ನವದೆಹಲಿ: ಬಹು ನಿರೀಕ್ಷಿತ ಐಪಿಎಲ್ ಸೀಸನ್ 9ಗೆ ಕ್ಷಣ ಗಣನೆ ಆರಂಭವಾಗಿದ್ದು, ಇದೇ ಏಪ್ರಿಲ್ 9 ಶನಿವಾರ ಸಂಜೆ ಟೂರ್ನಿಗೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಇನ್ನು ಆಟಗಾರರ ವಿಚಾರಕ್ಕೆ ಬರುವುದಾದರೆ ಏಷ್ಯಾಕಪ್ ಟಿ20 ಹಾಗೂ ಟಿ20 ವಿಶ್ವಕಪ್ ನಲ್ಲಿ ಹಲವು ಆಟಗಾರರ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದು, ಐಪಿಎಲ್ ನಲ್ಲೂ ಅದೇ ಉತ್ತಮ ಫಾರ್ಮ್ ಮುಂದುವರೆಸುವ ನಿರೀಕ್ಷೆ ಹುಟ್ಟಿಸಿದ್ದಾರೆ. ಪ್ರಮುಖವಾಗಿ ಟಿ20 ವಿಶ್ವಕಪ್ ನ ಉಪಾಂತ್ಯ ತಲುಪಿದ್ದ ಭಾರತ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆಟಗಾರರು ನಿರೀಕ್ಷೆಗಳನ್ನು ಮೀರಿ ಅತ್ಯುತ್ತಮ ಪ್ರದರ್ಶನ ತೋರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೀಗಾಗಿ ಟಿ20 ವಿಶ್ವಕಪ್ ಬೆನ್ನಲ್ಲೇ ಐಪಿಎಲ್ ಸೀಸನ್ 9 ಟೂರ್ನಿ ಆರಂಭವಾಗುತ್ತಿರುವುದರಿಂದ ಈ ತಂಡಗಳ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಇನ್ನು ಟಿ20 ವಿಶ್ವಕಪ್ ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ ಆರು ಪ್ರಮುಖ ಆಟಗಾರರ ಕುರಿತ ಸಣ್ಣ ವಿಶ್ಲೇಷಣೆ ಇಲ್ಲಿದೆ.
1.ವಿರಾಟ್ ಕೊಹ್ಲಿ
ಇಡೀ ವಿಶ್ವಕಪ್ ನಲ್ಲಿ ಬಹುತೇಕ ಎಲ್ಲರ ಕೇಂದ್ರಬಿಂದುವಾಗಿದ್ದ ಏಕೈಕ ಆಟಗಾರ ಎಂದರೆ ಅದು ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಎಂದೇ ಹೇಳಬಹುದು. ಟೂರ್ನಿಯ ಆರಂಭದಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಸುದ್ದಿಯಾಗುತ್ತಿದ್ದ ವಿರಾಟ್ ಕೊಹ್ಲಿ ಐಪಿಎಲ್ ಸೀಸನ್ 9ಗೂ ಹಾಟ್ ಫೇವರಿಟ್ ಆಟಗಾರ ಎಂದು ಹೇಳಬಹುದು. ಟಿ20 ವಿಶ್ವಕಪ್ ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಕೊಹ್ಲಿ, ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅತಿ ಹೆಚತ್ಚು ರನ್ ಗಳಿಕೆ, ಅತಿ ಹೆಚ್ಚು ಅರ್ಧಶತಕ, ವೇಗದ ಸಾವಿರ ರನ್ ಗಳಿಕೆ ಹೀಗೆ ವಿರಾಟ್ ಗಳಿಸಿದ ದಾಖಲೆಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. ಇನ್ನು ಟಿ20 ವಿಶ್ವಕಪ್ ನಲ್ಲಿ 136.5ರಷ್ಟು ದಾಖಲೆ ಸರಾಸರಿಯಲ್ಲಿ ರನ್ ಗಳಿಕೆ ಮಾಡಿರುವ ಕೊಹ್ಲಿ ಇದೇ ಅತ್ಯುತ್ತಮ ಫಾರ್ಮ್ ಅನ್ನು ಪ್ರಸಕ್ತ ಸಾಲಿನ ಐಪಿಎಲ್ ನಲ್ಲೂ ಮುಂದುವರೆಸುವ ವಿಶ್ವಾಸ ಹೊಂದಿದ್ದಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥ್ಯ ವಹಿಸಿರುವ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷಿಗಳಿರುವುದಂತೂ ಸುಳ್ಳಲ್ಲ.
2. ಎಂಎಸ್ ಧೋನಿ
ಭಾರತ ತಂಡದ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲೂ ಅದೇ ಛಾಪನ್ನು ಉಳಿಸಿಕೊಂಡಿದ್ದಾರೆ. ಈ ಹಿಂದಿನ 7 ಸೀಸನ್ ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿದ್ದ ಧೋನಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ತಮ್ಮದೇ ಹೊಸ ತಂಡವನ್ನು ರಚನೆ ಮಾಡಿಕೊಂಡಿರುವ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನೇತೃತ್ವ ವಹಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ದಿಢೀರ್ ನಿರ್ಧಾರದಿಂದಾಗಿ ಕಮಾಲ್ ಮಾಡುವ ಧೋನಿ ತಮ್ಮ ಹೊಸ ತಂಡದಲ್ಲಿಯೂ ಅದೇ ಕಮಾಲ್ ಮಾಡುತ್ತಾರೆಯೇ ಕಾದು ನೋಡಬೇಕಿದೆ. ಅಂದಹಾಗೆ ಓರ್ವ ಆಟಗಾರನಾಗಿಯೂ ಧೋನಿ ಯಶಸ್ವಿಯಾಗಿದ್ದು, ವಿಶ್ವದ ಅತಿ ಉತ್ತಮ ಮ್ಯಾಚ್ ಫಿನಿಶರ್ ಗಳಲ್ಲಿ ಒಬ್ಬರಾಗಿದ್ದಾರೆ.
3.ಕ್ರಿಸ್ ಗೇಯ್ಲ್
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸಮನ್. ಪಂದ್ಯದಲ್ಲಿ ಇವರು ಸಿಡಿದು ನಿಂತರು ಎಂದರೆ ಎದುರಾಳಿ ತಂಡ ಸೋಲು ಕಟ್ಟಿಟ್ಟಬುತ್ತಿ ಎಂದು ಹೇಳಬಹುದು. ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಲೀಗ್ ಹಂತದಲ್ಲಿ ಇಂಗ್ಲೆಂಡ್ ತಂಡವನ್ನು ವೆಸ್ಟ್ ಇಂಡೀಸ್ ಮಣಿಸುವಲ್ಲಿ ಕ್ರಿಸ್ ಗೇಯ್ಲ್ ನಿರ್ಣಾಯಕ ಪಾತ್ರವಹಿಸಿದ್ದರು. ಮುಂಬೈನಲ್ಲಿ ನಡೆದ ಆ ಪಂದ್ಯದಲ್ಲಿ ಕ್ರಿಸ್ ಗೇಯ್ಲ್ 208.33 ಸ್ಟ್ರೈಕ್ ರೇಟ್ ನಲ್ಲಿ 100 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಐಪಿಎಲ್ ನಲ್ಲೂ ಸಾಕಷ್ಟು ಉತ್ತಮ ದಾಖಲೆ ಹೊಂದಿರುವ ಕ್ರಿಸ್ ಗೇಯ್ಲ್ ರಾಯಲ್ ಚಾಲೆಂಜರ್ಸ್ ತಂಡ ಪ್ರಮುಖ ಕೀ ಪ್ಲೇಯರ್ ಗಳಲ್ಲಿ ಒಬ್ಬರು.
4.ಕಾರ್ಲೋಸ್ ಬ್ರಾಥ್ ವೇಟ್
ಆ ನಾಲ್ಕು ಸಿಕ್ಸರ್ ಗಳು..ಅದೇ ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಕಾರ್ಲೋಸ್ ಬ್ರಾಥ್ ವೇಟ್ ಸಿಡಿಸಿದ ಆ ನಾಲ್ಕು ಸಿಕ್ಸರ್ ಗಳು ಒಮ್ಮೆಲೆ ಆತನನ್ನು ಹೀರೋ ಮಾಡಿತ್ತು. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದ ಕೊನೆಯ ಓವರ್ ನಲ್ಲಿ ಸತತ 4 ಸಿಕ್ಸರ್ ಸಿಡಿಸಿ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದ ಈ ಆಟಗಾರ ವಿಶ್ವ ಕ್ರಿಕೆಟ್ ನಲ್ಲಿ ತಾವೆಷ್ಟು ಅಪಾಯಕಾರಿ ಎಂಬುದನ್ನು ಸಾಬೀತು ಪಡಿಸಿದ್ದರು. ಇದೀಗ ಈ ಆಟಗಾರ ತಮ್ಮ ದೃಷ್ಟಿಯನ್ನು ಐಪಿಎಲ್ ನತ್ತ ನೆಟ್ಟಿದ್ದು, ಐಪಿಎಲ್ ಸೀಸನ್ 9 ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಅಷ್ಟೇನೂ ಸಾಧನೆ ಮಾಡದ ಡೆಲ್ಲಿ ತಂಡಕ್ಕೆ ಬ್ರಾಥ್ ವೇಟ್ ಬಹುಶಃ ತಿರುವು ನೀಡಬಹುದು. ಅಂದಹಾಗೆ ಬ್ರಾಥ್ ವೇಟ್ ರನ್ನು ಡೆಲ್ಲಿ ತಂಡ 4.2 ಕೋಟಿಗೆ ಖರೀದಿ ಮಾಡಿದೆ.
5.ಶಕೀಬ್ ಅಲ್ ಹಸನ್
ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳಲ್ಲಿ ಅಷ್ಟಾಗಿ ಮಿಂಚದೇ ಹೋಗಿದ್ದರೂ, ಅರ್ಹತಾ ಸುತ್ತಿನಲ್ಲಿ ಮಾತ್ರ ತಮ್ಮ ಆಲ್ ರೌಂಡ್ ಆಟದಿಂದ ಬಾಂಗ್ಲಾದೇಶವನ್ನು ಪ್ರಧಾನ ಹಂತಕ್ಕೆ ತಲುಪಿಸಿದ್ದರು. ಟೂರ್ನಿಯಲ್ಲಿ 32 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಶಕೀಬ್ ಒಟ್ಟು 129 ರನ್ ಗಳಿಸಿದ್ದರು. ಅಂತೆಯೇ ಬೌಲಿಂಗ್ ನಲ್ಲಿ 7.21 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಶಕೀಬ್ 10 ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪ್ರಾವೀಣ್ಯತೆ ಹೊಂದಿರುವ ಶಕೀಬ್ ಅಲ್ ಹಸನ್ ಪ್ರಸಕ್ತ ಐಪಿಎಲ್ ಸೀಸನ್ 9 ಟೂರ್ನಿಯ ಪ್ರಮುಖ ಆಟಗಾರರ ಪಟ್ಟಿಯಲ್ಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಶಕೀಬ್ ಅಲ್ ಹಸನ್ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
6.ಶೇನ್ ವಾಟ್ಸನ್
ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಶೇನ್ ವಾಟ್ಸನ್ ಐಪಿಎಲ್ ನಲ್ಲಿ ಮುಂದುವರೆದಿದ್ದಾರೆ. ಬರೊಬ್ಬರಿ 9.5 ಕೋಟಿ ರು.ಗಳಿಗೆ ಆರ್ ಸಿಬಿ ತಂಡದ ಪಾಲಾಗಿರುವ ವಾಟ್ಸನ್, ವಿರಾಟ್ ಕೊಹ್ಲಿಗೆ ಸಾಥ್ ನೀಡಲಿದ್ದಾರೆ. ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿರುವ ವಾಟ್ಸನ್ ಟಿ20 ವಿಶ್ವಕಪ್ ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದರು. ತಾವಾಡಿರುವ ಒಟ್ಟು ನಾಲ್ಕು ಇನ್ನಿಂಗ್ಸ್ ಗಳಲ್ಲಿ ವಾಟ್ಸನ್ 96 ರನ್ ಗಳಿಸಿದ್ದು, ಬೌಲಿಂಗ್ ನಲ್ಲಿ ಐದು ವಿಕೆಟ್ ಕಬಳಿಸಿದ್ದಾರೆ. ಈ ಹಿಂದೆ ರಾಜಸ್ತಾನ ರಾಯಲ್ಸ್ ತಂಡ ಪರವಾಗಿ ಆಡುತ್ತಿದ್ದ ವಾಟ್ಸನ್ ರನ್ನು ಜನವರಿಯಲ್ಲಿ ನಡೆದ ಬಿಡ್ಡಿಂಗ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಖರೀಸಿತ್ತು.