ಐಪಿಎಲ್ 9: ಆರ್ ಸಿಬಿ ವಿರುದ್ಧ ದೆಹಲಿಗೆ 7 ವಿಕೆಟ್ ಗಳ ಜಯ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್- ದೆಹಲಿ ಡೇರ್ ಡೆವಿಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ದೆಹಲಿ ತಂಡ 7 ವಿಕೆಟ್ ಗಳ ಜಯಗಳಿಸಿದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ನೀಡಿದ್ದ 191 ರನ್ ಗಳ ಗುರಿಯನ್ನು ಬೆನ್ನಟ್ಟಿದ ದೆಹಲಿ ಡೇರ್ ಡೆವಿಲ್ಸ್ ತಂಡ ಆರಂಭಿಕ ಓವರ್ ನಲ್ಲೇ ವಿಕೆಟ್ ಕಳೆದುಕೊಂಡಿತಾದರೂ ನಂತರದ ಓವರ್ ಗಳಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ದೊಡ್ಡ ಹೊಡೆತಕ್ಕೆ ಯತ್ನಿಸಿ ಸ್ಯಾಮ್ಸನ್ ಆರ್ ಸಿಬಿ ತಂಡದ ಚಾಹಲ್ ಗೆ ಕ್ಯಾಚಿತ್ತು ಔಟ್ ಆದರು.
18ನೇ ಓವರ್ ವರೆಗೂ ಜೊತೆಯಾಟ ಆಡಿದ ಕ್ವಿಂಟನ್ ಡಿ ಕಾಕ್- ಕರುಣ್ ನಾಯರ್ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ನಂತರ ಕ್ರೀಸ್ ಗೆ ಬಂದ ಜೆ.ಪಿ ಡುಮಿನಿ ಕರುಣ್ ನಾಯರ್ ಅವರೊಂದಿಗೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್ ಸಿಬಿ ಪರ ಬೌಲರ್ ಶ್ರೀನಾಥ್ ಅರವಿಂದ್ 32 ರನ್ ನೀಡಿ ಒಂದು ವಿಕೆಟ್ ಪಡೆದರೆ ಪರ್ವೇಜ್ ರಸೂಲ್ 28 ರನ್ ನೀಡಿದರು. ದೆಹಲಿ ಡೇರ್ ಡೆವಿಲ್ಸ್ ಪರ ಕ್ವಿಂಟನ್ ಡಿ ಕಾಕ್ 51 ಎಸೆತಗಳಲ್ಲಿ 108 ರನ್ ಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.