ಖಾನ್ ಪುರ: ಐಪಿಎಲ್ 9 ನೇ ಆವೃತ್ತಿಯ ಪಂದ್ಯಗಳಿಗೆ ಕ್ರೀಡಾಂಗಣದ ಸಮಸ್ಯೆ ಹೆಚ್ಚು ಕಾಡುತ್ತಿದ್ದಂತಿದೆ. ಮುಂಬೈ ನ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಸಮಸ್ಯೆ ಎದುರಾದ ನಂತರ ಕಾನ್ಪುರದಲ್ಲಿ ನಡೆಯಬೇಕಿದ್ದ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯಕ್ಕೆ ಕತ್ತರಿ ಬಿದ್ದಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಎರಡು ಐಪಿಎಲ್ ಪಂದ್ಯಗಳು ನಡೆಯಬೇಕಿತ್ತು. ಆದರೆ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ಎರಡು ಪಂದ್ಯಗಳ ಬದಲು ಒಂದೇ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ. ಕಾನ್ಪುರದಲ್ಲಿ ಒಂದೇ 5 ಸ್ಟಾರ್ ಹೊಟೇಲ್ ಇರುವುದು ಹಾಗೂ ಖಾನ್ ಪುರಕ್ಕೆ ಹತ್ತಿರವಾಗುವ ವಿಮಾನ ನಿಲ್ದಾಣ ಇರುವುದು 71 ಕಿಮಿ ದೂರದಲ್ಲಿ ಆದ ಕಾರಣ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಒಂದೇ ಪಂದ್ಯ ನಡೆಸಲು ತೀರ್ಮಾನಿಸಲಾಗಿದೆ.
ಉತ್ತರ ಪ್ರದೇಶ ಕ್ರಿಕೆಟ್ ಅಸೋಸೊಯೇಶನ್ ನೀಡಿರುವ ಮಾಹಿತಿ ಪ್ರಕಾರ, ಮೇ.19 ಕ್ಕೆ ನಿಗದಿಯಾಗಿರುವ ಗುಜರಾತ್ ಲಯನ್ಸ್- ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ನಡೆಯಲಿದೆ ಎಂದು ತಿಳಿದುಬಂದಿದೆ. ಮೇ.21 ರಂದು ನಿಗದಿಯಾಗಿದ್ದ ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವೂ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲೇ ನಡೆಯಬೇಕಿತ್ತು. ಆದರೆ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿರುವುದರಿಂದ ಅಂದಿನ ಪಂದ್ಯವನ್ನು ಸ್ಥಳಾಂತರಗೊಳಿಸುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.