ಶಾಲೆಗೆ ಹೋಗುತ್ತಿರುವ ಮಕ್ಕಳ ಸಮರ್ಪಕ ಬೆಳವಣಿಗೆಗೆ ಆರೋಗ್ಯಕರ ಮತ್ತು ಸಂತುಲಿತ ಆಹಾರ ಅತ್ಯಗತ್ಯ. ಆದ್ದರಿಂದ ಮಕ್ಕಳು ಮಾಡುವ ಪ್ರತಿ ಊಟವೂ ಸಹ ಮುಖ್ಯವಾದುದು. ಮಕ್ಕಳ ಸಾಮರ್ಥ್ಯ ಅಥವಾ ಕ್ಷಮತೆಯ ಪ್ರಮಾಣವು ಹೆಚ್ಚು ಇದ್ದರೆ ಅವರಿಗೆ ಶಾಲೆಯಲ್ಲಿ ಬೇಗನೆ ಸುಸ್ತಾಗುವುದಿಲ್ಲ.
ಶಾಲೆಗೆ ಹೋಗುತ್ತಿರುವ ಮಕ್ಕಳ ಅಂದರೆ ಆರರಿಂದ 10 ವರ್ಷಗಳ ಮಕ್ಕಳಿನ ಆಹಾರ ಸೇವನೆಯ ಮಟ್ಟಕ್ಕೆ ಅನುಗುಣವಾಗಿ ಅವರ ಆಹಾರದಲ್ಲಿ ಒಳ್ಳೆಯ ಪೋಷಕಾಂಶಗಳಾದ ಕಾಬ್ಸೋಹೈಡ್ರೇಟ್ಸ್, ಪ್ರೋಟೀನ್ಸ್, ನಾರು ಮತ್ತು ಕೊಬ್ಬಿನ ಅಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ ಅವರಿಗೆ ಸಂತುಲಿತ ಆಹಾರವನ್ನು ಒದಗಿಸಬೇಕು. ಮಕ್ಕಳು ಸಮರ್ಥವಾಗಿ ಪೋಷಕಾಂಶಗಳನ್ನು ಪಡೆಯಲು ಮತ್ತು ಶಕ್ತಿವಂತರಾಗಿ ಬೆಳೆಯಲು ಪ್ರತಿದಿನ ಅವರಿಗೆ ಮೂರು ನಿಯಮಿತ ಊಟ ಮತ್ತು 1-2 ಉಪಾಹಾರಗಳನ್ನು ಒದಗಿಸಬೇಕು. ವಿವಿಧ ರೀತಿಯ, ವಿವಿಧ ಸ್ವಾದವುಳ್ಳ ಮತ್ತು ಪೋಷಣಾಭರಿತವಾದ, ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ರೀತಿಯ ವೈವಿಧ್ಯಮಯ ಆಹಾರವನ್ನು ತಯಾರಿಸಿ ಮಕ್ಕಳಿಗೆ ಕೊಡಬೇಕು.
ಬೆಳೆಯುತ್ತಿರುವ ಮಕ್ಕಳಿಗೆ ಸಮೃದ್ಧವಾಗಿ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ನೀಡಬೇಕು. ದವಸಧಾನ್ಯಗಳು ಊಟದ ಪ್ರಧಾನ ಅಂಶಗಳಾಗಿರಬೇಕು. ಗೋಧಿಯ ಹಿಟ್ಟು ಮತ್ತು ಬೆಳ್ತಿಗೆ ಅಕ್ಕಿಗಿಂತ, ಕುಚ್ಚಲಕ್ಕಿ ಅಥವಾ ಕಂದು ಅಕ್ಕಿ ಮತ್ತು ಇಡೀ ಗೋಧಿಯ ತರಿ ಯಾವಾಗಲೂ ಒಳ್ಳೆಯದು. ಇವು ಮಲಬದ್ಧತೆಯನ್ನು ಕಡಿಮೆ ಮಾಡುತ್ತವೆ. ದವಸಧಾನ್ಯಗಳನ್ನು ಮಿಶ್ರ ಮಾಡಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಆದರೆ ಆಹಾರ ತಯಾರಿಸುವಾಗ ಆಹಾರವನ್ನು ಚೆನ್ನಾಗಿ ಬೇಯಿಸುವುದನ್ನು ಮರೆಯಬಾರದು.
ಪೌಷ್ಟಿಕಾಂಶಗಳು ಹೆಚ್ಚಾಗಿರುವ ಹಾಲು, ತರಕಾರಿಗಳು, ಹಸಿರು ಸೊಪ್ಪುಗಳು ಮತ್ತು ದವಸಧಾನ್ಯಗಳು ಅತ್ಯಾವಶ್ಯಕ. ಆದ್ದರಿಂದ ಇಂತಹ ಆಹಾರಗಳಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಮಾಂಸಾಹಾರವಾದರೆ ಮೊಟ್ಟೆ, ಚಿಕನ್ ಮತ್ತು ಫಿಶ್ ಸೇವಿಸಬಹುದು.
ಶಾಲೆಗೆ ಹೋಗುವ ಮಕ್ಕಳಿಗೆ ಹಾಲು ಅತ್ಯುತ್ತಮ ಆಹಾರ. ಹಾಲಿನ ಸ್ಥಾನವನ್ನು ಇತರ ಯಾವ ಆಹಾರವೂ ಪಡೆಯಲು ಸಾಧ್ಯವಿಲ್ಲ. ಐದು ವರ್ಷದ ಮೇಲಿನ ಮಕ್ಕಳು ಪ್ರತಿದಿನ ಕನಿಷ್ಠ ಎರಡು ಲೋಟ (ಬೆಳಗ್ಗೆ ಮತ್ತು ಸಂಜೆ) ಹಾಲನ್ನು ಸೇವಿಸಬೇಕು. ತಂಪಾದ ಹಾಲಿಗಿಂತ ಬಿಸಿ ಹಾಲು ಒಳ್ಳೆಯದು. ಯಾಕೆಂದರೆ ಬಿಸಿ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಮಕ್ಕಳು ಹಾಲನ್ನು ಕುಡಿಯಲು ಇಷ್ಟಪಡದಿದ್ದರೆ ಮೊಸರು, ಮಿಲ್ಕ್ ಶೇಕ್ ನೀಡಬಹುದು.
ಮಕ್ಕಳು ಶಕ್ತಿವಂತರಾಗಿ ಬೆಳೆಯಲು ಮತ್ತು ಕ್ಷಮತೆಯಿಂದ ಇರಲು ಅವರಿಗೆ ಪ್ರತಿದಿನವೂ ತರಕಾರಿಗಳನ್ನು ಕೊಡಬೇಕು. ತರಕಾರಿಗಳು ದಿನನಿತ್ಯದ ಆಹಾರದಲ್ಲಿ ಪ್ರಮುಖವಾಗಿರಬೇಕು. ಮಕ್ಕಳು ಹಾಲನ್ನು ಕಡಿಮೆ ಸೇವಿಸುವುದಿದ್ದರೆ, ತರಕಾರಿಗಳನ್ನು ಹೆಚ್ಚು ಸೇವಿಸುವುದು ಅತ್ಯಾವಶ್ಯಕ. ಒಂದು ವೇಳೆ ಮಕ್ಕಳ ಆಹಾರದಲ್ಲಿ ಹೆಚ್ಚು ತರಕಾರಿಗಳನ್ನು ಸೇರಿಸದಿದ್ದರೆ ಅಥವಾ ಹೆಚ್ಚು ತರಕಾರಿಗಳನ್ನು ಅವರು ಸೇವಿಸದಿದ್ದರೆ ಅಂತಹ ಮಕ್ಕಳು ಯಾವಾಗಲೂ ಹಸಿದಂತೆ ಇರುತ್ತಾರೆ ಅಥವಾ ಹಸಿದಿರುತ್ತಾರೆ. ಏಳು ವರ್ಷದ ಅನಂತರ ಮಕ್ಕಳಿಗೆ ಎಲ್ಲಾ ಬಗೆಯ ತರಕಾರಿಗಳನ್ನು ತಿನ್ನಿಸಬಹುದು. ಕೆಲವು ಮಕ್ಕಳು ತರಕಾರಿ ತಿನ್ನಲು ಇಷ್ಟ ಪಡುವುದಿಲ್ಲ. ಅಂತಹವರಿಗೆ ಸಲಾಡ್ ಅಥವಾ ಸ್ಯಾಂಡ್ವಿಚ್ ರೂಪದಲ್ಲಿ ತರಕಾರಿಗಳನ್ನು ತಿನ್ನಿಸಬಹುದು.
ಮಾಂಸಾಹಾರಿಗಳು ಮಕ್ಕಳಿಗೆ ಮೀನು ಮತ್ತು ಮೊಟ್ಟೆಗಳನ್ನು ಕೊಡಬಹುದು. ಮಕ್ಕಳಿಗೆ ನಿತ್ಯವೂ ಮಾಗಿದ ತಾಜಾ ಹಣ್ಣುಗಳನ್ನು ಕೊಡಬೇಕು. ಪ್ರತಿ ದಿನ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ಬಳಿಕ ಹಣ್ಣು ಕೊಟ್ಟರೆ ಸರಿ.
ಮಕ್ಕಳು ಒಂದು ವೇಳೆ ಹಣ್ಣುಗಳನ್ನು ಇಷ್ಟ ಪಡದಿದ್ದರೆ ಒಣ ಹಣ್ಣುಗಳನ್ನು ಕೊಡಬಹುದು. ಒಣ ಹಣ್ಣುಗಳಾದ ಖರ್ಜೂರ, ಬಾದಾಮಿ, ಗೋಡಂಬಿ ಇತ್ಯಾದಿಗಳನ್ನು ಶಾಲಾ ಮಕ್ಕಳ ಆಹಾರದಲ್ಲಿ ಸೇರಿಸಬೇಕು.
ಮಕ್ಕಳು ಚೆನ್ನಾಗಿ ನೀರು ಕುಡಿಯುವಂತೆ ಉತ್ತೇಜಿಸಬೇಕು. ಬಾಯಾರಿಕೆಯಾದಾಗಲೆಲ್ಲಾ ಮಕ್ಕಳು ನೀರು ಕುಡಿಯಲು ಹೆಚ್ಚು ಆದ್ಯತೆಯನ್ನು ನೀಡಬೇಕು. ಚಹಾ, ಕಾಫಿ ಇತ್ಯಾದಿಗಳನ್ನು ಮಕ್ಕಳಿಗೆ ಕೊಡದಿರುವುದೇ ಒಳ್ಳೆಯದು. ಬೇಸಿಗೆ ಕಾಲದಲ್ಲಿ ಫ್ರಿಜ್ನಲ್ಲಿ ಇರಿಸಿರುವ ತಂಪು ಪಾನೀಯಗಳಿಗಿಂತ ತಣ್ಣಗಿರುವ ನೀರನ್ನು ಕೊಡುವುದು ಒಳಿತು.
ಕೆಲವು ಮಕ್ಕಳು ಬೆಳಗಿನ ಆಹಾರವನ್ನು ಸರಿಯಾಗಿ ತಿನ್ನುವುದಿಲ್ಲ. ಬೆಳಗ್ಗಿನ ಉಪಾಹಾರವನ್ನು ಸೇವಿಸದೇ ಇರುವ ಮಕ್ಕಳು, ಶಾಲೆಯಲ್ಲಿ ತೂಕಡಿಸುತ್ತಾರೆ. ಹಾಗಾಗಿ ಮಕ್ಕಳು ನಿತ್ಯವೂ ಬೆಳಗ್ಗಿನ ಉಪಾಹಾರವನ್ನು ಸೇವಿಸಬೇಕು. ಮಕ್ಕಳು ಬೆಳಗ್ಗೆ ಹೊಟ್ಟೆತುಂಬಾ ಆಹಾರವನ್ನು ಸೇವಿಸಿದರೆ ದಿನವಿಡೀ ಲವಲವಿಕೆಯಿಂದ ಇರುತ್ತಾರೆ.
ಮಕ್ಕಳು ಅಧಿಕ ಪ್ರಮಾಣದಲ್ಲಿ ಸಿಹಿ ತಿಂಡಿಗಳನ್ನು ಸೇವಿಸಬಾರದು. ಇದರಿಂದ ಅವರ ಹಸಿವು ಕಟ್ಟುವುದಷ್ಟೇ ಅಲ್ಲದೆ, ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಜೇನುತುಪ್ಪವನ್ನು ಸೇವಿಸಬಹುದು.
ಮಕ್ಕಳಿಗೆ ಶಕ್ತಿಯನ್ನು ನೀಡಲು ಆಹಾರದಲ್ಲಿ ಕೊಬ್ಬಿನ ಅಂಶ ಇರಬೇಕು. ಬೆಣ್ಣೆ, ತುಪ್ಪ, ಚೀಸ್, ಕ್ರೀಂ ಇತ್ಯಾದಿ ರೂಪದಲ್ಲಿ ಮಕ್ಕಳಿಗೆ ಕೊಬ್ಬನ್ನು ಪೂರೈಸಬಹುದು. ಬೇಯಿಸದೇ ಇರುವ ಅಥವಾ ಕರಿಯದೇ ಇರುವ ಕೊಬ್ಬು ಪದಾರ್ಥಗಳು ಸುಲಭವಾಗಿ ಜೀರ್ಣವಾಗುತ್ತವೆ. ಹಾಗಾಗಿ, ಕರಿದ ತಿಂಡಿಗಳನ್ನು ಮಿತಿಯಲ್ಲಿ ಕೊಡುವುದು ಒಳಿತು.
ದಿನದ ಮೂರನೇ ಒಂದು ಭಾಗಕ್ಕೆ ಅಗತ್ಯವಿರುವ ಪ್ರೊಟೀನ್ ಮತ್ತು ಕ್ಯಾಲೊರಿಯನ್ನು ಮಧ್ಯಾಹ್ನಕ್ಕೆಂದು ಮಕ್ಕಳಿಗೆ ಶಾಲೆಗೆ ಕಳಿಸಿಕೊಡುವ ಊಟವು ಪೂರೈಸಬೇಕು. ಆಹಾರ ಸರಿಯಾದ ಪ್ರಮಾಣದಲ್ಲಿರಬೇಕು. ಬಹಳ ನೀರು ನೀರಾದ ಅಥವಾ ಬಹಳ ಗಟ್ಟಿಯಾದ ಆಹಾರವು ಮಧ್ಯಾಹ್ನದ ಊಟಕ್ಕೆ ಒಳ್ಳೆಯದಲ್ಲ. ಬೆಳಗ್ಗೆ ತಿಂದ ಅದೇ ಆಹಾರವನ್ನು ಮತ್ತೆ ಮಧ್ಯಾಹ್ನದ ಊಟಕ್ಕೆ ತಿನ್ನುವುದು ಒಳ್ಳೆಯದಲ್ಲ. ಬೆಳಗ್ಗಿನ ಆಹಾರವನ್ನೇ ಮತ್ತೆ ನೋಡಿದಾಗ ಮಕ್ಕಳ ಹಸಿವು ಬತ್ತಿಹೋಗಬಹುದು. ಆಹಾರದಲ್ಲಿ ಏಕತಾನತೆ ಬೇಡ. ಮಧ್ಯಾಹ್ನದ ಊಟಲ್ಲಿ ಮಕ್ಕಳಿಗೆ ವಿವಿಧ ರುಚಿಯ ವೈವಿಧ್ಯಮಯ ಆಹಾರವನ್ನು ನೀಡಿ.
ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಲಂಚ್ ಬಾಕ್ಸಿಗೆ ಬೇಳೆಯ ಕಿಚಡಿ, ಹೆಸರು ಬೇಳೆಯ ರಾಯಿತ, ಅನ್ನ ಸಾಂಬಾರ್, ತರಕಾರಿ ಪಲ್ಯ, ಪಾಲಕ್ ಪುಲಾವ್, ರಾಯಿತ, ತರಕಾರಿ ಪಲಾವ್, ಚಪಾತಿ, ಪರೋಟಾ, ಸ್ಯಾಂಡ್ವಿಚ್, ಹಣ್ಣುಗಳು, ಸಲಾಡ್ ಮತ್ತು ಮೊಸರನ್ನಗಳನ್ನು ಹಾಕಬಹುದು.
ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಸಮೃದ್ಧವಾಗಿ ಇವೆ. ಇವುಗಳು ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಕರಿಸುತ್ತವೆ. ಅಲ್ಲದೇ ಇದು ಜೀರ್ಣ ಕ್ರಿಯೆ ಚೆನ್ನಾಗಿ ನಡೆಯುವಂತೆ ಪ್ರೋತ್ಸಾಹಿಸಿ, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗಾಗಿ ಕಡಿಮೆ ಕಬ್ಬಿಣಾಂಶವಿರುವ ಮೊಸರಿಗೆ ಅವುಗಳಿಗೆ ತಾಜಾ ಆದ ಅಥವಾ ಒಣಹಣ್ಣುಗಳನ್ನು ಬೆರೆಸಿ ತಿನ್ನಲು ಕೊಡಿ.
ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ದೊರೆಯುವ ಕ್ಯಾಲ್ಸಿಯಂ ಮತ್ತು ಪ್ರೋಟಿನ್ಗಳು ಮೆದುಳು ಮತ್ತು ದೇಹಕ್ಕೆ ಅಗತ್ಯವಾದ ಇಂಧನವನ್ನು ಒದಗಿಸುತ್ತವೆ. ಅದರಲ್ಲೂ ಹಾಲು ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಪ್ರೋಟಿನ್ಗಳು ಮೆದುಳಿನ ಜೀವಕೋಶಗಳ ನಿರ್ಮಾಣಕ್ಕೆ ಸಹಕರಿಸುತ್ತವೆ. ಅಲ್ಲದೆ ಇದರಲ್ಲಿರುವ ಕ್ಯಾಲ್ಸಿಯಂ ಮಕ್ಕಳ ಮೂಳೆ ಮತ್ತು ಹಲ್ಲುಗಳನ್ನು ಸದೃಢವಾಗಿ ಇಡಲು ನೆರವಾಗುತ್ತವೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com