ಅಮೆರಿಕ, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ಯುರೋಪ್ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಭಾರತೀಯರಲ್ಲಿ ಒಂದು ಹಂತದಲ್ಲಿ ಸಹಜವಾದ ಪ್ರಶ್ನೆ ಮೂಡುತ್ತದೆ. ಇನ್ನು ಎಷ್ಟು ವರ್ಷ ದುಡಿಯಬೇಕು? ಯಾವಾಗ ಭಾರತಕ್ಕೆ ಮರಳಬಹುದು? ಮಕ್ಕಳ ಶಿಕ್ಷಣ, ಮನೆ, ಆರೋಗ್ಯ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ, ಉಳಿದ ಜೀವನವನ್ನು ಉದ್ಯೋಗದ ಒತ್ತಡವಿಲ್ಲದೆ ಕಳೆಯಲು ಎಷ್ಟು ಹಣ ಬೇಕು? ವಿದೇಶದಲ್ಲಿ ದುಡಿದು ಸಂಪತ್ತು ಗಳಿಸಿದವರಿಗೆ ಭಾರತಕ್ಕೆ ಮರಳುವುದು ಕೇವಲ ಭೌಗೋಳಿಕ ಬದಲಾವಣೆಯಲ್ಲ. ಅದು ತಮ್ಮ ಸಮಯದ ಮೇಲೆ ತಾವೇ ಅಧಿಕಾರ ಹೊಂದುವ ಜೀವನದತ್ತ ಸಾಗುವ ನಿರ್ಧಾರವೂ ಹೌದು.
ಆದರೆ ಉದ್ಯೋಗವಿಲ್ಲದೆ ಭಾರತದಲ್ಲಿ ಜೀವನ ನಡೆಸಲು ಬೇಕಾಗುವ ಹಣ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ಮನೆಯೊಂದಿಗೆ ಬದುಕುವ ಕುಟುಂಬದ ವೆಚ್ಚಕ್ಕೂ ಮೈಸೂರಿನಂತಹ ನಗರದಲ್ಲಿ ಬದುಕುವ ಕುಟುಂಬದ ವೆಚ್ಚಕ್ಕೂ ವ್ಯತ್ಯಾಸವಿದೆ. ಅದೇ ರೀತಿ, ಸ್ವಂತ ಮನೆ ಹೊಂದಿರುವ ದಂಪತಿಗಳ ಅಗತ್ಯ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವ ದಂಪತಿಗಳ ಅಗತ್ಯವೂ ಬೇರೆ. ವಯಸ್ಸು, ಆರೋಗ್ಯ, ಜೀವನಶೈಲಿ, ಪ್ರಯಾಣದ ಅಭ್ಯಾಸ, ಮಕ್ಕಳಿಗೆ ನೀಡಬೇಕಾದ ಆರ್ಥಿಕ ನೆರವು ಮತ್ತು ಭವಿಷ್ಯದ ವೈದ್ಯಕೀಯ ವೆಚ್ಚಗಳು ಕೂಡ ಈ ಲೆಕ್ಕಾಚಾರವನ್ನು ಬದಲಿಸುತ್ತವೆ.
ಹೀಗಾಗಿ, ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಕೇವಲ ಬ್ಯಾಂಕ್ನಲ್ಲಿ ಎಷ್ಟು ಹಣವಿದೆ ಎಂಬುದನ್ನು ನೋಡುವುದಕ್ಕಿಂತ, ಆ ಹಣದಿಂದ ಪ್ರತಿವರ್ಷ ಎಷ್ಟು ಆದಾಯ ಬರಬಹುದು, ಹಣದುಬ್ಬರದಿಂದ ಖರ್ಚು ಎಷ್ಟು ಹೆಚ್ಚಾಗಬಹುದು ಮತ್ತು ೩೦ರಿಂದ ೪೦ ವರ್ಷಗಳ ಕಾಲ ಆ ಹಣವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದನ್ನು ಲೆಕ್ಕ ಹಾಕಬೇಕು. ಈ ಲೇಖನದಲ್ಲಿ ಸ್ವಂತ ಮನೆ ಹೊಂದಿರುವ ದಂಪತಿಗಳು ಭಾರತಕ್ಕೆ ಮರಳಿ, ಮತ್ತೆ ಉದ್ಯೋಗ ಮಾಡದೆ ಜೀವನ ನಡೆಸಲು ಬೇಕಾಗಬಹುದಾದ ಅಂದಾಜು ಹಣವನ್ನು ಮಹಾನಗರಗಳು ಮತ್ತು ಎರಡನೇ ಹಂತದ ನಗರಗಳ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ.
ಇಲ್ಲಿ ನೀಡಿರುವ ಅಂದಾಜುಗಳು 2026 ರ ಹಣದ ಮೌಲ್ಯವನ್ನು ಆಧರಿಸಿವೆ. ದಂಪತಿಗಳು ಸುಮಾರು 50/60 ವರ್ಷ ವಯಸ್ಸಿನಲ್ಲಿ ಭಾರತಕ್ಕೆ ಮರಳುತ್ತಾರೆ, ಕನಿಷ್ಠ 30/40 ವರ್ಷಗಳ ಜೀವನಕ್ಕೆ ಹಣಕಾಸಿನ ಸಿದ್ಧತೆ ಮಾಡಿಕೊಳ್ಳುತ್ತಾರೆ ಮತ್ತು ಭಾರತದಲ್ಲಿ ಸ್ವಂತ ವಾಸದ ಮನೆ ಹೊಂದಿದ್ದಾರೆ ಎಂದು ಪರಿಗಣಿಸಲಾಗಿದೆ. ಮನೆ ಖರೀದಿಸಲು ಬೇಕಾದ ಹಣವನ್ನು ಈ ಲೆಕ್ಕದಲ್ಲಿ ಸೇರಿಸಿಲ್ಲ. ಮಕ್ಕಳ ಮದುವೆ, ವಿದೇಶದಲ್ಲಿ ಉನ್ನತ ಶಿಕ್ಷಣ, ದೊಡ್ಡ ಮೊತ್ತದ ಉಡುಗೊರೆ ಅಥವಾ ಕುಟುಂಬದ ಇತರ ಸದಸ್ಯರಿಗೆ ನಿರಂತರವಾಗಿ ಹಣ ನೀಡುವ ವೆಚ್ಚಗಳನ್ನೂ ಪ್ರತ್ಯೇಕವಾಗಿ ಪರಿಗಣಿಸಬೇಕು.
ಮತ್ತೊಂದು ಮುಖ್ಯ ಅಂಶವೆಂದರೆ, ನಿವೃತ್ತಿಯ ಹಣವನ್ನು ಸಂಪೂರ್ಣವಾಗಿ ಬ್ಯಾಂಕ್ ಠೇವಣಿಗಳಲ್ಲಿ ಇಡುವುದು ಸೂಕ್ತ ಪರಿಹಾರವಲ್ಲ. ಬಡ್ಡಿದರಗಳು ಬದಲಾಗುತ್ತವೆ. ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯಿಸಬಹುದು ಮತ್ತು ಹಣದುಬ್ಬರವು ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಆದ್ದರಿಂದ, ನಿವೃತ್ತಿಯ ಅವಧಿಯಲ್ಲಿ ಹಣವನ್ನು ದೀರ್ಘಕಾಲ ಉಳಿಸಿಕೊಳ್ಳುವ ಉದ್ದೇಶದಿಂದ ವಿವಿಧ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡಿರುವ ನಿಧಿಯ ಅಗತ್ಯವಿದೆ. ಭಾರತದ ನಿವೃತ್ತಿ ಯೋಜನೆಗೆ ಸಂಬಂಧಿಸಿದ ಇತ್ತೀಚಿನ ವಿಶ್ಲೇಷಣೆಗಳಲ್ಲಿ ವಾರ್ಷಿಕ ವೆಚ್ಚದ ಸುಮಾರು 30/35 ಪಟ್ಟು ಹಣವನ್ನು ಒಂದು ಮಾರ್ಗದರ್ಶಕ ಮಾನದಂಡವಾಗಿ ಪರಿಗಣಿಸಲಾಗಿದೆ. ದೀರ್ಘ ನಿವೃತ್ತಿ ಮತ್ತು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳಿಗಾಗಿ ಇನ್ನಷ್ಟು ಎಚ್ಚರಿಕೆಯ ಯೋಜನೆ ಅಗತ್ಯವಾಗಬಹುದು.ಹೀಗಾಗಿ ನನ್ನ ಬಳಿಗೆ ಸಲಹೆಗೆ ಬರುವವರಿಗೆ 40/45 ಪಟ್ಟು ಹಣವನ್ನು ಮಾನದಂಡವಾಗಿ ಪರಿಗಣಿಸಲು ಹೇಳುತ್ತೇನೆ.
ಮೊದಲನೆಯ ಹಂತದ ನಗರಗಳು: ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಪುಣೆ
ಮೊದಲನೆಯ ಹಂತದ ನಗರಗಳಲ್ಲಿ ಜೀವನ ನಡೆಸುವ ವೆಚ್ಚವು ಸಾಮಾನ್ಯವಾಗಿ ವಸತಿ, ಆರೋಗ್ಯ ಸೇವೆಗಳು, ವಾಹನ ನಿರ್ವಹಣೆ, ಹೊರಗೆ ಊಟ ಮಾಡುವುದು, ಮನರಂಜನೆ ಮತ್ತು ಪ್ರಯಾಣದ ಅಭ್ಯಾಸಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಸ್ವಂತ ಮನೆ ಇದ್ದರೂ ನಿರ್ವಹಣಾ ಶುಲ್ಕ, ಆಸ್ತಿ ತೆರಿಗೆ, ದುರಸ್ತಿ, ವಿದ್ಯುತ್, ವಾಹನ, ಗೃಹಸಹಾಯಕರು ಮತ್ತು ಇತರ ದೈನಂದಿನ ವೆಚ್ಚಗಳು ಇರುತ್ತವೆ. ವಿಶೇಷವಾಗಿ ಬೆಂಗಳೂರು ಮತ್ತು ಮುಂಬೈಯಂತಹ ನಗರಗಳಲ್ಲಿ ಉತ್ತಮ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಸೇವೆಗಳನ್ನು ಬಳಸುವ ಕುಟುಂಬಗಳ ಆರೋಗ್ಯ ವೆಚ್ಚ ಗಮನಾರ್ಹವಾಗಬಹುದು.
ಸಾಮಾನ್ಯವಾಗಿ ಉತ್ತಮವಾದ, ಆದರೆ ಅತಿಯಾದ ಐಷಾರಾಮವಿಲ್ಲದ ಜೀವನ ನಡೆಸುವ ದಂಪತಿಗಳಿಗೆ ತಿಂಗಳಿಗೆ ಸುಮಾರು 1.25 ಲಕ್ಷದಿಂದ 2 ಲಕ್ಷದವರೆಗೆ ವೆಚ್ಚವಾಗಬಹುದು ಎಂದು ಅಂದಾಜಿಸಬಹುದು. ಅಂದರೆ ವರ್ಷಕ್ಕೆ 15 ಲಕ್ಷದಿಂದ 24 ಲಕ್ಷದವರೆಗೆ ಬೇಕಾಗಬಹುದು. ಇದರಲ್ಲಿ ಆಹಾರ, ಮನೆ ನಿರ್ವಹಣೆ, ಸಾರಿಗೆ, ವಿಮೆ, ವೈದ್ಯಕೀಯ ವೆಚ್ಚ, ಮನರಂಜನೆ ಮತ್ತು ಕೆಲವು ಪ್ರಯಾಣದ ವೆಚ್ಚಗಳು ಸೇರಿವೆ. ಆಗಾಗ್ಗೆ ವಿದೇಶ ಪ್ರವಾಸ, ದುಬಾರಿ ಹವ್ಯಾಸಗಳು ಅಥವಾ ಹೆಚ್ಚಿನ ವೈದ್ಯಕೀಯ ಅಗತ್ಯಗಳಿದ್ದರೆ ಈ ವೆಚ್ಚ ಇನ್ನಷ್ಟು ಹೆಚ್ಚಬಹುದು.
ಈ ವೆಚ್ಚವನ್ನು ಆಧರಿಸಿ, ಉದ್ಯೋಗವಿಲ್ಲದೆ ದೀರ್ಘಕಾಲ ಬದುಕಲು ಮೊದಲನೆಯ ಹಂತದ ನಗರಗಳಲ್ಲಿ ೬ ಕೋಟಿಯಿಂದ ೯ ಕೋಟಿವರೆಗೆ ಹೂಡಿಕೆ ಮಾಡಬಹುದಾದ ನಿವೃತ್ತಿ ನಿಧಿ ಹೊಂದಿರುವುದು ಸಮಂಜಸವಾದ ಗುರಿ. ಹೆಚ್ಚಿನ ಭದ್ರತೆ, ದುಬಾರಿ ಜೀವನಶೈಲಿ, ವಿದೇಶ ಪ್ರವಾಸ ಮತ್ತು ವೈದ್ಯಕೀಯ ವೆಚ್ಚಗಳಿಗೆ ಹೆಚ್ಚು ಅವಕಾಶ ಬೇಕಿದ್ದರೆ 10 ಕೋಟಿಯಿಂದ 12 ಕೋಟಿವರೆಗೆ ಗುರಿ ಇಡುವುದು ಉತ್ತಮ. ಇವು ಖಚಿತವಾದ ಮೊತ್ತಗಳಲ್ಲ! ಕುಟುಂಬದ ನಿಜವಾದ ವೆಚ್ಚ ಮತ್ತು ನಿವೃತ್ತಿಯ ಅವಧಿಯ ಆಧಾರದ ಮೇಲೆ ಬದಲಾಗುವ ಯೋಜನಾ ಅಂದಾಜುಗಳಾಗಿವೆ.
ಎರಡನೆಯ ಹಂತದ ನಗರಗಳು: ಮೈಸೂರು, ಮಂಗಳೂರು, ಕೊಯಮತ್ತೂರು, ಕೊಚ್ಚಿ, ಹುಬ್ಬಳ್ಳಿ ಮತ್ತು ಮೈಸೂರಿನಂತಹ ನಗರಗಳು
ಎರಡನೆಯ ಹಂತದ ನಗರಗಳಿಗೆ ಮರಳುವುದರಿಂದ ನಿವೃತ್ತಿ ನಿಧಿಯ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸ್ವಂತ ಮನೆ ಇದ್ದರೆ ಬಾಡಿಗೆ ವೆಚ್ಚ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಗೃಹಸಹಾಯ, ಸ್ಥಳೀಯ ಸಾರಿಗೆ ಮತ್ತು ದೈನಂದಿನ ಜೀವನದ ವೆಚ್ಚವೂ ಮಹಾನಗರಗಳಿಗಿಂತ ಕಡಿಮೆಯಾಗಿರಬಹುದು. ಕುಟುಂಬ, ಸ್ನೇಹಿತರು ಮತ್ತು ಪರಿಚಿತ ಸಾಮಾಜಿಕ ವಲಯದ ಹತ್ತಿರ ಬದುಕುವ ಅವಕಾಶವೂ ಹಲವರಿಗೆ ಅನುಕೂಲಕರವಾಗುತ್ತದೆ.
ಆದರೆ ಎಲ್ಲ ಎರಡನೆಯ ಹಂತದ ನಗರಗಳೂ ಒಂದೇ ರೀತಿಯ ವೆಚ್ಚವನ್ನು ಹೊಂದಿರುವುದಿಲ್ಲ. ಮಂಗಳೂರು ಮತ್ತು ಕೊಚ್ಚಿಯ ಕೆಲವು ಪ್ರದೇಶಗಳಲ್ಲಿ ವಸತಿ ಮತ್ತು ಖಾಸಗಿ ಆರೋಗ್ಯ ಸೇವೆಗಳ ವೆಚ್ಚ ಹೆಚ್ಚಿರಬಹುದು. ಮೈಸೂರಿನಲ್ಲಿ ನಿವೃತ್ತ ಜೀವನಕ್ಕೆ ಅನುಕೂಲಕರವಾದ ಆಯ್ಕೆಗಳು ದೊರೆಯಬಹುದು. ಆದರೆ ಕುಟುಂಬವು ಪದೇಪದೇ ಬೆಂಗಳೂರಿಗೆ ಅಥವಾ ವಿದೇಶಗಳಿಗೆ ಪ್ರಯಾಣಿಸಿದರೆ ಆ ವೆಚ್ಚವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು.
ಸ್ವಂತ ಮನೆಯಲ್ಲಿ ವಾಸಿಸುವ ದಂಪತಿಗಳಿಗೆ ತಿಂಗಳಿಗೆ 80 ಸಾವಿರ ದಿಂದ 1.25 ಲಕ್ಷದವರೆಗೆ ವೆಚ್ಚವಾಗಬಹುದು ಎಂದು ಅಂದಾಜಿಸಬಹುದು. ಅಂದರೆ ವರ್ಷಕ್ಕೆ 9.6 ಲಕ್ಷದಿಂದ 15 ಲಕ್ಷದವರೆಗೆ ಬೇಕಾಗಬಹುದು. ಇಂತಹ ಜೀವನಶೈಲಿಗೆ ಸುಮಾರು 4 ಕೋಟಿಯಿಂದ 6 ಕೋಟಿ ನಿವೃತ್ತಿ ನಿಧಿ ಗುರಿ. ಹೆಚ್ಚಿನ ವೈದ್ಯಕೀಯ ಭದ್ರತೆ, ಪ್ರವಾಸ ಮತ್ತು ಕುಟುಂಬದ ಹೆಚ್ಚುವರಿ ಜವಾಬ್ದಾರಿಗಳಿಗೆ 6 ಕೋಟಿಯಿಂದ 8 ಕೋಟಿವರೆಗೆ ನಿಧಿ ಹೊಂದಿರುವುದು ಹೆಚ್ಚು ನೆಮ್ಮದಿಯನ್ನು ನೀಡಬಹುದು.
ಈ ನಿಧಿಯ ಅಂದಾಜುಗಳು ದಂಪತಿಗಳ ಜೀವನಶೈಲಿ, ಹೂಡಿಕೆಗಳ ಬೆಳವಣಿಗೆ, ತೆರಿಗೆ ಮತ್ತು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಯೋಜನಾ ವ್ಯಾಪ್ತಿಗಳಾಗಿವೆ. ಸ್ವಂತ ಮನೆ ಹೊರತುಪಡಿಸಿ ಬೇರೆ ಆಸ್ತಿಗಳಿದ್ದರೆ, ಅವುಗಳಿಂದ ಬರುವ ಬಾಡಿಗೆ ಆದಾಯವು ಅಗತ್ಯವಿರುವ ನಿಧಿಯನ್ನು ಕಡಿಮೆ ಮಾಡಬಹುದು. ಆದರೆ ಮನೆಯನ್ನು ಮಾರಾಟ ಮಾಡಿ ಅಥವಾ ಬಾಡಿಗೆಗೆ ನೀಡಿ ಹಣ ಗಳಿಸುವ ಯೋಜನೆ ಇಲ್ಲದಿದ್ದರೆ, ಆ ಮನೆಯ ಮಾರುಕಟ್ಟೆ ಮೌಲ್ಯವನ್ನು ನಿವೃತ್ತಿ ನಿಧಿಯ ಭಾಗವೆಂದು ಲೆಕ್ಕ ಹಾಕಬಾರದು.
3 ಕೋಟಿ ಹೂಡಿಕೆ ಮಾಡಬಹುದಾದ ಹಣವಿರುವ ದಂಪತಿಗಳು ಸಣ್ಣ ನಗರದಲ್ಲಿ ಸರಳ ಜೀವನ ನಡೆಸಲು ಸಾಧ್ಯವಾಗಬಹುದು. ಆದರೆ ವರ್ಷಕ್ಕೆ ೧೨ ಲಕ್ಷ ಖರ್ಚು ಮಾಡುವ ಕುಟುಂಬಕ್ಕೆ 3 ಕೋಟಿ ಎಂದರೆ ವಾರ್ಷಿಕ ವೆಚ್ಚದ 25 ಪಟ್ಟು ಮಾತ್ರ. 30/40 ವರ್ಷಗಳ ನಿವೃತ್ತಿಗೆ ಇದು ಸಾಕಾಗುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ವಿಶೇಷವಾಗಿ ಒಬ್ಬರು ಅಥವಾ ಇಬ್ಬರೂ 50 ರ ದಶಕದಲ್ಲೇ ಉದ್ಯೋಗ ನಿಲ್ಲಿಸಿದರೆ, ದೀರ್ಘಾವಧಿಯ ಹಣದುಬ್ಬರ ಮತ್ತು ವೈದ್ಯಕೀಯ ವೆಚ್ಚಗಳು ದೊಡ್ಡ ಅಪಾಯವಾಗಬಹುದು.
5 ಕೋಟಿ ಇದ್ದರೆ ಪರಿಸ್ಥಿತಿ ಹೆಚ್ಚು ಅನುಕೂಲಕರವಾಗುತ್ತದೆ. ಎರಡನೆಯ ಹಂತದ ನಗರದಲ್ಲಿ ವರ್ಷಕ್ಕೆ 12 ಲಕ್ಷ ಖರ್ಚು ಮಾಡುವ ದಂಪತಿಗಳು ತಮ್ಮ ವೆಚ್ಚವನ್ನು ನಿಯಂತ್ರಿಸಿಕೊಂಡು, ಸೂಕ್ತ ಹೂಡಿಕೆ ಹಂಚಿಕೆ ಮತ್ತು ಆರೋಗ್ಯ ವಿಮೆಯೊಂದಿಗೆ ಉದ್ಯೋಗವಿಲ್ಲದ ಜೀವನ ನಡೆಸುವ ಗುರಿ ಇಡಬಹುದು. ಆದರೆ ಮಕ್ಕಳಿಗೆ ದೊಡ್ಡ ಮೊತ್ತದ ಹಣ ನೀಡಬೇಕಿದ್ದರೆ ಅಥವಾ ದುಬಾರಿ ವೈದ್ಯಕೀಯ ಅಗತ್ಯಗಳು ಎದುರಾದರೆ ಪ್ರತ್ಯೇಕ ನಿಧಿ ಅಗತ್ಯವಾಗುತ್ತದೆ.
8/10 ಕೋಟಿ ಹೂಡಿಕೆ ಮಾಡಬಹುದಾದ ಸಂಪತ್ತಿದ್ದರೆ, ಸ್ವಂತ ಮನೆ ಹೊಂದಿರುವ ದಂಪತಿಗಳಿಗೆ ಹೆಚ್ಚಿನ ಆಯ್ಕೆಗಳು ದೊರೆಯುತ್ತವೆ. ಬೆಂಗಳೂರು ಅಥವಾ ಹೈದರಾಬಾದ್ನಲ್ಲಿ ಆರಾಮದಾಯಕ ಜೀವನ, ನಿಯಮಿತ ಪ್ರಯಾಣ ಮತ್ತು ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೂ ಹೆಚ್ಚಿನ ಸಂಪತ್ತು ಇದೆ ಎಂಬ ಕಾರಣಕ್ಕೆ ಹಣದ ನಿರ್ವಹಣೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ಹೂಡಿಕೆಗಳ ಮೇಲೆ ಅತಿಯಾದ ಅಪಾಯ ತೆಗೆದುಕೊಳ್ಳುವುದು ಅಥವಾ ಹೆಚ್ಚಿನ ಬಡ್ಡಿಗಾಗಿ ಸಂಪೂರ್ಣ ಹಣವನ್ನು ಒಂದೇ ಸಾಧನದಲ್ಲಿ ಇಡುವುದು ತಪ್ಪಿಸಬೇಕಾದ ಕ್ರಮಗಳಾಗಿವೆ.
ನಿವೃತ್ತಿ ಯೋಜನೆಯಲ್ಲಿ ಅತ್ಯಂತ ಮುಖ್ಯವಾದ ಅಂಶ ಹಣದುಬ್ಬರ. ಇಂದು ತಿಂಗಳಿಗೆ 1 ಲಕ್ಷದಲ್ಲಿ ಆರಾಮವಾಗಿ ಬದುಕುವ ಕುಟುಂಬಕ್ಕೆ 15 ವರ್ಷಗಳ ನಂತರ ಅದೇ ಜೀವನಶೈಲಿಯನ್ನು ಉಳಿಸಿಕೊಳ್ಳಲು ಹೆಚ್ಚಿನ ಹಣ ಬೇಕಾಗುತ್ತದೆ. ವಾರ್ಷಿಕ ಹಣದುಬ್ಬರವನ್ನು ಶೇ. 6 ಎಂದು ಊಹಿಸಿದರೆ, 15 ವರ್ಷಗಳ ನಂತರ 1 ಲಕ್ಷದ ಖರೀದಿ ಸಾಮರ್ಥ್ಯಕ್ಕೆ ಸಮಾನವಾದ ವೆಚ್ಚ ಸುಮಾರು 2.4 ಲಕ್ಷವಾಗಬಹುದು. 20 ವರ್ಷಗಳ ನಂತರ ಅದು ಸುಮಾರು 3.2 ಲಕ್ಷವಾಗಬಹುದು.
ಇದಕ್ಕಾಗಿಯೇ ನಿವೃತ್ತಿ ನಿಧಿಯನ್ನು ಕೇವಲ ಇಂದಿನ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕುವುದು ಅಪಾಯಕಾರಿ. ಆಹಾರ, ಮನೆ ನಿರ್ವಹಣೆ, ಪ್ರಯಾಣ ಮತ್ತು ವೈದ್ಯಕೀಯ ಸೇವೆಗಳ ವೆಚ್ಚಗಳು ಒಂದೇ ಪ್ರಮಾಣದಲ್ಲಿ ಏರಿಕೆಯಾಗುವುದಿಲ್ಲ. ಸಾಮಾನ್ಯ ಹಣದುಬ್ಬರಕ್ಕಿಂತ ವೈದ್ಯಕೀಯ ವೆಚ್ಚಗಳ ಏರಿಕೆ ಕೆಲವು ಅವಧಿಗಳಲ್ಲಿ ವೇಗವಾಗಿರಬಹುದು. ಆದ್ದರಿಂದ ಆರೋಗ್ಯ ವಿಮೆ, ವೈದ್ಯಕೀಯ ತುರ್ತು ನಿಧಿ ಮತ್ತು ದೀರ್ಘಾವಧಿಯ ಹೂಡಿಕೆಗಳನ್ನು ಪ್ರತ್ಯೇಕವಾಗಿ ಯೋಜಿಸಬೇಕು
ವಿದೇಶದಲ್ಲಿ ದುಡಿದು ಸಂಪತ್ತು ಗಳಿಸಿರುವ ಭಾರತೀಯ ದಂಪತಿಗಳು ಭಾರತಕ್ಕೆ ಮರಳುವಾಗ, ಹಣದ ಮೊತ್ತವೊಂದೇ ನಿರ್ಧಾರಕವಾಗಬಾರದು. ತಮ್ಮ ವಾಸದ ಮನೆ ಎಲ್ಲಿದೆ, ವರ್ಷಕ್ಕೆ ಎಷ್ಟು ಖರ್ಚು ಮಾಡುತ್ತಾರೆ, ಎಷ್ಟು ವರ್ಷಗಳ ಕಾಲ ಆದಾಯವಿಲ್ಲದೆ ಬದುಕಬೇಕಾಗಬಹುದು ಮತ್ತು ಆರೋಗ್ಯದ ಅಗತ್ಯಗಳೇನು ಎಂಬುದನ್ನು ಮೊದಲು ನಿರ್ಧರಿಸಬೇಕು.
ಆರ್ಥಿಕ ಸ್ವಾತಂತ್ರ್ಯವೆಂದರೆ ಎಷ್ಟು ಕೋಟಿ ರೂಪಾಯಿ ಹೊಂದಿದ್ದೇವೆ ಎಂಬುದಷ್ಟೇ ಅಲ್ಲ, ಆ ಹಣದಿಂದ ನಮ್ಮ ಜೀವನದ ವೆಚ್ಚವನ್ನು ಎಷ್ಟು ದೀರ್ಘಕಾಲ, ಎಷ್ಟು ವಿಶ್ವಾಸದಿಂದ ಮತ್ತು ಅನಿರೀಕ್ಷಿತ ಪರಿಸ್ಥಿತಿಗಳನ್ನೂ ಎದುರಿಸುತ್ತಾ ನಿರ್ವಹಿಸಬಹುದು ಎಂಬುದೇ ಮುಖ್ಯ. ಭಾರತಕ್ಕೆ ಮರಳುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ನಿಜವಾದ ವಾರ್ಷಿಕ ವೆಚ್ಚವನ್ನು ಲೆಕ್ಕ ಹಾಕಿ, ಅದರ 40/45ಪಟ್ಟು ನಿಧಿಯನ್ನು ಆರಂಭಿಕ ಗುರಿಯಾಗಿ ಪರಿಗಣಿಸಿ, ಆರೋಗ್ಯ ಮತ್ತು ತುರ್ತು ವೆಚ್ಚಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.