ವಿಕೆಟ್ ಪಡೆದು ಸಂಭ್ರಮಾಚರಣೆ ಮಾಡುತ್ತಿರುವ ಇಂಗ್ಲೆಂಡ್
ನವದೆಹಲಿ: ಬುಧವಾರ ನಡೆದ ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 15 ರನ್‌ಗಳಿಂದ ಪರಾಭವಗೊಳಿಸಿ ಇಂಗ್ಲೆಂಡ್ ತಂಡ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ. ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 142 ರನ್‌ಗಳನ್ನು ದಾಖಲಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ್ ತಂಡಕ್ಕೆ 20 ಓವರ್‌ನಲ್ಲಿ 9 ವಿಕೆಟ್ ನಷ್ಟದಲ್ಲಿ 127 ರನ್‌ಗಳನ್ನಷ್ಟೇ ದಾಖಲಿಸಲು ಸಾಧ್ಯವಾಯಿತು.
ಸತತವಾಗಿ ಮೂರು ಪಂದ್ಯಗಳಲ್ಲಿಯೂ ಪರಾಭವಗೊಂಡಿರುವ ಅಫ್ಘಾನಿಸ್ತಾನ ಈಗ ವಿಶ್ವಕಪ್ ಪಂದ್ಯದಿಂದ ಔಟ್ ಆಗಿದೆ. ಮೂರು ಪಂದ್ಯಗಳಲ್ಲಿ ಸೋತಿದ್ದರೂ ಅಫ್ಘಾನಿಸ್ತಾನ ತಂಡ ತಮ್ಮ ಕೈಲಾದ ಸಾಮರ್ಥ್ಯವನ್ನು ಪ್ರದರ್ಶಿಸಿ ಜನರ ಮನಸ್ಸು ಗೆದ್ದಿತ್ತು. ಅದೇ ವೇಳೆ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಟ್ಟಿದೆ.
ತಲಾ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದಿಲ್ ರಶೀದ್ ಮತ್ತು ಡೇವಿಡ್ ವಿಲ್ಲಿ ಅಫ್ಘಾನ್‌ನ ರನ್ ಓಟಕ್ಕೆ ತಡೆಯೊಡ್ಡಿದ್ದರು.
ಇಂಗ್ಲೆಂಡ್ ಬೃಹತ್ ಮೊತ್ತದ ಗುರಿಯನ್ನಿಟ್ಟಿರಲಿಲ್ಲವಾದರೂ, ಉತ್ತಮ ಬೌಲಿಂಗ್ ನಿಂದ ಇಂಗ್ಲೆಂಡ್ ವಿಜಯ ಸಾಧಿಸಿತು. ಆದಾಗ್ಯೂ, ಕಡಿಮೆ ಅನುಭವವಿರುವ ಅಫ್ಘಾನ್ ಬ್ಯಾಟ್ಸ್‌ಮೆನ್‌ಗಳು ಕೆಲವೊಂದು ತಪ್ಪುಗಳನ್ನೆಸಗಿದ್ದು ತಂಡಕ್ಕೆ ಕಂಟಕವಾಯಿತು. 27 ಎಸೆತದಲ್ಲಿ 22 ರನ್ ಗಳಿಸಿದ ಸಮಿವುಲ್ಲಾ ಶೆನ್‌ವಾರ್, ನೂರ್ ಅಲಿ ಸರ್ದಾನ್ (17), ರಾಶಿದ್ ಖಾನ್ ( 15), ಮುಹಮ್ಮದ್ ನಬಿ (12), ನಜೀಬುಲ್ಲಾ ಸರ್ದಾನ್ (14) ರನ್ ಗಳಿಸಿದರೂ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ಗಳಲ್ಲಿ ಶಫೀಕುಲ್ಲಾ ಹೊಡೆ ಬಡಿ ಪ್ರದರ್ಶನ ನೀಡಿದ್ದು 25 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿದರು.
ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿ ಇಂಗ್ಲೆಂಡ್ ಆಟಗಾರರಲ್ಲಿ ಮೊಯಿನ್ ಅಲಿ ( 41), ಡೇವಿಡ್ ವಿಲ್ಲಿ (20) ಇಬ್ಬರೂ ಸೇರಿ ಎಂಟನೇ ವಿಕೆಟ್ ನಲ್ಲಿ 57 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು . 19ನೇ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿ 25 ರನ್ ಗಳಿಸಿದ್ದ ಇವರು ಕೊನೆಯ ಓವರ್ ನಲ್ಲಿ 10 ರನ್ ಗಳಿಸಿದ್ದರು,
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 10 ಓವರ್ ಮುಗಿಯುವ ಹೊತ್ತಿನಲ್ಲಿ 6 ವಿಕೆಟ್ ಕಳೆದು ಕೊಂಡು 59 ರನ್‌ಗಳನ್ನಷ್ಟೇ ಪಡೆದಿತ್ತು . ಅಫ್ಘಾನ್ ಪರ ಮುಹಮ್ಮದ್ ನಬಿ, ರಾಶಿದ್ ಖಾನ್ ತಲಾ ಎರಡು ವಿಕೆಟ್ ಕಬಳಿಸಿದ್ದರು. ಅಮೀರ್ ಹಂಸ, ಸಮಿವುಲ್ಲಾ ಶೆನ್‌ವಾರಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos