ಮುಂಬೈ: ತವರಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಮುಖಭಂಗವಾಗಿದ್ದು, ಶನಿವಾರ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದ್ದಾರೆ.
ಐಪಿಎಲ್ ಟೂರ್ನಿಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಆರಂಭಿಕ ಬ್ಯಾಟ್ಸ್‌ಮನ್ ಆರನ್ ಫಿಂಚ್ (ಅಜೇಯ 67 ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ ಸತತ 3ನೇ ಜಯ ದಾಖಲಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ಮಣಿಸುವ ಮೂಲಕ ಐಪಿಎಲ್-9 ಟೂರ್ನಿಯ ಹೊಸತಂಡ ಗುಜರಾತ್ ಲಯನ್ಸ್ ಈ ಸಾಧನೆ ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಮುಂಬೈ ತಂಡಕ್ಕೆ ಪಾರ್ಥೀವ್ ಪಟೇಲ್ ಆಸರೆಯಾದರೂ ಗುಜರಾತ್ ವಿರುದ್ಧ ಬೃಹತ್ ಮೊತ್ತ ಪೇರಿಸುವಲ್ಲಿ ಮುಂಬೈ ವಿಫಲವಾಯಿತು. 144 ರನ್ ಗಳ ಗುರಿ ಬೆನ್ನು ಹತ್ತಿದೆ ಗುಜರಾತ್ ತಂಡಕ್ಕೆ ಆರಂಭಿಕ ಆಟಗಾರ ಆ್ಯರನ್ ಫಿಂಚ್ ಆಸರೆಯಾದರು. ಮೆಕ್ಕಲಂ ಆರಂಭದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ಗುಜರಾತ್ ಒತ್ತಡಕ್ಕೆ ಸಿಲುಕಿತ್ತಾದರೂ ಫಿಂಚ್ ಮತ್ತು ರೈನಾ ಗುಜರಾತ್ ತಂಡವನ್ನು ಆಘಾತದಿಂದ ಮೇಲೆತ್ತಿದರು. ರೈನಾ ಔಟಾಗುತ್ತಿದ್ದಂತೆಯೇ ಗುಜರಾತ್ ತಂಡ ಮಧ್ಯಮ ಕ್ರಮಾಂಕ ದಿಢೀರ್ ಕುಸಿತಕಂಡಿತು.
ಕೊನೆಯ ಎಸೆತದವರೆಗೂ ಸಾಗಿದ ಈ ಪಂದ್ಯದಲ್ಲಿ ಫಿಂಚ್ ಅಜೇಯ ಆಟವಾಡುವ ಮೂಲಕ ಗುಜರಾತ್ ತಂಡಕ್ಕೆ ಸತತ 3ನೇ ಗೆಲುವು ತಂದಿತ್ತರು. ಮತ್ತೊಂದು ಪ್ರಮುಖ ಅಂಶವೆಂದರೆ ಫಿಂಚ್ ಗೂ ಈ ಸರಣಿಯಲ್ಲಿ ಇದು ಸತತ ಮೂರನೇ ಅರ್ಧಶತಕವಾಗಿದೆ. ಅಲ್ಲದೆ ಫಿಂಚ್ ಸತತ 3ನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.