ಇಸ್ಲಾಮಾಬಾದ್: ಟಿ20 ವಿಶ್ವಕಪ್ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದೀಗ ತಾವು ನಿವೃತ್ತಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ನಿವೃತ್ತಿ ಕುರಿತಂತೆ ಹಬ್ಬಿರುವ ಸುದ್ದಿಗಳ ಕುರಿತು ಪ್ರತಿಕ್ರಿಯಿಸಿರುವ ಶಾಹಿದ್ ಅಫ್ರಿದಿ ಸಧ್ಯಕ್ಕೆ ತಾವು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಿಲ್ಲ. ಕಳೆದ 20 ವರ್ಷಗಳಿಂದ ಪಾಕಿಸ್ತಾನದ ಪರ ಕ್ರಿಕೆಟ್ ಆಡಿದ್ದು ನಾನು, ಪಿಸಿಬಿ ಅಲ್ಲ. ನನ್ನ ನಿವೃತ್ತಿ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆಯೇ ಹೊರತು ಬೇರೆಯವರಲ್ಲ. ಕಳೆದ 20 ವರ್ಷಗಳಿಂದ ಅಭಿಮಾನಿಗಳು ಸಾಕಷ್ಟು ಪ್ರೀತಿ ತೋರಿದ್ದಾರೆ. ಅವರ ಪ್ರೀತಿಯೇ ನನಗೆ ದೊಡ್ಡ ಗೌರವ. ಆದೊಂದು ಇದ್ದರೆ ಸಾಕು. ಮತ್ತೇನೂ ಬೇಕಿಲ್ಲ.
ನನ್ನ ನಿವೃತ್ತಿ ಪಂದ್ಯಕ್ಕಾಗಿ ನಾನು ಯಾರ ಮೇಲೂ ಅವಲಂಬಿತನಾಗಿಲ್ಲ. ನನ್ನ ಕ್ರಿಕೆಟ್ ಜೀವನ ಮುಕ್ತಾಯವಾಯಿತು ಎಂದು ಭಾವಿಸಬೇಕಿಲ್ಲ. ನಾನು ಇಂದಿಗೂ ಕ್ರಿಕೆಟ್ ಆಡುವುದನ್ನು ಎಂಜಾಯ್ ಮಾಡುತ್ತಿದ್ದೇನೆ. ನನ್ನ ಸಾಮರ್ಥ್ಯ ಮೀರಿ ಆಡುವ ಪ್ರಯತ್ನ ಮಾಡುತ್ತೇನೆ. ಆದರೆ ತಂಡದ ಆಯ್ಕೆಗಾರರಿಗೆ ಈ ವಿಚಾರ ತಿಳಿಯ ಬೇಕಿದೆಯಷ್ಟೇ ಎಂದು ಅಫ್ರಿದಿ ಹೇಳಿದ್ದಾರೆ.
ಇನ್ನು ಕಳೆದೊಂದು ವರ್ಷದಿಂದಲೂ ಅಫ್ರಿದಿ ಕ್ರಿಕೆಟ್ ಗೆ ವಿದಾಯ ಹೇಳುತ್ತಾರೆ ಎಂದು ಹೇಳಲಾಗುತ್ತಿತ್ತು. ಟಿ20 ವಿಶ್ವಕಪ್ ಸೋಲಿನ ಬಳಿಕ ಅಂದು ತಂಡದ ನಾಯಕರಾಗಿದ್ದ ಆಫ್ರಿದಿ ಪಿಸಿಬಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದೇ ಪಿಸಿಬಿ ಅಫ್ರಿದಿಯವರ ನಿವೃತ್ತಿ ಕೇಳಿತ್ತು ಎಂಬ ಊಹಾಪೋಹ ಕೂಡ ಹಬ್ಬಿತ್ತು. ಆದರೆ ಅಂದು ವಿದಾಯದ ಪಂದ್ಯಕ್ಕೆ ಅಫ್ರಿದಿ ಮನವಿ ಮಾಡಿದ್ದರು. ಇದೇ ಕಾರಣಕ್ಕೆ ಪಿಸಿಬಿ ಅಫ್ರಿದಿಯನ್ನು ತಂಡಕ್ಕೆ ಆಯ್ಕೆ ಮಾಡಿತ್ತು ಎಂದು ಹೇಳಲಾಗುತ್ತಿತ್ತು. ಈ ಹಿಂದೆಯೂ ಸಾಕಷ್ಟು ಬಾರಿ ಅಫ್ರಿದಿ ನಿವೃತ್ತಿಯಾಗುವುದಾಗಿ ಹೇಳಿ ಮತ್ತೆ ಕ್ರಿಕೆಟ್ ಮುಂದುವರೆಸಿದ್ದರು.