ಮುಂಬೈ: ಅಮೆರಿಕ ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯ ಭಾರತದ ಸೋಲಿಗೆ ಪಂದ್ಯದ ನೇರ ಪ್ರಸಾರದ ಗುತ್ತಿಗೆ ಪಡೆದಿದ್ದ ಟಿವಿ ಚಾನೆಲ್ ಕೂಡಾ ಕಾರಣ ಎಂದು ಕೇಳಿಬಂದಿದೆ.
ಮಳೆಯಿಂದಾಗಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ರದ್ದಾಗಿತ್ತು. ಆದರೆ ಟಿವಿ ಸಂಸ್ಥೆಯ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕಿಂತ ತಡವಾಗಿ ಪಂದ್ಯ ಆರಂಭಗೊಂಡಿತು. ನಂತರ ಮಳೆ ಬಂದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು.
ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಸರಿಯಾಗಿ ಪಂದ್ಯ ಪ್ರಾರಂಭವಾಗಿದಿದ್ದರೆ ಆಗ ಭಾರತ ಕನಿಷ್ಠ 5 ಓವರ್ ಗಳನ್ನು ಮುಗಿಸುತ್ತಿತ್ತು, ಈ ವೇಳೆ ಡಕ್ ವರ್ತ್ ಲೂಯಿಸ್ ನಿಯಮದ ಅನ್ವಯ ಲೆಕ್ಕಾಚಾರ ಹಾಕಿ ಫಲಿತಾಂಶ ಕಂಡುಹಿಡಿಯಬಹುದಿತ್ತು. ಆದರೆ ಪಂದ್ಯ ಪ್ರಸಾರ ತಡವಾಗಿದ್ದರಿಂದ ಭಾರತದ ಸರಣಿ ಸೋಲಿಗೆ ಟಿವಿ ಚಾನೆಲ್ ಕಾರಣವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 143 ರನ್ ಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮಳೆಗೆ ಪಂದ್ಯ ರದ್ದಾಗುವ ವೇಳೆಗೆ 2 ಓವರ್ ಗಳಲ್ಲಿ 15 ರನ್ ಗಳಿಸಿತ್ತು.