ಲಾಹೋರ್: ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ-ಪಾಕ್ ನಡುವಿನ ಟಿ-20 ಪಂದ್ಯಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಸ್ಟೇಡಿಯಂ ಪರಿಶೀಲನೆಗೆ ಉನ್ನತ ಮಟ್ಟದ ತಂಡವೊಂದನ್ನು ಅಂತಿಮಗೊಳಿಸಿರುವುದಾಗಿ ತಿಳಿದುಬಂದಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 19 ರಂದು ಭಾರತ, ಪಾಕ್ ನಡುವೆ ಟಿ-20 ಪಂದ್ಯ ನಿಗದಿ ಮಾಡಲಾಗಿದೆ. ಆದರೆ, ಧರ್ಮಶಾಲಾದಲ್ಲಿ ನಡೆಯುವ ಪಂದ್ಯಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ. ಹೀಗಾಗಿ ತಮ್ಮ ಆಟಗಾರರ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದೀಗ ತ್ರಿಸದಸ್ಯ ತಂಡದಿಂದ ಭದ್ರತೆ ಕುರಿತಂತೆ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಾವಳಿ ಸದಾ ರೋಚಕ ಹಣಾಹಣಿಯಾಗಿದ್ದು, ಈ ಭಾರಿ ಉಭಯ ರಾಷ್ಟ್ರಗಳ ನಡುವೆ ವಿಶ್ವಕಪ್ 20 ಪಂದ್ಯವು ಧರ್ಮಶಾಲಾದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ. ಹುತಾತ್ಮ ಯೋಧರ ತವರು ನೆಲವಾಗಿರುವ ಹಿಮಾಚಲ ಪ್ರದೇಶಕ್ಕೆ ಪಾಕಿಸ್ತಾನ ಕ್ರಿಕೆಟಿಗರು ಬಂದು ಆಡುವುದನ್ನು ಯೋಧರ ಕುಟುಂಬ ವಿರೋಧ ವ್ಯಕ್ತಪಡಿಸುತ್ತಿದೆ. ಅಲ್ಲದೆ, ಕೆಲವು ಸಂಘಟನೆಗಳು ಪಂದ್ಯ ಆಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆಗಳನ್ನು ಹಾಕಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿತ್ತು. ಅಲ್ಲದೆ, ಭದ್ರತೆಗೆ ತಂಡವನ್ನು ನಿಯೋಜಿಸಿ ಪರಿಶೀಲನೆ ನಡೆಸುವುದಾಗಿ ಹೇಳಿತ್ತು. ಇದೀಗ 15 ಸದಸ್ಯರ ನೇತೃತ್ವದ ತಂಡವೊಂದನ್ನು ಭದ್ರತೆಗೆ ನೇಮಿಸಿರುವ ಅಲ್ಲಿನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.