ಮುಂಬೈ: ಬರ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯಗಳನ್ನು ಹೊರಕ್ಕೆ ಆಯೋಜಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳಿಗೆ ವಿಶಾಖಪಟ್ಟಣಂ ಐಪಿಎಲ್-9ರ ಮುಂದಿನ ಪಂದ್ಯಗಳಿಗೆ ಪರ್ಯಾಯ ತವರು ಮೈದಾನವನ್ನಾಗಿ ಆಯ್ಕೆ ಮಾಡಲಾಗಿದೆ.
ಪುಣೆ ಮತ್ತು ಮುಂಬೈ ಫ್ರಾಂಚೈಸಿಗಳು ವೈಜಾಗ್ ಮೈದಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರಿಂದ ವಿಶಾಖಪಟ್ಟಣದ ಡಾ.ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಮೈದಾನ ಉಭಯ ತಂಡಗಳ ಪರ್ಯಾಯ ತವರು ಮೈದಾನವಾಗಿದೆ.
ಇನ್ನು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ನಿರೀಕ್ಷೆಯಂತೆಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಸಂಘಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಬೆಂಗಳೂರಿಗೆ 2ನೇ ಬಾರಿಗೆ ಐಪಿಎಲ್ ಫೈನಲ್ ಆಯೋಜಿಸುವ ಅದೃಷ್ಟ ಒಲಿದಿದೆ. ಇದಕ್ಕೂ ಮೊದಲು 2014ರಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು.
ಕ್ರೀಡಾಂಗಣ ಬದಲಾಗಿದ್ದರಿಂದ ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ದಿನಾಂಕದಂದೆ ಉಭಯ ತಂಡಗಳ ಪಂದ್ಯಗಳನ್ನು ನಡೆಯಲಿವೆ. ಮೇ 15ರಂದು ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯ ಸಂಜೆ 4 ಗಂಟೆಗೆ ನಡೆದರೆ, ಮುಂಬೈ ಹಾಗೂ ಡೆಲ್ಲಿ ನಡುವಿನ ಪಂದ್ಯ ವೈಜಾಗ್‌ನಲ್ಲಿ ರಾತ್ರಿ 8ಕ್ಕೆ ನಡೆಯಲಿದೆ.