ಕೊಲ್ಕೋತಾ: ವಿಶ್ವಕಪ್ ಟಿ-20 ಪಂದ್ಯಾವಳಿಯ ಮಹಿಳಾ ಫೈನಲ್ ಪಂದ್ಯದಲ್ಲಿ ಹಾಯ್ಲೆ ಮ್ಯಾಥ್ಯೂಸ್ ಮತ್ತು ಸ್ಟಾಫಾನೈ ಟೇಲರ್ ಅವರ ಭರ್ಜರಿ ಅರ್ಧಶತಕದಿಂದ ವೆಸ್ಟ್ ಇಂಡೀಸ್ ತಂಡ, ಮೂರು ಬಾರಿ ಚಾಂಪಿಯನ್ನರಾಗಿದ್ದ ಆಸ್ಟ್ರೇಲಿಯಾ ತಂಡವನ್ನು ಎಂಟು ವಿಕೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮ್ಯಾಥ್ಯೂಸ್ (66) ಮತ್ತು ಕ್ಯಾಪ್ಟನ್ ಟೇಲರ್(59) ರನ್‌ಗಳ ಆರಂಭಿಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ನೀಡಿದ್ದ 148 ರನ್‌ಗಳ ಸವಾಲನ್ನು ಬೆನ್ನಟ್ಟಲು ಸಾಧ್ಯವಾಯಿತು. ಇನ್ನೂ ಮೂರು ಎಸೆತಗಳಿರುವಂತೆಯೇ ವೆಸ್ಟ್ ಇಂಡೀಸ್ ತಂಡ ಗೆಲುವಿನ ನಗೆ ಬೀರಿತು.
ಡೊಟ್ಟಿನ್ 33 ರನ್‌ಗಳನ್ನು ನೀಡಿ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ತಂಡ ಗೆಲುವಿನ ದಡ ಸೇರುತ್ತಿದ್ದಂತೆ ವಿಂಡೀಸ್ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಎಲೈಸಿ ವಿಲಾನಿ ಮತ್ತು ಕ್ಯಾಪ್ಟನ್ ಲನ್ನಾಂಗ್ ಎರಡನೇ ವಿಕೆಟ್‌ಗೆ ತಲಾ 52 ರನ್‌ಗಳನ್ನು ಸೇರಿಸಿ, ಒಟ್ಟು 77 ರನ್‌ಗಳ ಜೊತೆಯಾಟವಾಡಿ 20 ಓವರ್‌ಗಳಲ್ಲಿ 148 ರನ್‌ಗಳಿಸುವಲ್ಲಿ ಯಶಸ್ವಿಯಾಗಿತ್ತು.