ಮುಂಬೈ: ಬರ ಸಮಸ್ಯೆಯಿಂದ ಮಹಾರಾಷ್ಟ್ರದಲ್ಲಿ ನಡೆಯಲಿರುವ ಏಪ್ರಿಲ್ ೩೦ ರ ನಂತರದ ಎಲ್ಲ ಐ ಪಿ ಎಲ್ ಕ್ರಿಕೆಟ್ ಪಂದ್ಯಗಳನ್ನು ರಾಜ್ಯದ ಹೊರಗೆ ನಡೆಸುವಂತೆ ಈ ಹಿಂದೆ ಸೂಚಿಸಿದ್ದ ಬಾಂಬೆ ಹೈಕೋರ್ಟ್ ಅದನ್ನು ಸ್ವಲ ಸಡಿಲಿಸಿದ್ದು ಮೇ ೧ರಂದು ಪುಣೆಯಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೆ ಅವಕಾಶ ನೀಡಿದೆ.
ಬೇರೆಡೆ ವರ್ಗಾಯಿಸಲು ತೊಂದರೆಯಾಗುವ ಸನ್ನಿವೇಶದಲ್ಲಿ ಈ ಒಂದು ಪಂದ್ಯ ನಡೆಸಲು ಅವಕಾಶ ಕೋರಿ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿ ಎಂ ಕಾನಡೆ ಮತ್ತು ಎಂ ಎಸ್ ಕಾರ್ನಿಕ್ ಒಳಗೊಂಡ ವಿಭಾಗೀಯ ಪೀಠ ಈ ನಿರ್ಧಾರ ಕೈಗೊಂಡಿದೆ.
"ವರ್ಗಾವಣೆ ಮಾಡಲು ತೊಂದರೆಗಳಿವೆ ಎಂದು ಕೋರಿಕೊಂಡಿರುವುದರಿಂದ ಮೇ ೧ ರಂದು ಪುಣೆಯಲ್ಲಿ ನಡೆಯಲಿರುವ ಇದೊಂದು ಪಂದ್ಯಕ್ಕೆ ವಿನಾಯಿತಿ ನೀಡಿದ್ದೇವೆ" ಎಂದು ಪೀಠ ತಿಳಿಸಿದೆ.
ಏಪ್ರಿಲ್ ೨೯ ರಂದು ಪುಣೆ ತಂಡ ತವರು ನೆಲದಲ್ಲಿ ಗುಜರಾತ್ ಲಯನ್ಸ್ ಜೊತೆಗೆ ಸೆಣಸಲಿರುವುದರಿಂದ ಒಂದೇ ದಿನದಲ್ಲಿ ಪುಣೆ ಮತ್ತೆ ಆಡಬೇಕಿರುವ ಮೇ ೧ ರ ಪಂದ್ಯವನ್ನು ಮಾಹಾರಾಷ್ಟ್ರದಾಚೆಗೆ ವರ್ಗಾಯಿಸುವುದು ಕಷ್ಟ ಎಂದು ಶೆಟ್ಟಿ ಅರ್ಜಿಯಲ್ಲಿ ಕೋರಿದ್ದರು. ಮತ್ತು ಏಪ್ರಿಲ್ ೨೯ ರಂದು ತಡ ರಾತ್ರಿ ಪಂದ್ಯ ಮುಗಿಯುವುದರಿಂದ ಪುಣೆ ತಂಡ ಮುಂದಿನ ದಿನವೇ ಬೇರೆಡೆಗೆ ಪ್ರಯಾಣಿಸುವುದು ತ್ರಾಸದಾಯಕ ಎಂದು ಕೂಡ ಹೇಳಿದ್ದರು.
ಪ್ರತಿ ಐಪಿಎಲ್ ಪಂದ್ಯಕ್ಕೆ ೬೦ಲಕ್ಷ ಲೀಟರ್ ಗಳಿಗಿಂತಲೂ ಹೆಚ್ಚು ನೀರು ಪೋಲಾಗುವುದರಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರದಿಂದ ಪಂದ್ಯಗಳನ್ನು ಬೇರೆಡೆಗೆ ವರ್ಗಾಯಿಸಲು ಕೋರಿ ಅರ್ಜಿ ಸಲ್ಲಿಸಿದ್ದ ಎನ್ ಜಿ ಒ ಲೋಕಸತ್ತ ಚಳುವಳಿಯ ವಾದ ಆಲಿಸಿದ್ದ ಹೈಕೋರ್ಟ್ ಏಪ್ರಿಲ್ ೩೦ ರ ನಂತರದ ಪಂದ್ಯಗಳನ್ನು ಬೇರೆಡೆಗೆ ವರ್ಗಾಯಿಸುವಂತೆ ಏಪ್ರಿಲ್ ೧೩ ರಂದು ಆದೇಶ ನೀಡಿತ್ತು.