ಕ್ರಿಕೆಟ್

ಮಿಂಚಿದ ಸ್ಮಿತ್, ವಾಟ್ಸನ್ ; ಪಾಕ್‌ಗೆ ಆಸ್ಟ್ರೇಲಿಯಾದಿಂದ 194 ರನ್ ಗುರಿ

Rashmi Kasaragodu
ಮೊಹಾಲಿ: ಟಿ 20 ವಿಶ್ವಕಪ್ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮೊಹಾಲಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 193 ರನ್‌ಗಳನ್ನು ದಾಖಲಿಸಿದೆ.
ಆರಂಭಿಕ ದಾಂಡಿಗರಾಗಿ ಕ್ರೀಸ್ ಗಿಳಿದಿದ್ದ ಉಸ್ಮಾನ್ ಖವಾಜಾ ಮತ್ತು ಆರೋನ್ ಫ್ಲಿಂಚ್ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭವನ್ನು ನೀಡಿದ್ದರು. ನಾಲ್ಕನೇ ಓವರ್‌ನಲ್ಲಿ ರಿಯಾಜ್ ಎಸೆತಕ್ಕೆ ಖವಾಜಾ (21) ವಿಕೆಟ್ ಪತನವಾಯಿತು. ಅನಂತರ ಬಂದ ಡೇವಿಡ್ ವಾರ್ನರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ರಿಯಾಜ್ ಮಾರಕ ಬೌಲಿಂಗ್‌ಗೆ 9 ರನ್ ಬಾರಿಸಿ ವಾರ್ನರ್  ವಿಕೆಟ್ ಒಪ್ಪಿಸಿದರು. 
15 ರನ್‌ಗಳನ್ನು ಬಾರಿಸಿದ ಅರೋನ್ ಫ್ಲಿಂಚ್ ಇಮಾದ್ ವಾಸಿಂಗೆ ವಿಕೆಟ್ ಒಪ್ಪಿಸಿದಾಗ ತಂಡ ಸ್ಕೋರ್  57 ಆಗಿತ್ತು. ನಂತರ ನಾಯಕ ಸ್ಟೀವನ್ ಸ್ಮಿತ್ ಮತ್ತು ಗ್ಲ್ಯಾನ್ ಮ್ಯಾಕ್ಸ್‌ವೆಲ್‌ನ ಸಮಯೋಜಿತ ಜತೆಯಾಟ  ಆಸ್ಟ್ರೇಲಿಯಾದ ಸ್ಕೋರ್ ಏರಿಕೆಯಾಗುವಂತೆ ಮಾಡಿತು. 14 ನೇ ಓವರ್ ನಲ್ಲಿ ಇಮಾದ್ ವಾಸಿಂ ಎಸೆತದಲ್ಲಿ ಅಹ್ಮದ್ ಶೆಹಜಾದ್ ಕ್ಯಾಚ್ ಹಿಡಿಯುವ ಮೂಲಕ ಮ್ಯಾಕ್ಸ್‌ವೆಲ್ (30) ರನ್ನು ಪೆವಿಲಿಯನ್‌ಗೆ ಅಟ್ಟಿದರು. ಮ್ಯಾಕ್ಸ್ ವೆಲ್ ನಂತರ ಬಂದ ಶೇನ್ ವಾಟ್ಸನ್, ಸ್ಮಿತ್ ಗೆ ಉತ್ತಮ ಸಾಥ್ ನೀಡಿದರು. 21 ಎಸೆತಗಳನ್ನೆದುರಿಸಿದ ವಾಟ್ಸನ್ 44 (ಅಜೇಯ) ಮತ್ತು  43 ಎಸೆತಗಳನ್ನೆದುರಿಸಿದ ಸ್ಮಿತ್  61 (ಅಜೇಯ) ರನ್ ಗಳ ಸಹಾಯದಿಂದ ಆಸ್ಟ್ರೇಲಿಯಾ 193 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.
ಪಾಕಿಸ್ತಾನದ ಪರವಾಗಿ ರಿಯಾಜ್ ಮತ್ತು ಇಮಾದ್ ವಾಸಿಂ ತಲಾ 2 ವಿಕೆಟ್ ಗಳನ್ನು  ಕಬಳಿಸಿದ್ದಾರೆ.
SCROLL FOR NEXT