ಕ್ರಿಕೆಟ್

ಐಸಿಸಿ ಮಹಿಳಾ ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭಾರತಕ್ಕೆ 29 ರನ್ ಗಳ ಜಯ

Srinivasamurthy VN

ಬೆಂಗಳೂರು: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಐರ್ಲೆಂಡ್ ಮಹಿಳಾ ತಂಡದ ವಿರುದ್ಧ 29 ರನ್ ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಪೇರಿಸಿತು. ಪಂದ್ಯದ ಆರಂಭದಲ್ಲೇ ನಾಯಕಿ ಮಿಥಾಲಿ ರಾಜ್ ಸೇರಿದಂತೆ ಇಬ್ಬರು ಆಟಗಾರ್ತಿಯರ ವಿಕೆಟ್ ಕಳೆದುಕೊಂಡ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ಬಳಿಕ ಬಂದ ಮಧ್ಯಮ ಕ್ರಮಾಂಕದ ಆಟಗಾರ್ತಿ ಎಸ್ ಮಂದನಾ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಲು ಸಹಕಾರಿಯಾದರು.

ಒಟ್ಟು 52 ಎಸೆತಗಳನ್ನು ಎದುರಿಸಿದ ಮಂದನಾ ಭರ್ಜರಿ ಆರ್ಧಶತಕದೊಂದಿಗೆ ಒಟ್ಟು 73 ರನ್ ಗಳಿಸಿದರು.  ಉಳಿದಂತೆ ವೇದಾ ಕೃಷ್ಣಮೂರ್ತಿ (26) ಮತ್ತು ಹೆಚ್.ಕೌರ್ (24 ರನ್) ಮಂದನಾ ಅವರಿಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಭಾರತ ಮಹಿಳಾ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಪೇರಿಸಿ, ಐರ್ಲೆಂಡ್ ಗೆ ಗೆಲ್ಲಲು 148 ರನ್ ಗಳ ಗುರಿ ನೀಡಿತು.

ಈ ಮೊತ್ತವನ್ನು ಬೆನ್ನುಹತ್ತಿದ ಐರ್ಲೆಂಡ್ ವನಿತೆಯರು 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ 118 ರನ್ ಗಳಿಸಲಷ್ಟೇ ಶಕ್ತರಾದರು. ಆ ಮೂಲಕ ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ 29 ರನ್ ಗಳ ಭರ್ಜರಿ ಜಯ ಸಾಧಿಸಿತು. ಭಾರತ ತಂಡ ತನ್ನ 2ನೇ ಅಭ್ಯಾಸ ಪಂದ್ಯವನ್ನು ಶನಿವಾರ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲೇ ಆಡಲಿದೆ.

SCROLL FOR NEXT