಒಂದೊಂದು ವಿಕೆಟ್ ಪಡೆದರು.
Advertisement