ಕೋಲ್ಕತಾ: ಈಡೆನ್ ಗಾರ್ಡನ್ ನಲ್ಲಿ ಇಂಗ್ಲೆಂಡ್- ವೆಸ್ಟ್ ಇಂಡೀಸ್ ನಡುವೆ ನಡೆದ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ದುರ್ವರ್ತನೆ ತೋರಿದ ವೆಸ್ಟ್ ಇಂಡೀಸ್ ಆಟಗಾರ ಮಾರ್ಲಾನ್ ಸಾಮ್ಯುಯಲ್ಸ್ ಗೆ ಐಸಿಸಿ ದಂಡ ವಿಧಿಸಿದೆ.
ಮಾರ್ಲಾನ್ ಸಾಮ್ಯುಯಲ್ಸ್ ನ ಸಂಭಾವನೆಯ ಶೇ.30 ರಷ್ಟು ಹಣವನ್ನು ಐಸಿಸಿ ದಂಡ ವಿಧಿಸಿದೆ. ಪಂದ್ಯದ ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಅವರನ್ನುದ್ದೇಶಿಸಿ ನಿಂದನೆ, ಅವಹೇಳನಕಾರಿ ಭಾಷೆಯನ್ನು ಬಳಸಿದ್ದ ಸಾಮ್ಯುಯಲ್ಸ್ ಐಸಿಸಿ ನೀತಿ ಸಂಹಿತೆಯ ವಿಧಿ 2 . 1 .4 ನ್ನು ಉಲ್ಲಂಘಿಸಿದ್ದರು. ತಪ್ಪನ್ನು ಒಪ್ಪಿಕೊಂಡಿರುವ ಸಾಮ್ಯುಯಲ್ಸ್ ಐಸಿಸಿ ಮ್ಯಾಚ್ ರೆಫರಿಯ ಎಮಿರೇಟ್ಸ್ ಎಲೈಟ್ ಪ್ಯಾನಲ್ ನ ರಂಜನ್ ಮದುಗಲೆ ಅವರು ವಿಧಿಸಿದ್ದ ದಂಡವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಈ ಕುರಿತು ಔಪಚಾರಿಕ ವಿಚಾರಣೆ ಅಗತ್ಯವಿಲ್ಲ. ಇನ್ನು ಪಂದ್ಯದ ನಂತರವೂ ಸಾಮ್ಯುಯಲ್ಸ್ ಇಂಥಾದ್ದೇ ವರ್ತನೆಯನ್ನು ಪ್ರದರ್ಶಿಸಿದ್ದಾರೆ. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಮ್ಯುಯಲ್ಸ್ ಪತ್ರಕರ್ತರೆದುರು ದುರ್ವರ್ತನೆ ತೋರಿದ್ದರು.
ಐಸಿಸಿಯ ಲೆವೆಲ್ 1 ನೀತಿಸಂಹಿತೆಯನ್ನು ಉಲ್ಲಂಘಿಸುವವರಿಗೆ ಕನಿಷ್ಠ ಮೊತ್ತದ ದಂಡ ವಿಧಿಸಲಾಗುತ್ತದೆ, ಐಸಿಸಿ ನಿಯಮವನ್ನು ಉಲ್ಲಂಘಿಸಿದ ಯಾವುದೇ ಆಟಗಾರನ ಸಂಭಾವನೆಯ ಶೇ.50 ರಷ್ಟು ಗರಿಷ್ಠ ಮೊತ್ತವನ್ನು ದಂಡದ ರೂಪದಲ್ಲಿ ಪಡೆಯಬಹುದಾಗಿದೆ.