ಮುಂಬೈ: ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಯ್ಲ್ ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯಿಂದಾಗಿಯೇ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಆ ಪಟ್ಟಿಗೆ ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ ಉಲ್ಲಾಳ್ ಸೇರಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದ ಕ್ರಿಸ್ ಗೇಯ್ಲ್ ತಮ್ಮ ಸಹ ಆಟಗಾರ ಡ್ವೇನ್ ಬ್ರಾವೊರೊಂದಿಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ ಆ ಪಾರ್ಟಿಗೆ ನಟಿ ಸ್ನೇಹಾ ಕೂಡ ತೆರಳಿದ್ದರು. ಅಲ್ಲಿ ಕ್ರಿಸ್ ಗೇಯ್ಲ್ ಅನ್ನು ನೋಡಿದ್ದೇ ತಡ ಅವರನ್ನು ಕೇವಲ ಮಾತನಾಡಿಸಿದ್ದೇ ಅಲ್ಲ ಪಾರ್ಟಿಯಲ್ಲಿ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.
ಅಲ್ಲದೆ ಪಾರ್ಟಿ ಬಳಿಕ ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು, ಚಾಟೇಡ್, ಡಾನ್ಸ್ಡ್ ಅಂಡ್ ಪಾರ್ಟೀಯ್ಡ್ ಎಂದು ಹೇಳಿದ್ದಾರೆ. ಸ್ನೇಹ ಉಲ್ಲಾಳ್ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ 28 ವರ್ಷದ ನಟಿ ಸ್ನೇಹಾ ಉಲ್ಲಾಳ್ ಪ್ರಸ್ತುತ ಬಾಲಿವುಡ್ ಗೆ ಹಾರಿದ್ದು, ನಟ ಸಲ್ಮಾನ್ ಖಾನ್ ನಟನೆಯ ಲಕ್ಕಿ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.