ಒಂದು ಕಾಲದಲ್ಲಿ ಹೊಸದಾಗಿ ಸೇನೆಗೆ ನೇಮಕಗೊಂಡ ಯುವ ಯೋಧರನ್ನು ರಾಷ್ಟ್ರ ಧ್ವಜದ ನೆರಳಿನಲ್ಲಿ ತರಬೇತಿ ನೀಡಿದ್ದ ಓರ್ವ ನಿವೃತ್ತ ಯೆಮೆನಿ ಅಧಿಕಾರಿ, ಈಗ ಒಂದು ತಾತ್ಕಾಲಿಕ ಗ್ಯಾರೇಜ್ನಲ್ಲಿ ಕುಳಿತು, ಯುವ ಯೋಧರಿಗೆ ಡ್ರೋನ್ಗಳು ನಿರಂತರವಾಗಿ ಹಾರಾಡುವಂತೆ ಮಾಡುವ ಸಣ್ಣ ಕಂಪ್ಯೂಟರ್ಗಳನ್ನು ಅಳವಡಿಸುವ ತರಬೇತಿ ನೀಡುವುದನ್ನು ಊಹಿಸಿಕೊಳ್ಳಿ.
ಈ ಚಿತ್ರಣವೇ ಸೌದಿ - ಹೌತಿ ಯುದ್ಧದ ಕುರಿತು ರಕ್ಷಣಾ ವೀಕ್ಷಕರಲ್ಲಿ ಮೂಡಿರುವ ಅನುಮಾನಗಳಿಗೆ ಯಾವುದೇ ಕ್ಷಿಪಣಿಗಳಿಗಿಂತ ಹೆಚ್ಚು ಕರಾರುವಾಕ್ಕಾದ ಉತ್ತರವನ್ನು ನೀಡುತ್ತದೆ. ಹೌತಿಗಳು ಈಗಾಗಲೇ ಬಹುತೇಕ ಸಂಖ್ಯಾಬಲವನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ, ನಿರಂತರ ವಾಯು ದಾಳಿಗಳ ನಡುವೆ ಅವರ ಡ್ರೋನ್ಗಳು ಮತ್ತು ಕ್ಷಿಪಣಿಗಳು ಸೌದಿಯ ರಕ್ಷಣೆಯನ್ನು ಭೇದಿಸುತ್ತಿದ್ದು, ರಾಜಧಾನಿ ರಿಯಾದನ್ನೂ ತಲುಪುತ್ತಿವೆ.
ಹೌತಿಗಳ ರಹಸ್ಯ ಆರಂಭಗೊಳ್ಳುವುದು ಜನರಿಂದಲೇ ಹೊರತು ಹಾರ್ಡ್ವೇರ್ಗಳಿಂದಲ್ಲ. ಹೌತಿಗಳು ಅಧಿಕಾರಕ್ಕೆ ಬಂದಾಗ, ಅವರು ಹಳೆಯ ಯೆಮೆನಿ ಸರ್ಕಾರದ ವೃತ್ತಿಪರರನ್ನು ಕೆಲಸದಿಂದ ಕಿತ್ತುಹಾಕಲಿಲ್ಲ. ಬದಲಿಗೆ, ಅವರನ್ನೂ ತನ್ನ ವ್ಯವಸ್ಥೆಯೊಳಗೆ ಸೇರಿಸಿಕೊಂಡರು. ಮಾಜಿ ಅಧಿಕಾರಿಗಳು, ಗುಪ್ತಚರ ಅಧಿಕಾರಿಗಳು, ತಂತ್ರಜ್ಞರು ಮತ್ತು ತಜ್ಞರನ್ನು ಹೌತಿ ವ್ಯವಸ್ಥೆಯೊಳಗೆ ತರಲಾಯಿತು.
ಅವರ ಪ್ರಾವೀಣ್ಯತೆಯನ್ನು ಗೆರಿಲ್ಲಾ ಯುದ್ಧತಂತ್ರದ ಕುರಿತ ಹೌತಿಗಳ ಆಸಕ್ತಿಯೊಡನೆ ಜೋಡಿಸಲಾಯಿತು. ಇದರ ಪರಿಣಾಮವಾಗಿ, ಹೌತಿಗಳು ದೈನಂದಿನ ಸೇನೆಯಂತೆ ತರಬೇತಿ ಹೊಂದುತ್ತಾರೆ. ಆದರೆ ಸಣ್ಣದಾದ, ದಾಳಿ ನಡೆಸುವ ಗುಂಪಿನಂತಹ, ದಾಳಿ ನಡೆಸಿ ಮರೆಯಾಗಿಬಿಡುವಂತಹ ಪಡೆಗಳಂತೆ ಕಾರ್ಯಾಚರಿಸುತ್ತಾರೆ. ಹೌತಿಗಳ ದಾಳಿಗೆ ಪ್ರತಿದಾಳಿ ಯೋಜಿಸುವಷ್ಟರಲ್ಲಿ ದಾಳಿಕೋರರು ಮರೆಯಾಗುತ್ತಾರೆ.
ಇದನ್ನು ರಕ್ಷಣಾ ಪರಿಭಾಷೆಯಲ್ಲಿ ಅಸಮತೋಲನದ ಯುದ್ಧ ಎನ್ನಲಾಗುತ್ತದೆ. ಅಂದರೆ, ಒಂದು ಬದಿ ಇನ್ನೊಂದು ಪಡೆಯೊಡನೆ ಶಸ್ತ್ರಕ್ಕೆ ಪ್ರತಿಶಸತ್ತ್ರ ಎನ್ನುವ ಪ್ರಮಾಣದಲ್ಲಿ ಯುದ್ಧ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅದು ಪ್ರಬಲ ಎದುರಾಳಿಯ ಲೆಕ್ಕಾಚಾರದಂತೆ ಯುದ್ಧಕ್ಕಿಳಿಯದೆ, ತನ್ನದೇ ಆದ ಯುದ್ಧರಂಗದಲ್ಲಿ ಕದನಕ್ಕೆ ಇಳಿಯುತ್ತದೆ.
ಇರಾನ್ ಹೌತಿಗಳ ಈ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿತು. ವರದಿಗಳ ಪ್ರಕಾರ, ಇರಾನಿನ ಅಧಿಕಾರಿಗಳು ಕಾರ್ಯಾಗಾರಗಳನ್ನು ನಡೆಸಿ, ಹೌತಿ ಇಂಜಿನಿಯರ್ಗಳಿಗೆ ಸಂಪೂರ್ಣ ಸಿಸ್ಟಮ್ಗಳನ್ನು ಜೋಡಿಸುವುದನ್ನು, ಡ್ರೋನ್ಗಳನ್ನು ಚಲಾಯಿಸುವ ಸಣ್ಣ ಕಂಪ್ಯೂಟರ್ಗಳಿಂದ, ಜಾಮಿಂಗ್ ನಿರೋಧಕ ಜಿಪಿಎಸ್ ಚಿಪ್ಗಳ ತನಕ ಎಲ್ಲವನ್ನೂ ಕಲಿಸಿಕೊಟ್ಟಿದ್ದಾರೆ. ಜಾಮಿಂಗ್ ಎಂದರೆ ಇಲೆಕ್ಟ್ರಾನಿಕ್ ಗದ್ದಲವಾಗಿದ್ದು, ಒಂದು ಆಯುಧ ತನ್ನ ಮಾರ್ಗವನ್ನು ಹುಡುಕಲು ಬಳಸುವ ಉಪಗ್ರಹ ಸಂಕೇತವನ್ನು ದುರ್ಬಲಗೊಳಿಸುತ್ತದೆ. ಆದರೆ, ಒಂದು ಚಿಪ್ ಇದನ್ನು ನಿವಾರಿಸುತ್ತದೆಂದರೆ, ಆಯುಧ ಜಾಮಿಂಗ್ ಅನ್ನೂ ಎದುರಿಸಿ ನಿರ್ಧರಿತ ಗುರಿಯನ್ನು ತಲುಪುತ್ತದೆ. ಈ ಪ್ರಮಾಣದ ಕೌಶಲವನ್ನು ಕೇವಲ ಬಾಂಬ್ ದಾಳಿ ನಡೆಸಿ ಇಲ್ಲವಾಗಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಸೌದಿ ವಾಯು ದಾಳಿಗಳಿಗೆ ಇನ್ನೂ ಹೌತಿಗಳ ಕಾರ್ಯಾಚರಣೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲ.
ಆಯುಧಗಳ ಜ್ಞಾನವನ್ನು ಕಾರ್ಯರೂಪಕ್ಕೆ ತರಲು ಕಚ್ಚಾವಸ್ತುಗಳು ಬೇಕು. ಇದಕ್ಕಾಗಿ ಹೌತಿಗಳು ವಿವಿಧ ಮೂಲಗಳಿಂದ ಪೂರೈಕೆ ಸರಪಳಿಯನ್ನು ನಿರ್ಮಿಸಿದ್ದಾರೆ. ಹೌತಿಗಳು ಎಲ್ಲವನ್ನೂ ಶೂನ್ಯದಿಂದ ಆರಂಭಿಸಿದ್ದಲ್ಲ. ಬದಲಿಗೆ, ಈಗಾಗಲೇ ಯೆಮೆನ್ನಲ್ಲಿದ್ದ ಸಂಪನ್ಮೂಲಗಳನ್ನು ವಶಪಡಿಸಿಕೊಂಡು, ಬಾಹ್ಯ ಭಾಗಗಳು ಮತ್ತು ಪ್ರಾವೀಣ್ಯತೆಗಳನ್ನು ಜೋಡಿಸಿಕೊಂಡರು. 2014ರಲ್ಲಿ ಹೌತಿಗಳು ಸನಾ ನಗರ ಮತ್ತು ಯೆಮೆನ್ನ ಬಹುಪಾಲು ಪ್ರದೇಶಗಳನ್ನು ವಶಪಡಿಸಿಕೊಂಡಾಗ ಇದಕ್ಕೆ ಸೂಕ್ತ ತಳಹದಿ ನಿರ್ಮಾಣಗೊಂಡಿತು. ರಾಜಧಾನಿ ಸನಾದೊಡನೆ ಯೆಮೆನಿ ಸರ್ಕಾರದ ಮಿಲಿಟರಿ ನೆಲೆಗಳು ಮತ್ತು ಶಸ್ತ್ರಾಗಾರಗಳು, ಸಶಸ್ತ್ರ ವಾಹನಗಳು, ಆರ್ಟಿಲರಿ, ರಾಕೆಟ್ ಲಾಂಚರ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಹೌತಿಗಳ ಕೈ ಸೇರಿದವು. ಆ ಒಂದು ಬೆಳವಣಿಗೆಯೇ ಹೌತಿಗಳನ್ನು ಬುಡಕಟ್ಟು ಚಳುವಳಿಯಿಂದ ಸಾಂಪ್ರದಾಯಿಕ ಮಿಲಿಟರಿ ಶಕ್ತಿಯಾಗಿ ಬೆಳೆಸಿತು.
ಈ ಶಸ್ತ್ರಾಸ್ತ್ರ ಸಂಗ್ರಹದೊಡನೆ ಯೆಮೆನ್ ಬಾಹ್ಯ ಬೆಂಬಲದ ಜಾಲವನ್ನೂ ಹೊಂದಿದೆ. ಇರಾನ್ ಹೌತಿಗಳ ಪ್ರಮುಖ ಪೋಷಕನಾಗಿದ್ದು, ಆಯುಧಗಳು ಮತ್ತು ಪ್ರಮುಖ ತಂತ್ರಜ್ಞಾನಗಳನ್ನು ಹೌತಿಗಳಿಗೆ ಒದಗಿಸಿದೆ. ಹಾಗೆಂದು ಇರಾನ್ ಹೌತಿಗಳ ಏಕೈಕ ಬೆಂಬಲಿಗನಲ್ಲ. ರಷ್ಯಾ ಹೌತಿಗಳಿಗೆ ಆಯುಧಗಳನ್ನು ಮಾರಾಟ ಮಾಡಿದ್ದು, ಚೀನಾ ಬಿಡಿಭಾಗಗಳನ್ನು ಪೂರೈಸಿದೆ ಎಂದು ಅಮೆರಿಕ ಆರೋಪಿಸಿದೆ. ಟೆಹರಾನ್ ಒಂದು ಪ್ರಾಯೋಗಿಕ ಕಾರಣಕ್ಕಾಗಿ ಹೌತಿಗಳನ್ನು ಚೀನೀ ಪೂರೈಕೆದಾರರತ್ತ ಕಳುಹಿಸಿದೆ. ಅದೇನೆಂದರೆ, ಜಗತ್ತಿನ ಬಹುತೇಕ ಎಲ್ಲೆಡೆಯೂ ಬಳಕೆಯಾಗುವ ಡ್ರೋನ್ ಬಿಡಿಭಾಗಗಳು ಚೀನಾದಲ್ಲೇ ಉತ್ಪಾದನೆಗೊಳ್ಳುತ್ತಿವೆ. ಹಳೆಯ ಆಯುಧಗಳು, ಹೊಸ ಬೆಂಬಲಿಗರು, ಮತ್ತು ಜಾಗತಿಕ ವ್ಯಾಪಾರಗಳು ಜೊತೆಯಾಗಿ ಹೌತಿಗಳು ಇನ್ನೂ ಕಾರ್ಯಾಚರಿಸುವಂತೆ ಮಾಡಿವೆ.
ಇವೆಲ್ಲವೂ ಜೊತೆಯಾಗಿ, ಹೌತಿಗಳ ಸೀಮಿತ ಬತ್ತಳಿಕೆ ಮತ್ತು ಅಸಾಧಾರಣ ಧೈರ್ಯಕ್ಕೆ ಕೊಡುಗೆ ನೀಡಿವೆ. ತಜ್ಞರ ಅಂದಾಜಿನ ಪ್ರಕಾರ, ಹೌತಿಗಳ ಬಳಿ 100ರಿಂದ 200 ದೀರ್ಘ ವ್ಯಾಪ್ತಿಯ ಬ್ಯಾಲಿಸ್ಟಿಕ್ ಡ್ರೋನ್ಗಳು ಮತ್ತು 1,000ಕ್ಕೂ ಕಡಿಮೆ ಡ್ರೋನ್ಗಳಿವೆ. ಮೇಲ್ನೋಟಕ್ಕೆ ಪ್ರಬಲ ದೇಶವೊಂದಕ್ಕೆ ದೊಡ್ಡ ತೊಂದರೆ ಉಂಟುಮಾಡಲು ಇದು ಸಣ್ಣ ಪ್ರಮಾಣವಾದರೂ, ಪ್ರತಿಯೊಂದು ಆಯುಧವೂ ಹೆಚ್ಚಿನ ಹಾನಿ ಉಂಟುಮಾಡುವಂತಹವೇ ಆಗಿವೆ.
ಕ್ಷಿಪಣಿಗಳು ದೀರ್ಘ ವ್ಯಾಪ್ತಿಯ ದಾಳಿ ನಡೆಸುವ ಆಯುಧಗಳಾಗಿದ್ದು, ಕಡಿಮೆ ಸಂಖ್ಯೆಯಲ್ಲಿದ್ದರೂ ಬಲು ದೂರದ ತನಕ ದಾಳಿ ನಡೆಸಲು ನಿರ್ಮಾಣಗೊಂಡಿವೆ. ಈ ಕ್ಷಿಪಣಿಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಕ್ಷಿಪಣಿಯೊಂದನ್ನು ಹೌತಿಗಳು ಹೈಪರ್ಸಾನಿಕ್ ಕ್ಷಿಪಣಿ ಎನ್ನುತ್ತಾರೆ. ಹೈಪರ್ಸಾನಿಕ್ ಎಂದರೆ ಶಬ್ದದ ವೇಗಕ್ಕಿಂತ ಕನಿಷ್ಠ ಐದು ಪಟ್ಟು ಹೆಚ್ಚು ವೇಗವಾಗಿ ಸಾಗುವ ಕ್ಷಿಪಣಿಯಾಗಿದ್ದು, ಈ ವೇಗದಲ್ಲಿ ಸಾಗುವ ಕ್ಷಿಪಣಿಯನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಗಳಿಗೆ ಕೇವಲ ಕೆಲವು ಸೆಕೆಂಡುಗಳ ಕಾಲಾವಧಿಯಷ್ಟೇ ಲಭಿಸುತ್ತದೆ. ಪ್ಯಾಲೆಸ್ತೀನ್ 2 ಎನ್ನುವ ಹೆಸರು ಹೊಂದಿರುವ ಈ ಕ್ಷಿಪಣಿ 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಇಸ್ರೇಲ್ ವಿರುದ್ಧ ನಿರಂತರವಾಗಿ ಬಳಕೆಯಾಗಿದೆ. ಇಷ್ಟರ ಮಟ್ಟಿನ ಸಮರ್ಥ ಕ್ಷಿಪಣಿಯನ್ನು ಹೌತಿಗಳೇ ನಿರ್ಮಿಸುವುದು ಅಸಾಧ್ಯವಾಗಿದ್ದು, ಇದು ಬಹುತೇಕ ಇರಾನಿಯನ್ ಮೂಲದ ಕ್ಷಿಪಣಿಯಾಗಿದೆ. ಎರಡನೇ ಕ್ಷಿಪಣಿಯಾದ ಹಾತಿಮ್ ಸಹ ಬಹುತೇಕ ಇರಾನಿಯನ್ ವಿನ್ಯಾಸವನ್ನೇ ಆಧರಿಸಿದ್ದು, ಬಹುತೇಕ ಅರ್ಧ ಟನ್ ತೂಕದ ಸಿಡಿತಲೆಗಳನ್ನು ಹೊಂದಿದೆ. ಇದು ಬಹುತೇಕ ಒಂದು ಸಣ್ಣ ಕಾರಿನ ತೂಕಕ್ಕೆ ಸಮನಾಗಿದ್ದು, ಅಂದಾಜು 1,400 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇನ್ನು ಮೂರನೇ ಕ್ಷಿಪಣಿಯಾದ ಕುದ್ಸ್ ಒಂದು ಕ್ರೂಸ್ ಕ್ಷಿಪಣಿಯಾಗಿದ್ದು, ರಾಕೆಟ್ ರೀತಿಯಲ್ಲದೆ, ಬಹುತೇಕ ನೆಲವನ್ನು ತಬ್ಬಿ ಹಾರುವ ಮಾನವರಹಿತ ಏರ್ಕ್ರಾಫ್ಟ್ ರೀತಿಯಲ್ಲಿ ಕಾರ್ಯಾಚರಿಸುತ್ತದೆ. ಇದು ಅಷ್ಟೊಂದು ಕೆಳ ಹಂತದಲ್ಲಿ ಹಾರಾಟ ನಡೆಸುವುದರಿಂದ, ರೇಡಾರ್ ಬೀಮ್ಗಳಿಗೆ ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಡ್ರೋನ್ಗಳು ಅತ್ಯಂತ ಅಗ್ಗದ, ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವ ಆಯುಧಗಳಾಗಿದ್ದು, ರಕ್ಷಣೆಯನ್ನು ಅಸಮರ್ಥಗೊಳಿಸಲು ಅವುಗಳನ್ನು ಬಹುದೊಡ್ಡ ಸಂಖ್ಯೆಯಲ್ಲಿ ಅಲೆಗಳಂತೆ ಕಳುಹಿಸಲಾಗುತ್ತದೆ. ಹೆಚ್ಚು ಜನಪ್ರಿಯವಾಗಿರುವ ಹೌತಿ ಡ್ರೋನ್ಗಳೆಂದರೆ ಸಮದ್ ಮತ್ತು ಕಾಸೆಫ್ ಆಗಿದ್ದು, ಇವು ಆತ್ಮಹತ್ಯಾ ಡ್ರೋನ್ಗಳಾಗಿವೆ. ಅಂದರೆ, ಅವು ಗುರಿಗಳತ್ತ ಧುಮುಕಿ, ಮನೆಗೆ ಮರಳುವ ಬದಲು ಅಲ್ಲೇ ಸ್ಫೋಟಿಸುವಂತೆ ವಿನ್ಯಾಸಗೊಂಡಿವೆ. ಇವು ಬಹುತೇಕ 2,400 ಕಿಲೋಮೀಟರ್ ಸಾಗಬಲ್ಲವು. ಸಮುದ್ರದಲ್ಲಿ ಹೌತಿಗಳು ಸ್ಫೋಟಕ ಬೋಟ್ಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದು, ಅವರು ಮಿನಿ ಸಬ್ಮರೀನ್ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ವರದಿಗಳಿವೆ. ಇವುಗಳನ್ನು ಸ್ವಯಂಚಾಲಿತ ಸಬ್ಮರ್ಸಿಬಲ್ಗಳು ಎನ್ನಲಾಗಿದ್ದು, ಇವುಗಳೊಡನೆ ನೌಕಾಪಡೆಯ ಮೈನ್ಗಳೂ ಇವೆ.
ಇವೆಲ್ಲವನ್ನೂ ಒಂದರ ಪಕ್ಕ ಒಂದರಂತೆ ಇರಿಸಿ ಗಮನಿಸಿದರೆ ರಹಸ್ಯ ಬಯಲಾಗುತ್ತದೆ. ಸೌದಿ ಅರೇಬಿಯಾದ ಬಳಿ ಅಪಾರ ಪ್ರಮಾಣದ ಆಯುಧಗಳು, ಸಂಪತ್ತು, ಮತ್ತು ಪಶ್ಚಿಮ ಏಷ್ಯಾದ ಅತ್ಯಂತ ಆಧುನಿಕವಾದ ಸೇನೆಗಳಲ್ಲೊಂದು ಲಭ್ಯವಿದ್ದು, ಜಗತ್ತಿನಲ್ಲೇ ಅತ್ಯಧಿಕ ರಕ್ಷಣಾ ಬಜೆಟ್ಗಳ ಸಾಲಿನಲ್ಲಿ ಸೌದಿಯ ರಕ್ಷಣಾ ಬಜೆಟ್ ಸಹ ಇದೆ. ಆದರೆ, ಅದು ಇಂದಿಗೂ ಒಂದೆಡೆ ನೆಲೆಯಾಗದೆ ಹೋರಾಟ ನಡೆಸುತ್ತಿರುವ ಶತ್ರುವನ್ನು ಎದುರಿಸುವ ವಿಧಾನಕ್ಕೆ ಮಾತ್ರ ಹೊಂದಿಕೊಂಡಿಲ್ಲ. ಹೌತಿಗಳ ಪ್ರತಿಯೊಂದು ಡ್ರೋನನ್ನು ಹೊಡೆದುರುಳಿಸಿದಾಗಲೂ ರಹಸ್ಯ ಕಾರ್ಯಾಗಾರಗಳಲ್ಲಿ ಇನ್ನೊಂದು ಡ್ರೋನ್ ಸಿದ್ಧವಾಗಿರುತ್ತದೆ. ರಿಯಾದ್ ಪಾಲಿಗೆ ಇಲ್ಲಿ ಅದರ ರಾಜಧಾನಿಯ ಭದ್ರತೆ, ಅದರ ರಕ್ಷಣಾ ವ್ಯವಸ್ಥೆಗೆ ಸವಾಲುಗಳು ರಾಷ್ಟ್ರೀಯ ಸಮಸ್ಯೆಯೇ ಆಗಿವೆ. ಸೌದಿ ಕೇವಲ ಹಣದಿಂದಲೇ ಹೌತಿಗಳ ತಾಳ್ಮೆಯ, ನಿರಂತರವಾದ ದಾಳಿಯನ್ನು ಮತ್ತು ಅಪಾರ ಪರಿಶ್ರಮದಿಂದ ಗಳಿಸಿದ ಮಿಲಿಟರಿ ಜ್ಞಾನವನ್ನು ಎದುರಿಸಲು ಸಾಧ್ಯವೇ ಎನ್ನುವುದು ಕಠಿಣ ಪ್ರಶ್ನೆಯಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com