ಕ್ರಿಕೆಟ್

ಪಾಕಿಸ್ತಾನದ ಸ್ಪಿನ್ ಲೆಜೆಂಡ್ ಸಕ್ಲೈನ್ ಮುಷ್ತಾಕ್ ದೇಶದ್ರೋಹಿಯಂತೆ..!

Srinivasamurthy VN

ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸೋಲು ಕಾಣುತ್ತಿದ್ದಂತೆಯೇ ಆ ದೇಶದ ಸ್ಪಿನ್ ಲೆಜೆಂಡ್ ಸಕ್ಲೈನ್ ಮುಷ್ತಾಕ್ ರನ್ನು ದೇಶದ್ರೋಹಿ ಎಂದು  ಟೀಕಿಸಲಾಗುತ್ತಿದೆ.

ಓಲ್ಡ್ ಟ್ರಾಫೋರ್ಡ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ ಬರೊಬ್ಬರಿ 330 ರನ್ ಗಳ ಭಾರಿ ಅಂತರದ ಗೆಲುವು ಸಾಧಿಸಿತ್ತು. ಈ ಪಂದ್ಯದ ಬಳಿಕ  ರೊಚ್ಚಿಗೆದ್ದಿರುವ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪ್ರಸ್ತುತ ಇಂಗ್ಲೆಂಡ್ ತಂಡದ ಬೌಲಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಮತ್ತು ಖ್ಯಾತ ಸ್ಪಿನ್ನರ್  ಸಕ್ಲೈನ್ ಮುಷ್ತಾಕ್ ಅವರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮುಷ್ತಾಕ್ ರನ್ನು ದೇಶದ್ರೋಹಿ ಎಂದು ಟೀಕಿಸಲಾಗುತ್ತಿದ್ದು, ಪಾಕಿಸ್ತಾನದಲ್ಲಿ ಹುಟ್ಟಿ-ಬೆಳೆದು ಬ್ರಿಟೀಷರ ಗೆಲುವು ತಂದಿತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ.  ಪಾಕಿಸ್ತಾನದ ಬ್ಯಾಟಿಂಗ್ ನ ರಹಸ್ಯಗಳನ್ನು ಇಂಗ್ಲೆಂಡ್ ತಂಡಕ್ಕೆ ತಿಳಿಸುವ ಮೂಲಕ ಅವರು ಸುಲಭವಾಗಿ ಪಂದ್ಯ ಗೆಲ್ಲುವಂತೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಟ್ವಿಟ್  ಗಳು ಮತ್ತು ಫೇಸ್ ಬುಕ್ ಸ್ಟೇಟಸ್ ಗಳು ಇದೀಗ ಪಾಕಿಸ್ತಾನದಲ್ಲಿ ವೈರಲ್ ಆಗಿದ್ದು, ಮುಷ್ತಾಕ್ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಆದರ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಷ್ತಾಕ್ ಅವರು, ನಾನು ಯಾವುದೇ ದೇಶದ್ರೋಹ ಕೆಲಸ ಮಾಡಿಲ್ಲ. ನನಗೆ ವಹಿಸಿದ್ದ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ಮಾಡಿರುವೆ ಎಂದು ಹೇಳಿದ್ದಾರೆ.

ದಶಕಗಳ ಕಾಲ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದ್ದ ಓರ್ವ ಆಟಗಾರನನ್ನು ಕೇವಲ ಒಂದು ಪಂದ್ಯದ ಸೋಲಿನಿಂದ  ದೇಶದ್ರೋಹಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕೂಡ ಶಾಹಿದ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ಟಿ20  ತಂಡ ಭಾರತದ ವಿರುದ್ಧ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಸೋತಾಗ ಅವರನ್ನು ದೇಶದ್ರೋಹಿ ಎಂದು ಟೀಕಿಸಲಾಗಿತ್ತು. ಬಳಿಕ ಅವರು ತಮ್ಮ ನಾಯಕತ್ವ ತೊರೆದಿದ್ದರು.

SCROLL FOR NEXT