ಮುಂಬೈ: ಐಸಿಸಿ ಟಿ20 ವಿಶ್ವಕಪ್ ನ 2ನೇ ಸೆಮಿಫೈನಲ್ ನಲ್ಲಿ ಭಾರತ ತಂಡದ ವಿರುದ್ಧ ವಿಂಡೀಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಗೇರಿತ್ತು. ಅದರೆ ಭಾರತ-ವಿಂಡೀಸ್ ತಂಡಗಳ ಈ ಕಾಳಗ ಕೇವಲ ಮೈದಾನದಲ್ಲಿ ಮಾತ್ರ. ಮೈದಾನದ ಹೊರಗೆ ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ ಆಟಗಾರರು ಆಪ್ತ ಸ್ನೇಹಿತರು.
ಇದಕ್ಕೆ ಪುಷ್ಠಿ ನೀಡುವಂತೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ನಿನ್ನೆ ಒಂದು ಭಾವ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕುವ ಮೂಲಕ ಇದೀಗ ಕ್ರೀಡಾ ಸ್ಫೋರ್ತಿ ಮೆರೆದಿದ್ದಾರೆ. ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಇರುವ ಭಾವಚಿತ್ರವನ್ನು ಹಾಕಿರುವ ಬ್ರಾವೋ, "ವಿನ್, ಲಾಸ್ ಆರ್ ಡ್ರಾ ಆಲ್ವೇಸ್ ಮಚ್ಚಾ" (ಸೋಲು, ಗೆಲುವು ಅಥವಾ ಡ್ರಾ ಏನೇ ಇರಲಿ ನಾವು ಸ್ನೇಹಿತರು) ಎಂದ ಬರೆಯುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಬ್ರಾವೋ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಕ್ರಿಕೆಟಿಗರೊಂದಿಗೆ ವಿಂಡೀಸ್ ಆಟಗಾರರ ಸ್ನೇಹ ಒಂದೊಂದೇ ಅನಾವರಣಗೊಳ್ಳುತ್ತಿದೆ. ಇತ್ತೀಚೆಗಷ್ಟೇ ಐಸಿಸಿ ನಾಯಕ ಧೋನಿಯನ್ನು ವಿಂಡೀಸ್ ನಾಯಕ ಸಾಮಿ ಮೈದಾನದಲ್ಲಿ ಕಾಡಿದ ವಿಡಿಯೋ ಶೇರ್ ಮಾಡಿತ್ತು. ಈ ಚಿತ್ರಗಳು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸ್ನೇಹವನ್ನು ಜಗತ್ತಿಗೆ ಪ್ರದರ್ಶನ ಮಾಡುತ್ತಿವೆ.
ಒಂದು ಕಾಲದಲ್ಲಿ ಹಾವು ಮುಂಗುಸಿಯಂತಿದ್ದ ಕ್ರಿಕೆಟಿಗರು ಇದೀಗ ಮಾಮ-ಮಚ್ಚಾ ಎನ್ನುವಷ್ಟು ಹತ್ತಿರವಾಗಿದ್ದಾರೆ. ಇದಕ್ಕೆ ಕಾರಣ ಐಪಿಎಲ್. ಐಪಿಎಲ್ ಗಾಗಿ ದೇಶ-ವಿದೇಶಗಳಿಂದ ಬರುವ ಆಟಗಾರರು ಭಾರತೀಯ ಕ್ರಿಕೆಟಿಗರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಾರೆ. ಹೀಗಾಗಿ ಇಲ್ಲಿ ಕ್ರಿಕೆಟಿಗರ ನಡುವೆ ಸ್ನೇಹ-ಪ್ರೀತಿ ಸಾಮಾನ್ಯ.