ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಯ್ಮೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರು ಈಗ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಹೌದು, ನಾನು ಭಾರತೀಯ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸಂದೀಪ್ ಪಾಟೀಲ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಸಂದೀಪ್ ಪಾಟೀಲ್ ಅವರು ಈ ಮೊದಲು ಕೀನ್ಯಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಭಾರತದ ವಿವಿಧ ವಯೋಮಿತಿಯ ತಂಡಗಳಿಗೆ ಕೋಚ್ ಆಗಿ ಅನುಭವ ಹೊಂದಿದ್ದಾರೆ. 2012 ರಿಂದ ಪಾಟೀಲ್ ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಈ ವರ್ಷಾಂತ್ಯಕ್ಕೆ ಅವರ ಅವಧಿ ಕೊನೆಗೊಳ್ಳಲಿದೆ.
ಪಾಟೀಲ್ ಅಷ್ಟೆ ಅಲ್ಲದೆ, ಆಯ್ಕೆ ಸಮಿತಿಯಲ್ಲಿರುವ ವಿಕ್ರಮ್ ರಾಥೋರ್, ಪ್ರವೀಣ್ ಆಮ್ರೆ, ಲಾಲಚಂದ್ ರಜಪೂತ್, ಹ್ರಿಷಿಕೇಶ್ ಕಾನಿಟ್ಕರ್ ಕೂಡ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರವಿ ಶಾಸ್ತ್ರಿ ಅವರ ಹೆಸರು ಕೋಚ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಣಿಸಿದ್ದು ಸದ್ಯದಲ್ಲೆ ಅರ್ಜಿ ಸಲ್ಲಿಸಲಿದ್ದಾರೆ.