ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್ ಆಗಿ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಕೋಚ್ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಟೀಂ ಇಂಡಿಯಾದ ಕೋಚ್ ಆಗಿ ನೇಮಕ ವಿಚಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ, ಟೀಂ ಇಂಡಿಯಾ ಕೋಚ್ ಹುದ್ದೆಯನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಹೊಸ ಕೆಲಸದಿಂದಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ. ತಂಡದ ಆಟಗಾರರ ಜತೆ ಸೇರಿ ಕೆಲಸ ಮಾಡಲು ಸಿದ್ಧ, ಟೀಂ ಇಂಡಿಯಾದ ಕೋಚ್ ಆಗುವುದು ದೊಡ್ಡ ಸನ್ಮಾನವೇ ಸರಿ ಎಂದು ಕುಂಬ್ಳೆ ಹೇಳಿದ್ದಾರೆ.
ಟೀಂ ಇಂಡಿಯಾ ಕೋಚ್ ಕುರಿತಂತೆ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಕಸರತ್ತಿಗೆ ಇಂದು ಉತ್ತರ ಸಿಕ್ಕಿದೆ. ತಂಡದ ಕೋಚ್ ಹುದ್ದೆಗೆ ಪ್ರಭಾವಿಗಳಾದ ರವಿಶಾಸ್ತ್ರಿ ಹಾಗೂ ಸಂದೀಪ್ ಪಾಟೀಲ್ ರೇಸ್ ನಲ್ಲಿದ್ದರು. ಇವರಿಬ್ಬರನ್ನು ಹಿಂದಿಕ್ಕಿದ ಕುಂಬ್ಳೆ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.