ಎಂಡೊಮೆಟ್ರಿಯೋಸಿಸ್ online desk
ಅಂಕಣಗಳು

ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯೋಸಿಸ್ (ಕುಶಲವೇ ಕ್ಷೇಮವೇ)

ಸಾಂಪ್ರದಾಯಿಕವಾಗಿ ಎಂಡೊಮೆಟ್ರಿಯೋಸಿಸ್ಸನ್ನು ಸ್ತ್ರೀರೋಗಶಾಸ್ತ್ರದ ಒಂದು ಕಾಯಿಲೆ ಎಂದು ಪರಿಗಣಿಸಲಾಗಿದೆ.

ಎಂಡೊಮೆಟ್ರಿಯೋಸಿಸ್ ಪ್ರಪಂಚದಾದ್ಯಂತ ಶೇಕಡಾ ಹತ್ತರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುವ ನೋವಿನ ಮತ್ತು ದೇಹವನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದೆ. ಗರ್ಭಾಶಯದ ಒಳಪದರವನ್ನು ಹೋಲುವ ಗಡ್ಡೆ (ಲೇಶನ್ಸ್) ದೇಹದಲ್ಲಿ ಬೇರೆಡೆ ಅಂದರೆ ಸಾಮಾನ್ಯವಾಗಿ ಸೊಂಟದೊಳಗೆ ಬೆಳೆದಾಗ ಇದು ಸಂಭವಿಸುತ್ತದೆ.

ಸಾಂಪ್ರದಾಯಿಕವಾಗಿ ಎಂಡೊಮೆಟ್ರಿಯೋಸಿಸ್ಸನ್ನು ಸ್ತ್ರೀರೋಗಶಾಸ್ತ್ರದ ಒಂದು ಕಾಯಿಲೆ ಎಂದು ಪರಿಗಣಿಸಲಾಗಿದೆ. ಇದು ಕೇವಲ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕಾಯಿಲೆನಿರೋಧಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಗಮನದಲ್ಲಿಡಬೇಕು.

ಎಂಡೊಮೆಟ್ರಿಯೋಸಿಸ್ ಕಾಯಿಲೆ ಇರುವವರು ಮುಟ್ಟಿನ ಅವಧಿಯಲ್ಲಿ ವಿಪರೀತ ನೋವನ್ನು ಅನುಭವಿಸುವರು. ಇದರಿಂದ ಫಲವಂತಿಕೆಯ ಸಮಸ್ಯೆಗಳು ಸಹ ಎದುರಾಗಬಹುದು.

ಎಂಡೊಮೆಟ್ರಿಯೊಸಿಸ್ಸಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಬಹುದು. ಸಾಮಾನ್ಯವಾಗಿ ಚಿಕಿತ್ಸೆಯು ಈ ಗಡ್ಡೆಗಳ ಬೆಳವಣಿಗೆಯನ್ನು ತಡೆಯುವುದು ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗಾಯಗಳನ್ನು ತೆಗೆದುಹಾಕುವುದನ್ನು ಒಳಗೊಂಡಿರುತ್ತದೆ. ಆದರೆ ಗಡ್ಡೆಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದರೂ ಕಾಯಿಲೆಯ ಲಕ್ಷಣಗಳು ಸಾಮಾನ್ಯವಾಗಿ ಹೋಗುವುದಿಲ್ಲ.

ಎಂಡೋಮೆಟ್ರಿಯೋಸಿಸ್ ಗಡ್ಡೆಗಳು

ಎಂಡೋಮೆಟ್ರಿಯೋಸಿಸ್ ಗಡ್ಡೆಗಳು ಅಂಡಾಶಯಗಳು, ಫಾಲೋಪಿಯನ್ ಟ್ಯೂಬ್‌ಗಳು, ಗರ್ಭಾಶಯದ ಹೊರ ಭಾಗ, ಮೂತ್ರಕೋಶ ಮತ್ತು ಕರುಳು ಸೇರಿದಂತೆ ಅನೇಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ಗಡ್ಡೆಗಳು ಗರ್ಭಾಶಯದ ಒಳಪದರದಂತೆ ಇರುತ್ತದೆ. ಇದು ಪ್ರತಿ ಋತುಚಕ್ರದೊಂದಿಗೆ ದಪ್ಪವಾಗುತ್ತದೆ, ಒಡೆಯುತ್ತದೆ ಮತ್ತು ರಕ್ತಸ್ರಾವವಾಗುತ್ತದೆ. ಮುಟ್ಟಿನ ಸಮಯದಲ್ಲಿ ಈ ನೋವು ಯೋನಿ, ಬೆನ್ನು ಮತ್ತು ಕಾಲುಗಳಿಗೆ ಹರಡಬಹುದು.

ಈ ಕಾಯಿಲೆದ ಲಕ್ಷಣಗಳು ಭಾರೀ ರಕ್ತಸ್ರಾವ, ಲೈಂಗಿಕ ಕ್ರಿಯೆಯ ವೇಳೆ ನೋವು, ಕರುಳಿನ ಚಲನೆ ಅಥವಾ ಮೂತ್ರ ವಿಸರ್ಜನೆಯೊಂದಿಗೆ ನೋವು ಮತ್ತು ಬಂಜೆತನ.

ಮುಟ್ಟಿನ ಸಮಯದಲ್ಲಿ ರಕ್ತಸ್ರಾವವು ಸಾಮಾನ್ಯವಾಗಿದೆ. ಆದರೆ ಅತಿಯಾದ ರಕ್ತಸ್ರಾವವು ಈ ಕಾಯಿಲೆಯ ಇರುವಿಕೆಯನ್ನು ಸೂಚಿಸುತ್ತದೆ. ಎಂಡೊಮೆಟ್ರಿಯೋಸಿಸ್ ಇದ್ದರೆ ಲೈಂಗಿಕ ಕ್ರಿಯೆಯಲ್ಲಿ ನಿರತವಾಗಿರುವಾಗ ಆಥವಾ ನಂತರ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಮುಟ್ಟಿನ ಮೊದಲು ಅಥವಾ ಸಮಯದಲ್ಲಿ ಕರುಳಿನ ಚಲನೆಯಲ್ಲಿ ಅಥವಾ ಮೂತ್ರ ವಿಸರ್ಜನೆಯೊಂದಿಗೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮಕ್ಕಳಾಗಿಲ್ಲ ಎಂದು ಪರೀಕ್ಷೆ ಮಾಡುವಾಗ ಎಂಡೋಮೆಟ್ರಿಯೋಸಿಸ್ ಇರುವುದು ಪತ್ತೆಯಾಗಿ ಬಂಜೆತನ ಇರುವುದು ಗೊತ್ತಾಗುತ್ತದೆ. ಜೊತೆಗೆ ಆಯಾಸ, ಅತಿಸಾರ, ಮಲಬದ್ಧತೆ, ಉಬ್ಬುವಿಕೆ ಅಥವಾ ವಾಕರಿಕೆ ಮುಟ್ಟಿನ ಮೊದಲು ಅಥವಾ ಸಮಯದಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಎಂಡೊಮೆಟ್ರಿಯೋಸಿಸ್ ಕಾಯಿಲೆಗೆ ಚಿಕಿತ್ಸೆ

ಎಂಡೊಮೆಟ್ರಿಯೋಸಿಸ್ ಕಾಯಿಲೆಗೆ ಸಂಪೂರ್ಣ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ಈ ಕಾಯಿಲೆಯ ಲಕ್ಷಣಗಳನ್ನು ನಿಯಂತ್ರಿಸಲು ಹಲವು ಪರಿಣಾಮಕಾರಿ ವಿಧಾನಗಳು ಲಭ್ಯವಿವೆ. ಇದರ ಚಿಕಿತ್ಸೆಯ ಮುಖ್ಯ ಉದ್ದೇಶ ನೋವನ್ನು ಕಡಿಮೆ ಮಾಡುವುದು, ಗಡ್ಡೆಗಳ ಬೆಳವಣಿಗೆಯನ್ನು ನಿಯಂತ್ರಿಸುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದಾಗಿದೆ.

ಚಿಕಿತ್ಸೆಯ ಪ್ರಾರಂಭಿಕ ಹಂತದಲ್ಲಿ ವೈದ್ಯರು ನೋವು ನಿವಾರಕ ಔಷಧಿಗಳನ್ನು ನೀಡುತ್ತಾರೆ. ಇದರ ಜೊತೆಗೆ ಹಾರ್ಮೋನ್ ಚಿಕಿತ್ಸೆ ಮಹತ್ವದ್ದಾಗಿದೆ. ಗಂಭೀರ ಪ್ರಕರಣಗಳಲ್ಲಿ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಗರ್ಭಾಶಯದ ಹೊರಭಾಗದಲ್ಲಿ ಬೆಳೆದಿರುವ ಗಡ್ಡೆಗಳನ್ನು ತೆಗೆದುಹಾಕಲಾಗುತ್ತದೆ. ಇದು ನೋವನ್ನು ಕಡಿಮೆ ಮಾಡಲು ಮತ್ತು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲು ಸಹಕಾರಿ. ಆದರೆ ಕೆಲವೊಮ್ಮೆ ಕಾಯಿಲೆಯು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ದೇಹದಲ್ಲಿ ಈಸ್ಟ್ರೋಜನ್ ಮಟ್ಟ ಹೆಚ್ಚಾದರೆ ಈ ಕಾಯಿಲೆಯ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ನಿಯಮಿತ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಸಹಕಾರಿ. ವ್ಯಾಯಾಮದಿಂದ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತವೆ ಮತ್ತು ಉರಿಯೂತ ಕಡಿಮೆಯಾಗುತ್ತದೆ.

ಎಂಡೊಮೆಟ್ರಿಯೋಸಿಸ್ ಕಾಯಿಲೆ ತಡೆಗಟ್ಟುವುದು ಹೇಗೆ?

ಈ ಕಾಯಿಲೆಯನ್ನು ತಡೆಗಟ್ಟಲು ಪ್ರತಿನಿತ್ಯ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು. ಅತಿ ಹೆಚ್ಚು ಉಪ್ಪು, ಖಾರ ಮತ್ತು ಸಿಹಿ ಇರುವ ಜಂಕ್ ಪದಾರ್ಥಗಳ ಬದಲಿಗೆ ಮನೆಯಲ್ಲಿಯೇ ತಾಜಾ ತರಕಾರಿ, ಬೇಳೆಕಾಳುಗಳು ಮತ್ತು ಸೊಪ್ಪುಗಳನ್ನು ಹಾಕಿ ತಯಾರಿಸಿದ ಊಟತಿಂಡಿಗಳನ್ನು ಮಾಡಬೇಕು. ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ಎಂಡೊಮೆಟ್ರಿಯೋಸಿಸ್ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕು. ಧೂಮಪಾನದಿಂದ ಈ ಕಾಯಿಲೆ ಇನ್ನಷ್ಟು ಹದಗೆಡುತ್ತದೆ. ತಾಜಾ ಋತುಕಾಲಿಕ ಹಣ್ಣುಗಳು, ತರಕಾರಿಗಳು, ಒಮೇಗಾ-3 ಕೊಬ್ಬು ಆಮ್ಲಗಳಿರುವ ಆಹಾರ (ಮೀನು, ಬಾದಾಮಿ) ಸೇವಿಸುವುದು ಉತ್ತಮ. ಸಂಸ್ಕರಿತ ಆಹಾರವನ್ನು ಮುಟ್ಟದಿದ್ದರೆ ಒಳ್ಳೆಯದು.

ಒತ್ತಡವನ್ನು ನಿಯಂತ್ರಿಸುವುದು ಈ ಕಾಯಿಲೆಯ ನಿವಾರಣೆಗೆ ಸಹ ಅಗತ್ಯ. ದಿನವೂ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳ ಅಭ್ಯಾಸಗಳು ಮನಸ್ಸನ್ನು ಶಾಂತಗೊಳಿಸಿ ದೇಹದಲ್ಲಿ ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಋತುಚಕ್ರದ ಸಮಸ್ಯೆಗಳು, ತೀವ್ರ ನೋವು ಅಥವಾ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ಅವನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಮೂಲಕ ಕಾಯಿಲೆಯನ್ನು ನಿಯಂತ್ರಿಸಬಹುದು.

ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾರೆ ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಮತ್ತು ವೈದ್ಯಕೀಯ ಅರಿವಿನ ಮೂಲಕ ಎಂಡೊಮೆಟ್ರಿಯೋಸಿಸ್ ಕಾಯಿಲೆಯ ದುಷ್ಪಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ: ತೆರಿಗೆ ವ್ಯವಸ್ಥೆ ಜಾರಿಗೆ ಇರಾನ್ ಮುಂದು, ವಿರೋಧವಾಗಿ G7 ಒಕ್ಕೂಟ ರೂಪಿಸಲು ರೂಬಿಯೋ ಕರೆ

ಭಾರತದಲ್ಲಿ ಇಂಧನ ಬಿಕ್ಕಟ್ಟು: ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ಮೋದಿ ಸಭೆ, ಸಿಎಂ ಸಿದ್ದರಾಮಯ್ಯ ಗೈರು!

ಶ್ರೀನಗರ-ಲೇಹ್ ಹೆದ್ದಾರಿಯ ಝೋಜಿಲಾ ಪಾಸ್ ನಲ್ಲಿ ಭಾರಿ ಹಿಮಪಾತ: ಏಳು ಮಂದಿ ದುರ್ಮರಣ, ಐವರಿಗೆ ಗಾಯ! Video

ಕೇರಳ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಡಿಕೆಶಿಗೆ ಸ್ಥಾನ, ಸಿಎಂ ಸಿದ್ದರಾಮಯ್ಯಗೆ ಇಲ್ಲ!

MS Dhoniಗೆ ಹೇಳೋಕೆ ನೀವ್ಯಾರು..?: ಕೊನೆಗೂ ಧೋನಿ ಬೆನ್ನಿಗೆ ನಿಂತ Yograj Singh, ಈ ಬಾರಿ ಯಾರಿಗೆ ಚಾಟಿ?

SCROLL FOR NEXT