ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಮೊದಲ ಟೆಸ್ಟ್ ಪಂದ್ಯ ಇಂದು ಆರಂಭಗೊಳ್ಳಲಿದೆ. ಕಠಿಣ ತರಬೇತಿ ಮೂಲಕ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ತಂಡ ಹೊಸ ಉತ್ಸಾಹದಲ್ಲಿ ಕಂಗೊಳಿಸುತ್ತಿದೆ. ಈ ಹಿಂದೆ ವೆಸ್ಟ್ ಇಂಡೀಸ್ ನಲ್ಲಿ ಆಡಿದ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿರುವ ಟೀಂ ಇಂಡಿಯಾ ಪ್ರಸ್ತುತ ಸರಣಿಯನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಉತ್ಸಾಹದಲ್ಲಿದೆ.
ಉಭಯ ತಂಡಗಳು ಒಟ್ಟು 90 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಭಾರತ 16 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ವೆಸ್ಟ್ ಇಂಡೀಸ್ 30 ಪಂದ್ಯಗಳಲ್ಲಿ ಜಯ ಗಳಿಸಿ ಮೈಲುಗೈ ಸಾಧಿಸಿದೆ. ಇನ್ನು 44 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ವೆಸ್ಟ್ ಇಂಡೀಸ್ ನಲ್ಲಿ ಉಭಯ ತಂಡಗಳು 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಭಾರತ ಕೇವಲ 5 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ವೆಸ್ಟ್ ಇಂಡೀಸ್ 16 ಪಂದ್ಯಗಳಲ್ಲಿ ಜಯಗಳಿಸಿ ಗೆಲ್ಲುವ ಫೇವರೇಟ್ ತಂಡವಾಗಿದೆ.