ಅಮೆರಿಕ ಆರ್ಥಿಕತೆ ಕುಸಿತ (ಸಾಂಕೇತಿಕ ಚಿತ್ರ) online desk
ಅಂಕಣಗಳು

ಅಮೇರಿಕಾ ಎಕಾನಮಿ ಕುಸಿತಕ್ಕೆ ದಿನಗಣನೆ, ಐಸಿಯುವಿನಲ್ಲಿ US ಆರ್ಥಿಕತೆ! (ಹಣಕ್ಲಾಸು)

ಅಮೇರಿಕಾ ಮುಳುಗೇ ಹೋಯ್ತು ಎನ್ನುವಂತಹ ಗಂಭೀರ ಶೀರ್ಷಿಕೆಗಳು ನಾವು ಬಹಳಷ್ಟು ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ನೋಡಬಹುದು. ಆದರೆ ಅಮೇರಿಕಾ ಆರ್ಥಿಕತೆ ಇಂದಿಗೂ ಬೆಳೆಯುತ್ತಿದೆ !

ಅಮೇರಿಕಾದ ಆರ್ಥಿಕ ಸ್ಥಿತಿ ಇಂದು ತುಂಬಾ ಗಂಭೀರವಾದ ಸ್ಥಿತಿಯಲ್ಲಿದೆ. ಇದರರ್ಥ ನಾಳೆಯೇ ಕುಸಿತ ಆಗುತ್ತದೆ ಎಂದಲ್ಲ. ನಿಧಾನವಾಗಿ ಅದು ಕುಸಿತದ ಕಡೆಗೆ ಪ್ರಯಾಣ ಮಾಡುತ್ತಿದೆ ಎನ್ನುವುದು ಮಾತ್ರ ಸತ್ಯ. ದೀರ್ಘಕಾಲದಲ್ಲಿ ಇದು ಆ ದೇಶದ ಆರ್ಥಿಕ ಸ್ಥಿತಿ ಅಪಾಯಕಾರಿ ಹಂತವನ್ನು ತಲುಪುವ ಸಾಧ್ಯತೆಯನ್ನು ತಳ್ಳು ಹಾಕುವಂತಿಲ್ಲ. ಇದರ ಮೂಲ ಕಾರಣಗಳು ದೊಡ್ಡ ಮಟ್ಟದ ಸರ್ಕಾರಿ ಸಾಲ, ಸಾಲಕ್ಕೆ ಕಾರಣವಾದ ಫಿಸ್ಕಲ್ ಡಿಫಿಸಿಟ್‌ಗಳು, ಹಾಗೂ ಬ್ಯಾಂಕಿಂಗ್ ಮತ್ತು ರಿಯಲ್ ಎಸ್ಟೇಟ್‌ ಕ್ಷೇತ್ರಗಳಲ್ಲಿ ಕಾಣಿಸುತ್ತಿರುವ ಅಪಾರ ಒತ್ತಡ.

ಈ ಸಂಕಷ್ಟದ ಗಾತ್ರ ಎಷ್ಟು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ . ಈಗಾಗಲೇ ಹಣಕ್ಲಾಸು ಅಂಕಣದ ಮೂಲಕ ಅಮೆರಿಕಾದ ಆರ್ಥಿಕತೆ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದೇನೆ. ಇರಾನಿನ ಮೇಲಿನ ಯುದ್ಧದ ನಂತರ ಅಲ್ಲಿನ ಆರ್ಥಿಕತೆಯ ಚಿತ್ರಣ ಮತ್ತಷ್ಟು ಬದಲಾಗಿದೆ. ಹೀಗಾಗಿ ಇತೀಚಿನ ದಿನದಲ್ಲಿ ಆಗಿರುವ ಬದಲಾವಣೆಯನ್ನು ಕೂಡ ಅರಿತುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಅಮೇರಿಕಾ ಮುಳುಗೇ ಹೋಯ್ತು ಎನ್ನುವಂತಹ ಗಂಭೀರ ಶೀರ್ಷಿಕೆಗಳು ನಾವು ಬಹಳಷ್ಟು ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ನೋಡಬಹುದು. ಆದರೆ ಅಮೇರಿಕಾ ಆರ್ಥಿಕತೆ ಇಂದಿಗೂ ಬೆಳೆಯುತ್ತಿದೆ ! 2026 ರಲ್ಲಿ ಅಮೇರಿಕಾದ ನಿಜವಾದ ಜಿಡಿಪಿ ಬೆಳವಣಿಗೆ ಸುಮಾರು 2.2 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಅಮೇರಿಕಾ ಒಂದು ಮುಂದುವರೆದ ದೇಶವಾಗಿದೆ. ಹೀಗಾಗಿ ಆ ದೇಶದಲ್ಲಿ ಭಾರತದಲ್ಲಿ ಆಗುವಂತೆ 6/7 ಪ್ರತಿಶತ ಗ್ರೋಥ್ ರೇಟ್ ನಿರೀಕ್ಷಿಸುವುದು ತಪ್ಪು. ಆದರೆ ಆಳು ಬಿದ್ದಾಗ ತಲೆಗೊಂದು ಕಲ್ಲು ಎನ್ನುವ ಗಾದೆಯಂತೆ ಎಲ್ಲರೂ ಈಗ ಅಮೇರಿಕಾ ಆರ್ಥಿಕತೆ ಸರಿಯಿಲ್ಲ ಎನ್ನುವ ಹಾಡನ್ನು ಹಾಡುತ್ತಿದ್ದರೆ. ಅಮೇರಿಕಾ ಒಂದು ಮೆಚೂರ್ಡ್ ಎಕಾನಮಿ 2 ಅಥವಾ ಅದಕ್ಕಿಂತ ಹೆಚ್ಚಿನ ಗ್ರೋಥ್ ರೇಟ್ ತೀರಾ ಕಳಪೆಯಂತೂ ಅಲ್ಲ . ಆದರೆ ಜಗತ್ತು ಇಂತಹ ಲಾಜಿಕ್ ಮೇಲೆ ನಡೆಯುವುದಿಲ್ಲ ಎನ್ನುವುದು ಅಮೆರಿಕಕ್ಕೂ ಗೊತ್ತು ಹಾಗೆ ದೇಶದ ಬಗ್ಗೆ ಅಂದಾಜಿಸಿ ಹೇಳುವ ಸಂಸ್ಥೆಗಳಾದ S&P Global, J.P. Morgan ಮುಂತಾದ ದೊಡ್ಡ ಸಂಸ್ಥೆಗಳು ಮುಂದಿನ ಒಂದು ವರ್ಷದಲ್ಲಿ ಅಮೇರಿಕಾದಲ್ಲಿ ರಿಸೆಶನ್ ಅಂದರೆ ಆರ್ಥಿಕ ಹಿಜರಿತ ಸಂಭವಿಸುವ ಸಾಧ್ಯತೆ ಸುಮಾರು ೩೦/೩೫ ಪ್ರತಿಶತ ಎಂದು ಹೇಳುತ್ತಿವೆ.

ಇವುಗಳು ನೀಡುವ ಪ್ರಮುಖ ಕಾರಣ “ಸ್ಟ್ಯಾಗ್ಫ್ಲೇಷನ್” ಅಂದರೆ ಇದೊಂದು ವಿಚಿತ್ರ ಸನ್ನಿವೇಶ. ಇಂತಹ ಸನ್ನಿವೇಶದಲ್ಲಿ ಬೆಳವಣಿಗೆ ಕುಸಿತವನ್ನು ಕಾಣುತ್ತದೆ, ಅಥವಾ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತದೆ. ಇದರ ಜೊತೆಯಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ ಮತ್ತು ಕೆಲಸಗಳು ಹೋಗಲು ಶುರುವಾಗುತ್ತದೆ . ಕೆಲಸವಿಲ್ಲದ ಕಾರಣ ಆದಾಯದಲ್ಲಿ ಕೊರತೆಯಾಗುತ್ತದೆ. ಹಣವಿಲ್ಲದ ಮೇಲೆ ಖರೀದಿ ಮಾಡಲು ಸಾಧ್ಯವಿಲ್ಲ ಹೀಗಾಗಿ ಗ್ರೋಥ್ ಕುಸಿತವಾಗುತ್ತದೆ. ಇವೆಲ್ಲವೂ ಒಂದು ವಿಷವರ್ತುಲದಂತೆ ಕೆಲಸ ಮಾಡುತ್ತವೆ. ಈಗಾಗಲೇ ಅಮೇರಿಕಾದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರಿಗೆ ಇದರ ಅನುಭವಾಗಿರುತ್ತದೆ.ಸರಳವಾಗಿ ಹೇಳಬೇಕೆಂದರೆ ಆದಾಯ ಕುಸಿತ , ಕೆಲಸದ ಕುಸಿತ ಹೀಗಾಗಿ ಬೆಳವಣಿಗೆ ಕುಸಿತ ಉಂಟಾಗುತ್ತದೆ. ಅಮೇರಿಕಾ ಕುಸಿತಕ್ಕೆ ಬಾಹ್ಯ ಕಾರಣಗಳಿಗಿಂತ ಆಂತರಿಕ ಕಾರಣಗಳು ಹೆಚ್ಚು ಎಂದು ಹೇಳಬಹುದು.

ಇದರಲ್ಲಿ ಅತ್ಯಂತ ಪ್ರಮುಖವಾದದ್ದು ಸರಕಾರಿ ಸಾಲ ! ಅಂದರೆ ಸರಕಾರ ಫಿಸ್ಕಲ್ ಡೆಫಿಸಿಟ್ ಸರಿದೊಗಿಸಲು ಸಾಲ ಪತ್ರವನ್ನು ಅಂದರೆ ಡೆಟ್ ಬಾಂಡ್ ಗಳನ್ನು ಹೊರಡಿಸಿ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡು ಬರುತ್ತಿತ್ತು . ಇವತ್ತಿಗೆ ಅಂದರೆ 2026ರ ಆರಂಭದ ವೇಳೆಗೆ ಈ ದೇಶದ ಸಾಲ , ಈ ದೇಶದ ಜಿಡಿಪಿಯನ್ನೂ ಮೀರಿಸಿದೆ. ಅಂದರೆ ವರ್ಷದ ಪೂರ್ಣ ವಹಿವಾಟು ಮೊತ್ತವನ್ನು ನೀಡಿದರೂ ಕೂಡ ಸಾಲ ತಿರುವುದಿಲ್ಲ. ಇದನ್ನು ಡಾಲರಿನಲ್ಲಿ ಹೇಳಬೇಕೆಂದರೆ 39 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚು ಸಾಲವನ್ನು ಹೊಂದಿದೆ ಹಾಗೂ ಈ ದೇಶದ ಜಿಡಿಪಿ 32 ಟ್ರಿಲಿಯನ್ ಡಾಲರ್! ಸಮಸ್ಯೆಯ ಅಗಾಧತೆ ಎಷ್ಟು ಎನ್ನವುದರ ಅರಿವಾಯ್ತು ಎಂದುಕೊಳ್ಳುವೆ. ಇದನ್ನು ನಾವು ಸರಕಾರದ ಸಾಲ ಎಂದು ಪರಿಗಣಿಸದೆ ದೇಶದ ಪ್ರತಿ ಮನೆಗೂ ಸೇರಿದ್ದು ಎಂದುಕೊಂಡು ನೋಡಿದರೆ , ಪ್ರತಿ ಮನೆಯ ಮಟ್ಟಕ್ಕೆ ಸರಿ ಸುಮಾರು ಮೂರು ಲಕ್ಷ ಡಾಲರ್ ಆಗುತ್ತದೆ. ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು ಪ್ರತಿ ಮನೆಗೂ ಮೂರು ಕೋಟಿ ರೂಪಾಯಿ ಸಾಲ ಎಂದುಕೊಳ್ಳಬಹುದು.

ಮನೆಯಲ್ಲಿ ಮೂರು ಜನರಿರುತ್ತಾರೆ ಎನ್ನುವ ಆಧಾರದಲ್ಲಿ ಇದನ್ನು ಹೇಳಲಾಗಿದೆ. ಈ ಅರ್ಥದಲ್ಲಿ ನೋಡಿದಾಗ ಪ್ರತಿ ಪ್ರಜೆಗೆ ಒಂದು ಕೋಟಿ ರೂಪಾಯಿ ತನಕ ಸಾಲವಿದೆ. ಭಾರತದಲ್ಲಿ ಪ್ರತಿ ಪ್ರಜೆಯ ತೆಲೆಯ ಮೇಲೆ ಒಂದುಲಕ್ಷ ಮೂವತ್ತೈದು ಸಾವಿರ ರೂಪಾಯಿ ಸಾಲವಿದೆ.ಅಮೆರಿಕನ್ ಕಾಂಗ್ರೆಸ್ಸಿನ ಬಜೆಟ್ ಆಫೀಸ್ (CBO) ಪ್ರಕಾರ, ಸರಿಯಾದ ಕ್ರಮವನ್ನು ತೆಗೆದುಕೊಳ್ಳದೆ ಇದ್ದರೆ ಈ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಹೋಗುತ್ತದೆ. ಹೀಗಾಗಿ ಬಜೆಟ್ ನ ಬಹಪಾಲು ಹಣವನ್ನು ಬಡ್ಡಿ ಕಟ್ಟಲು ತೆಗೆದಿರಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

ಅಮೇರಿಕಾ ಇಲ್ಲಿವರೆಗೆ ನಡೆದು ಬಂದದ್ದು ಡಾಲರಿನ ಬಲದಿಂದ. ಡಾಲರ್ ಜಾಗತಿಕ ಕರೆನ್ಸಿ ಆದ ಕಾರಣ ಅದು ಬೇಕಾದಾಗ ಬೇಕಾದಷ್ಟು ಮುದ್ರಿಸುತ್ತಿತ್ತು. ಪೆಟ್ರೋಲ್ ಮತ್ತು ಗೋಲ್ಡ್ ಜಗತ್ತನ್ನು ನಡೆಸುವ ಎರಡು ಪ್ರಮುಖ ಅಂಶಗಳು. ಅವುಗಳನ್ನು ಕೂಡ ಡಾಲರ್ ಎನ್ನುವ ಅಂಕುಶದಲ್ಲಿ ಬಂಧಿಸಲಾಗಿತ್ತು. ಇದೀಗ ಡಾಲರ್ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳುವ ಮಾತುಕತೆ ಜೋರಾಗಿದೆ.

ಕೋವಿಡ್ ನಂತರ ಅಮೇರಿಕಾದ ಹಣದುಬ್ಬರ ತುಂಬಾ ಜಾಸ್ತಿ ಆಗಿತ್ತು. ಅವತ್ತಿಗೆ ಹೋಲಿಕೆ ಮಾಡಿ ನೋಡಿದರೆ ಈಗ ಸ್ವಲ್ಪ ಇಳಿದಿದೆ. ಆದರೆ ಇವತ್ತಿಗೂ ಮುಂದುವರೆದ ದೇಶದ ಲೆಕ್ಕಚಾದರಲ್ಲಿ ಅಲ್ಲಿರುವ ಹಣದುಬ್ಬರ ಹೆಚ್ಚು. ಹಣದುಬ್ಬರ ನಿಯಂತ್ರಣಕ್ಕೆ ತರಲು ಸಾಧಾರಣವಾಗಿ ಫೆಡರಲ್ ಬ್ಯಾಂಕು ಬಡ್ಡಿದರವನ್ನು ಏರಿಸುತ್ತದೆ.

ಬಡ್ಡಿದರಗಳು ಏರಿದಾಗ:

  • ಮನೆಗಳಿಗೆ ಗೃಹ ಸಾಲ, ವಾಹನಗಳ ಮೇಲಿನ ಸಾಲ, ಕ್ರೆಡಿಟ್ ಕಾರ್ಡ್ ಹೀಗೆ ಎಲ್ಲದರ ಕಂತುಗಳು ಹೆಚ್ಚಾಗುತ್ತವೆ. ಇದು ಸಮಾಜದಲ್ಲಿ ಕಾಸ್ಟ್ ಆಫ್ ಲಿವಿಂಗ್ ಹೆಚ್ಚಾಗುವಂತೆ ಮಾಡುತ್ತದೆ.

  • ಉದ್ಯಮಗಳಿಗೆ ಸಾಲ ದುಬಾರಿಯಾಗುತ್ತದೆ . ಇದರಿಂದ ಹೂಡಿಕೆ ಮತ್ತು ಉದ್ಯೋಗದ ಸೃಷ್ಟಿ ನಿಧಾನವಾಗುತ್ತದೆ.

  • ಸರ್ಕಾರಕ್ಕೂ ಹೊಸ ಸಾಲ ದುಬಾರಿಯಾಗುತ್ತದೆ. ಅಂದರೆ ಬಡ್ಡಿ ವೆಚ್ಚ ಮತ್ತಷ್ಟು ಹೆಚ್ಚಾಗಿ ನೀಡಬೇಕಾದ ಬಡ್ಡಿಯ ಮೊತ್ತ ಹೆಚ್ಚಾಗುತ್ತದೆ.

  • ದರ ಏರಿಕೆ ಸಂಪೂರ್ಣವಾಗಿ ಕುಗ್ಗದಿದ್ದರೆ, ಮತ್ತು ಜನರ ನಿಜವಾದ ವೇತನ ಹೆಚ್ಚಾಗದಿದ್ದರೆ ಅಥವಾ ನಿಧಾನವಾಗಿ ಮಾತ್ರ ಬೆಳೆಯುತ್ತಿದ್ದರೆ, ' ಅದು ' ಸ್ಟ್ಯಾಗ್ಫ್ಲೇಷನ್” ಸೃಷ್ಟಿಗೆ ಕಾರಣವಾಗುತ್ತದೆ. ಇದು ಅಮೇರಿಕಾ ದೇಶದ ಪತನಕ್ಕೆ ಕಾರಣವಾಗಬಲ್ಲ ಅಂಶಗಳನ್ನು ಟ್ರಿಗರ್ ಮಾಡುತ್ತದೆ.

ಬಾಡಿಗೆ ಹೆಚ್ಚಾದ ಕಾರಣ ಅಮೇರಿಕಾದ ಹಲವಾರು ನಗರಗಳಲ್ಲಿ ಅಫೀಸ್ ಜಾಗಗಳು ಖಾಲಿಯಾಗಿವೆ . ಇದರ ಪ್ರಮಾಣ ಸುಮಾರು 20 ಪ್ರತಿಶತ ಅಥವಾ ಇನ್ನೂ ಹೆಚ್ಚು! work‑from‑home, ಹೈಬ್ರಿಡ್ ಕೆಲಸ ಇತ್ಯಾದಿಗಳ ಪರಿಣಾಮ.

ಸುಮಾರು ಒಂದೂವರೆ ಟ್ರಿಲಿಯನ್ ಡಾಲರ್ ಮೌಲ್ಯದ ಕಮರ್ಷಿಯಲ್ ರಿಯಲ್ ಎಸ್ಟೇಟ್ ಸಾಲಗಳು ಈ ವರ್ಷ ಅಂದರೆ 2026 ರಲ್ಲಿ ತೀರಿಸಬೇಕಾಗುತ್ತದೆ. ಇವುಗಳನ್ನು ಹೊಸ ಬಡ್ಡಿದರದಲ್ಲಿ ಹೊಸದಾಗಿ ರಿನ್ಯೂ ಮಾಡಬೇಕು ಇಲ್ಲವೇ ತೀರಿಸಬೇಕು/ ತೀರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಇದನ್ನು ರಿನ್ಯೂ ಮಾಡಬೇಕಾಗುತ್ತದೆ. ಹೀಗಾದಾಗ ಹೊಸ ಬಡ್ಡಿ ಹೆಚ್ಚಿನ ಒತ್ತಡವನ್ನು ಸೃಷ್ಟಿಸುತ್ತದೆ.

ಗಮನಿಸಿ , ಈ ಸಾಲಗಳಿಗೆ ಹೆಚ್ಚು ಒಡ್ಡಿಕೊಂಡಿರುವವರು ದೊಡ್ಡ ವಾಲ್ ಸ್ಟ್ರೀಟ್ ಬ್ಯಾಂಕುಗಳಿಗಿಂತ ಪ್ರಾದೇಶಿಕ ಹಾಗೂ ಸಣ್ಣ ಬ್ಯಾಂಕುಗಳು.ಬ್ಯಾಂಕುಗಳು ಹೇಗೆ ಕುಸಿಯಬಹುದು ಎನ್ನುವುದಕ್ಕೆ ಒಂದು ಉದಾಹರಣೆಯನ್ನು ಹೇಳುತ್ತೇನೆ .

ಜಮೀನುದಾರರು (landlords) ಕಟ್ಟಡಗಳ ಮೌಲ್ಯ ಕುಸಿತ, ಹೆಚ್ಚಿದ ಬಡ್ಡಿದರ, ಖಾಲಿ ಬಾಡಿಗೆ ಕಾರಣ ಸಾಲ ತೀರಿಸಲು ಕಷ್ಟಪಟ್ಟು, ಡಿಫಾಲ್ಟ್ ಆಗಲು ಶುರು ಮಾಡುತ್ತಾರೆ. ಬ್ಯಾಂಕುಗಳ ಬಳಿ ಹಿಂದಿನ ದೀರ್ಘಾವಧಿ ಬಾಂಡ್ ನಷ್ಟವೂ ಇದ್ದರೆ ಅಲ್ಲಿಗೆ ಮುಗಿಯಿತು. ಬಂಡವಾಳ ಸಂಗ್ರಹ (capital buffer) ಕಡಿಮೆಯಾಗುತ್ತದೆ. ಹಣವಿದ್ದೂ ಕೂಡ ಸಾಲ ನೀಡಲಾಗದ ಸ್ಥಿತಿಗೆ ಬ್ಯಾಂಕು ತಲುಪುತ್ತದೆ. ಇದು ಜನರಿಗೆ ಅಥವಾ ಉದ್ಯಮಗಳಿಗೆ “ಈ ಬ್ಯಾಂಕ್ ಸುರಕ್ಷಿತವೇ?” ಎಂಬ ಸಂದೇಹ ಬರಲು ಶುರುವಾಗುತ್ತದೆ. ಆಗ ಸ್ಥಳೀಯ ಮಟ್ಟದಲ್ಲಿ ಡಿಪಾಸಿಟ್‌ ಹಿಂಪಡೆಯುವ ಸಂಚಲನಗಳು (bank run) ಕಾಣಬಹುದು.

ಇಲ್ಲಿಯವರೆಗೆ ನಿಯಂತ್ರಕರು ಇಂಥ ಪ್ರಕರಣಗಳನ್ನು ಒಂದೊಂದರಂತೆ ಹಿಡಿದು ನಿರ್ವಹಿಸಿದ್ದಾರೆ, ಆದರೆ ಹಲವಾರು ಬ್ಯಾಂಕುಗಳಲ್ಲಿ ಒಟ್ಟಿಗೆ ಒತ್ತಡ ಹೆಚ್ಚಾದರೆ, ಇದು ಸಣ್ಣ ವ್ಯವಹಾರಗಳು ಬಳಸುವ ಸಾಲ ಮಾರ್ಗವನ್ನು ತೀರ ಕಟ್ಟಿಹಾಕುವ, ಆಮೇಲೆ ಆರ್ಥಿಕ ಚಟುವಟಿಕೆಗೆ ಹೊಡೆತ ತರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದು 2008 ರಂತೆ ದೊಡ್ಡ “ಗ್ಲೋಬಲ್ ಫೈನಾನ್ಷಿಯಲ್ ಕ್ರೈಸಿಸ್” ಆಗುವ ಸಾಧ್ಯತೆ ಎಷ್ಟು?

ಯಾವ ಕ್ಷಣದಲ್ಲಿ ಕೂಡ ಇದು ಆಗಬಹುದು. ಇದನ್ನು ಮುಂದೂಡುವ ಆಟವೇ ಯುದ್ಧ . ಆದರೆ ಎಷ್ಟು ದಿನಗಳು ಹೀಗೆ ಮುಂದೂಡಬಹುದು ಎನ್ನುವುದು ಪ್ರಶ್ನೆ. ಅಮೇರಿಕಾ ಕುಸಿತ ಕಂಡರೆ ಅದು ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎನ್ನುವುದು ನಿರ್ವಿವಾದ. ಆದರೆ 2008 ರಿಗಿಂತ ಇಂದು ಇರುವ ಕೆಲವು ಮುಖ್ಯ ವ್ಯತ್ಯಾಸಗಳು:

ಬ್ಯಾಂಕುಗಳ ಬಂಡವಾಳ ಮತ್ತು ನಿಯಂತ್ರಣ ಕಾನೂನು 2008 ರಿಗಿಂತ ಕಠಿಣವಾಗಿದೆ; ಸಾಮಾನ್ಯವಾಗಿ ಅವು ಹಿಂದಿಗಿಂತ ಸ್ಥಿರವಾಗಿವೆ ಎಂದು ಮೌಲ್ಯಮಾಪನಗಳು ಸೂಚಿಸುತ್ತವೆ. ಅವತ್ತಿನ ದಿನದಲ್ಲಿ ರಿಯಲ್ ಎಸ್ಟೇಟ್ ಕುಸಿತ ದೊಡ್ಡ “ಸಬ್‑ಪ್ರೈಮ್ ಹೌಸಿಂಗ್ ಬಬಲ್” ಆಗಿ ಸಂಪೂರ್ಣ ಸಿಸ್ಟಂ ಅನ್ನು ಏಕಕಾಲದಲ್ಲಿ ಸ್ಫೋಟಗೊಳಿಸಿತು. ಆದರೆ ಇವತ್ತಿನ ದಿನದಲ್ಲಿ ಅಂತಹ ಭಯವಿಲ್ಲ.

ಆದರೂ, ಸಂಪೂರ್ಣ ವ್ಯವಸ್ಥೆ ಒಳಗಿನಿಂದ ನಾಜೂಕಾಗಿದೆ, ಏಕೆಂದರೆ ಹಲವಾರು ಸಮಸ್ಯೆಗಳು ಒಂದಕ್ಕೊಂದು ಲಿಂಕ್ ಆಗುವ ಸಾಧ್ಯತೆ ಇದೆ:ಸರಕಾರದ ಸಾಲ, ದುಬಾರಿ ಬಡ್ಡಿ, ದುರ್ಬಲ ವಾಣಿಜ್ಯ ರಿಯಲ್ ಎಸ್ಟೇಟ್, ಹಣದುಬ್ಬರ , ಅತಿಯಾದ AI ಮೇಲೆ ಮಾಡಿರುವ ಹೂಡಿಕೆ ಎಲ್ಲವೂ ಒಟ್ಟಾಗಿ ಅಮೆರಿಕಾವನ್ನು ಮುಳುಗಿಸುವ ಶಕ್ತಿಯನ್ನು ಹೊಂದಿವೆ.

ಹೋಗುವ ಮುನ್ನ: ಅಮೇರಿಕಾ ಎಕಾನಮಿ ಟೈಮ್ ಬಾಂಬ್ ಮೇಲೆ ಕುಳಿತಿದೆ. ಅದು ಯಾವ ಸಮಯದಲ್ಲಿ ಬೇಕಾದರೂ ಸಿಡಿಯಬಹುದು. ಈಗಾಗಲೇ ಅಲ್ಲಿ ನಿರುದ್ಯೋಗ ಪರ್ವ ಶುರುವಾಗಲಿದೆ. ಎಲ್ಲಿಯವರೆಗೆ ಹೆಚ್ಚಿನ ಅವಕಾಶ ಮತ್ತು ಹಣವಿತ್ತು ಅಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಯಾವಾಗ ಹಣಕಾಸಿನ ಹರಿವಿಗೆ ಕತ್ತರಿ ಬೀಳುತ್ತದೆ. ಆಗ ಸಮಾಜದ ನಿಜವಾದ ಬಣ್ಣ ಬಯಲಾಗುತ್ತದೆ.

ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ವಲಸಿಗರು ಇವತ್ತು ಅಮೆರಿಕಕ್ಕೆ ಭಾರವಾಗಿ ಕಾಣುತ್ತಿದೆ . ಮುಂದಿನ ದಿನಗಳಲ್ಲಿ ಇನ್ನಷ್ಟು ಜನಾಂಗೀಯ ಕಲಹಕ್ಕೂ ಇದು ಕಾರಣವಾಗುತ್ತದೆ. ಅನಿವಾಸಿ ಭಾರತೀಯರು ಭಾರತಕ್ಕೆ ಮರಳುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಮುಂದಿನ ಐದು ವರ್ಷ ಇದು ಸತತವಾಗಿ ಮುಂದುವರೆಯಲಿದೆ . ಅಮೇರಿಕಾ ತನ್ನ ಕುಸಿತವನ್ನು ಒಪ್ಪಿಕೊಂಡು ಹೊಸದಾಗಿ ತನ್ನ ಸಮಾಜವನ್ನು , ಎಕಾನಾಮಿಯನ್ನು ಕಟ್ಟಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಂಡಿಟ್ಟು ಸುವೇಂದು ಅಧಿಕಾರಿ ಆಪ್ತನ ಹತ್ಯೆ: CCTV ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ, ಉತ್ತರ 24 ಪರಗಣದಲ್ಲಿ ಪರಿಸ್ಥಿತಿ ಉದ್ವಿಗ್ನತೆ

Operation Sindoorಗೆ 1 ವರ್ಷ: 'ಭಾರತ ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ'; ಶತ್ರುರಾಷ್ಟ್ರಕ್ಕೆ ಕಠಿಣ ಸಂದೇಶ ರವಾನಿಸಿದ ಭಾರತೀಯ ಸೇನೆ

TVK ವಿಜಯ್ ಗೆ ಮತ್ತೊಂದು ಹಿನ್ನಡೆ: ರಾತ್ರೋರಾತ್ರಿ ದಳಪತಿಗೆ ನೀಡಿದ್ದ ಭದ್ರತೆ ವಾಪಸ್!

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ; ಇರಾನ್ ಹಡಗಿನ ಮೇಲೆ ದಾಳಿ, ಅಮೆರಿಕಾ-ಇರಾನ್ ಸಂಘರ್ಷ ತೀವ್ರ..!

'ಜಪ್ಪಯ್ಯ ಅಂದರೂ ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ, ಬೇಕಾದರೆ ಕೇಂದ್ರ ಸರ್ಕಾರವೇ ನನ್ನನ್ನು ವಜಾ ಮಾಡಲಿ': ಮಮತಾ ಬ್ಯಾನರ್ಜಿ

SCROLL FOR NEXT