ನವದೆಹಲಿ: ಎಂತಹುದೇ ಒತ್ತಡ ನಿಭಾಯಿಸುವಲ್ಲಿ ಭಾರತ ತಂಡದ ನಿಗದಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ಎಂದು ಹಿರಿಯ ವೇಗಿ ಆಶೀಶ್ ನೆಹ್ರಾ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಶೀಸ್ ನೆಹ್ರಾ, ತೀವ್ರ ಒತ್ತಡದ ಪರಿಸ್ಥಿತಿಗಳನ್ನು ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮವಾಗಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ 2009ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಕಮ್ ಬ್ಯಾಕ್ ಮಾಡಲು ಇದೇ ಧೋನಿ ನಾಯಕತ್ವದಲ್ಲಿ ಅವಕಾಶ ದೊರೆಯದಿರುವುದಕ್ಕೆ ನೆಹ್ರಾ ವಿಷಾಧ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ನಿಂದ ಆಶೀಶ್ ನೆಹ್ರಾ ಕಳೆದೇ ಹೋಗಿದ್ದರು, ನಿವೃತ್ತಿ ಘೋಷಣೆಯೊಂದೇ ಬಾಕಿ ಎಂದು ಹೇಳುತ್ತಿರುವಾಗಲೇ ಟಿ20 ಮಾದರಿ ಕ್ರಿಕೆಟ್ ನಲ್ಲಿ ಮತ್ತೆ ಫೀನಿಕ್ಸ್ ನಂತೆ ಎದ್ದು ಬಂದ ನೆಹ್ರಾ, ಟಿ20 ವಿಶ್ವಕಪ್ ನಂತಹ ಮಹತ್ವದ ಟೂರ್ನಿಯಲ್ಲೂ ಸ್ಥಾನಗಿಟ್ಟಿಸಿದ್ದರು. ತಮ್ಮ ಕ್ರಿಕೆಟ್ ಜೀವನ ಮತ್ತು ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಂತೆ ಮಾತನಾಡಿರುವ ಆಶೀಶ್ ನೆಹ್ರಾ ತಾವು ಕಂಡ ಉತ್ತಮ ನಾಯಕರಲ್ಲಿ ಧೋನಿ ಕೂಡ ಒಬ್ಬರು ಎಂದು ಹೇಳಿದ್ದಾರೆ.
1999ರಲ್ಲಿ ಅಜರುದ್ದೀನ್ ನಾಯಕರಾಗಿದ್ದಾಗ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದೆ. ಸಾಕಷ್ಚು ನಾಯಕರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ ಮಹೇಂದ್ರ ಸಿಂಗ್ ಧೋನಿಯಂತಹ ಸೌಮ್ಯಸ್ವಭಾವದ ನಾಯಕನೊಂದಿಗೆ ಕೆಲಸ ಮಾಡುವುದು ವಿಶಿಷ್ಛ ಅನುಭವವಾಗಿದೆ. ನಾನು ಈ ವರೆಗೂ ಇಂತಹ ಸೌಮ್ಯ ಸ್ವಭಾವದ ನಾಯಕನನ್ನು ನೋಡಿಲ್ಲ. ಅತಿಯಾದ ಒತ್ತಡದ ಸಮಯದಲ್ಲೂ ಸಮಾಧಾನದಿಂದಿರುವ ಧೋನಿ ತಮ್ಮೊಂದಿಗೆ ತಂಡದ ಇತರೆ ಆಟಗಾರರನ್ನೂ ಹುರಿದುಂಬಿಸುತ್ತಾರೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿದರೆ ರಣಜಿಯಲ್ಲಿ ನಾನು ಸಾಕಷ್ಟು ಅನುಭವ ಹೊಂದಿದ್ದೇನೆ. ಆದರೆ ಕೇವಲ 17 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿರುವುದಕ್ಕೆ ನನ್ನಲ್ಲಿ ವಿಷಾಧವಿದೆ. 2009ರಲ್ಲಿ ಅಂದಿನ ಕೋಚ್ ನಾನು ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಕುರಿತು ಪ್ರಶ್ನಿಸಿದ್ದರು. ಆದರೆ ನಾನು ಅಂದು ನನ್ನ ಟೆಸ್ಟ್ ಸಾಮರ್ಥ್ಯದ ಮೇಲೆಯೇ ಅನುಮಾನಗೊಂಡಿದ್ದೆ. ಆದರೆ ನನ್ನ 35ನೇ ವಯಸ್ಸಿನ ಹೊತ್ತಿಗೆ ನಾನು ಸಾಕಷ್ಟು ರಣಜಿ ಪಂದ್ಯಗಳನ್ನಾಡಿದ್ದೆ ಎಂದು ನೆಹ್ರಾ ಹೇಳಿದ್ದಾರೆ.
ಧೋನಿ ಮತ್ತು ಸೌರವ್ ಗಂಗೂಲಿ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ನೆಹ್ರಾ, ಗಂಗೂಲಿ ನಾಯಕತ್ವದಲ್ಲಿ ಆಡುತ್ತಿದ್ದಾಗ ನನ್ನನ್ನು ಸೇರಿದಂತೆ ಯುವರಾಜ್ ಸಿಂಗ್, ಸೆಹ್ವಾಗ್ ಮತ್ತು ಜಹೀರ್ ಖಾನ್ ಎಲ್ಲರೂ ಯುವಕರು. ಅಂದಿನ ಮಟ್ಟಿಗೆ ನಾಯಕ ಹೇಳಿದ್ದೇ ನಮಗೆ ವೇದವಾಕ್ಯವಾಗಿತ್ತು. ದಾದಾ ಯಾವಾಗಲೂ ನಾವು ಏನು ಮಾಡಬೇಕು ಎಂತಹ ಕಾರ್ಯತಂತ್ರ ಅನುಸರಿಸಬೇಕು ಎಂಬುದರ ಕುರಿತು ಚಿಂತಿಸುತ್ತಿದ್ದರು. ಆ ಬಗ್ಗೆಯೇ ನಮಗೆ ನಿರ್ದೇಶನಗಳನ್ನು ನೀಡುತ್ತಿದ್ದರು.
2009ರಲ್ಲಿ ಧೋನಿ ನಾಯಕತ್ವದಲ್ಲಿ ಮತ್ತೆ ನಾನು ಕಮ್ ಬ್ಯಾಕ್ ಮಾಡಿದಾಗ ನಾನು ಸಾಕಷ್ಟು ಅನುಭವಸ್ಥ ಕ್ರಿಕೆಟಿಗನಾಗಿದ್ದೆ. ನನ್ನ ಬೌಲಿಂಗ್ ಮತ್ತು ಸಾಮರ್ಥ್ಯದ ಬಗ್ಗೆ ಸಾಕಷ್ಟು ತಿಳಿದಿದೆ. ಹೀಗಾಗಿ ಧೋನಿ ಹೇಳುತ್ತಿದ್ದ ವಿಚಾರಗಳು ಬೇಗನೆ ನನಗೆ ತಿಳಿಯುತ್ತಿತ್ತು. ಅದೇ ಮಟ್ಟದಲ್ಲಿ ನಾನು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೆ. ಧೋನಿ ನಾಯಕತ್ವದಲ್ಲಿ ಆಡುವುದು ನಿಜಕ್ಕೂ ವಿಶಿಷ್ಠ ಅನುಭವ ಎಂದು ನೆಹ್ರಾ ಹೇಳಿದ್ದಾರೆ.
ಇನ್ನು ಧೋನಿ ಕೋಪದ ಕುರಿತಂತೆ ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನೆಹ್ರಾ, ಧೋನಿ ಎಷ್ಟು ಬಾರಿ ಕೊಪಗೊಂಡಿರುವುದನ್ನು ನೋಡಿದ್ದೀರಿ. ಕೋಪವಾಗಿರುವುದು ಮತ್ತು ಸೌಮ್ಯವಾಗಿರುವುದು ನೀವು ಕೇಳುವ ಪ್ರಶ್ನೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ನೆಹ್ರಾ ಹೇಳಿದರು. ಇನ್ನು ತಮ್ಮ ಕಮ್ ಬ್ಯಾಕ್ ಕುರಿತು ಮಾತನಮಾಡಿದ ನೆಹ್ರಾ ಪತ್ರಿಕೆಯಲ್ಲಿ ಬರುವ ವಿಚಾರಗಳನ್ನು ನಾನು ತಲೆಗೆ ಹಾಕಿಕೊಳ್ಳುವುದೇ ಇಲ್ಲ. ಇನ್ನು ಹೆಚ್ಚಾಗಿ ಹೇಳಬೇಕು ಎಂದರೆ ನಾನು ಕ್ರಿಕೆಟ್ ಅನ್ನು ಕೂಡ ಟಿವಿಯಲ್ಲಿ ವೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.
ಟಿ20 ಸೆಮಿಫೈನಲ್ ಪಂದ್ಯದ ವೇಳೆ ಗಾಯಗೊಂಡ ಕುರಿತು ಮಾತನಾಡಿದ ನೆಹ್ರಾ ಗಾಯಗೊಂಡ ಮಾತ್ರಕ್ಕೆ ಕ್ರಿಕೆಟಿಗನ ವೃತ್ತಿ ಜೀವನವೇ ಮುಗಿದು ಹೋಯಿತು ಎಂದಲ್ಲ. ಫಿಟ್ ನೆಸ್ ಬೇರೆ ಗಾಯಗೊಳ್ಳುವುದು ಬೇರೆ ಬೇರೆ ಎಂದು ಹೇಳಿದರು.