ಕಿಂಗ್ಸ್ ಟನ್(ಜಮೈಕಾ): ಟೆಸ್ಟ್ ನಲ್ಲಿ ಕಳೆದ ಆರು ಇನ್ನಿಂಗ್ಸ್ ಗಳಲ್ಲಿ ಅರ್ಧ ಶತಕ ದಾಖಲಿಸಿದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ತಮ್ಮ ಫಾರ್ಮ್ ಬಗ್ಗೆ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದಿದೆ. ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಪೂಜಾರ 16 ರನ್ ಗಳಿಸಿ ಔಟಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನನ್ನ ಫಾರ್ಮ್ ಬಗ್ಗೆ ನನಗೆ ಚಿಂತೆ ಇಲ್ಲ. ತಂಡ ಪಂದ್ಯ ಗೆಲುವಿನಲ್ಲಿ ನನ್ನ ಕೊಡುಗೆ ಸಹ ಇದೆ ಎಂಬ ಸಂತಸ ನನಗಿದೆ ಎಂದು ಹೇಳಿದ್ದಾರೆ.
ಕಳೆದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಾನು ಉತ್ತಮವಾಗಿ ಬ್ಯಾಟ್ ಮಾಡಿದ್ದು ಸದ್ಯ ನನ್ನ ಫಾರ್ಮ್ ಬಗ್ಗೆ ಚಿಂತಿಸಲ್ಲ. ಪಂದ್ಯವೊಂದರಲ್ಲಿ ತಂಡ ಉತ್ತಮವಾಗಿ ಆಡುತ್ತಿರುವಾಗ ನಾನ್ನೊಬ್ಬನ ಕೊಡುಗೆಯನ್ನೇ ಗುರುತಿಸಬೇಕಿಲ್ಲ ಎಂದರು.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ನಾನು ಕಳಪೆ ಹೊಡೆತಕ್ಕೆ ಮುಂದಾಗಿ ಔಟಾಗಿದ್ದು ನನಗೆ ಮನವರಿಕೆಯಾಗಿದೆ. ಬ್ಯಾಟಿಂಗ್ ಮಾಡುವಾಗ ನಾನು ಜವಾಬ್ದಾರಿಯುತವಾಗಿ ಆಡುತ್ತೇನೆ. ಆದರೆ ಕೆಲವೊಮ್ಮೆ ಕಳಪೆ ಹೊಡೆತಗಳಿಂದ ಔಟಾಗಬೇಕಾಗುತ್ತದೆ. ಈ ಬಗ್ಗೆ ತಂಡದ ಕೋಚ್ ಅನಿಲ್ ಕುಂಬ್ಳೆ ಅವರೊಂದಿಗೆ ಮಾತನಾಡಿದ್ದು ನನ್ನು ಬ್ಯಾಟಿಂಗ್ ಬಗ್ಗೆ ಕುಂಬ್ಳೆ ಅವರು ಕೆಲವೊಂದು ಟೀಪ್ಸ್ ಗಳನ್ನು ನೀಡಿದ್ದಾರೆ. ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡುವ ಭರವಸೆ ನನಗಿದೆ ಎಂದು ಪೂಜಾರ ಹೇಳಿದ್ದಾರೆ.