ನಾಗ್ಪುರ: ಸೆಮಿಫೈನಲ್ ಕನಸು ಕಾಣುತ್ತಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕನಸು ಬಹುತೇಕ ಕಮರಿ ಹೋಗಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 3 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 3 ವಿಕೆಟ್ ಗಳ ಅಂತರದ ಗೆಲುವು ಸಾಧಿಸಿದೆ. ಆ ಮೂಲಕ ಹ್ಯಾಟ್ರಿಕೆ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಸೆಮಿಫೈನಲ್ ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ನ ಸಂಘಟಿತ ಬೌಲಿಂಗ್ ನಿಂದಾಗಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಿತು. ಡಿ ಕಾಕ್ (47 ರನ್) ಮತ್ತು ವೀಸ್ (28ರನ್) ಅವರನ್ನು ಹೊರತು ಪಡಿಸಿದರೆ ಆಫ್ರಿಕಾದ ಮತ್ತಾವುದೇ ಆಟಗಾರ ವಿಂಡೀಸ್ ದಿಟ್ಟ ಉತ್ತರ ನೀಡುವ ಪ್ರಯತ್ನ ಮಾಡಲಿಲ್ಲ. ವಿಂಡೀಸ್ ನ ಬೌಲಿಂಗ್ ದಾಳಿಗೆ ಕುಸಿದ ಆಫ್ರಿಕಾ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 122 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ವಿಂಡೀಸ್ ಪರ ಕ್ರಿಸ್ ಗೇಯ್ಲ್, ರಸೆಲ್ ಮತ್ತು ಬ್ರಾವೋ ತಲಾ 2 ವಿಕೆಟ್ ಪಡೆದು ಮಂಚಿದರು.
ಆಫ್ರಿಕಾ ನೀಡಿದ 123ರನ್ ಗಳ ಗುರಿಯನ್ನು ಬೆನ್ನುಹತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಕೇವಲ 5ರನ್ ಗೆ ವಿಂಡೀಸ್ ಕ್ರಿಸ್ ಗೇಯ್ಲ್ ಅವರ ವಿಕೆಟ್ ಕಳೆದುಕೊಂಡಿತ್ತು. ಆದರೆ ಮತ್ತೋರ್ವ ಆರಂಭಿಕ ಆಟಗಾರ ಚಾರ್ಲ್ಸ್ ತಮ್ಮ ಎಂದಿನ ಬ್ಯಾಟಿಂಗ್ ಶೈಲಿ ಮುಂದುವರೆಸಿ ವಿಂಡೀಸ್ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆಫ್ರಿಕಾ ಗುರಿ ಬೆನ್ನುಹತ್ತಿದ್ದ ವಿಂಡೀಸ್ ಕೊನೆಯ ಹಂತದಲ್ಲಿ ಸಾಕಷ್ಟು ವಿಕೆಟ್ ಕಳೆದುಕೊಳ್ಳುವ ಮೂಲಕ ವಿಂಡೀಸ್ ಕ್ರಿಕೆಟ್ ಪ್ರೇಮಿಗಳಲ್ಲಿ ಸೋಲಿನ ಭೀತಿ ಹುಟ್ಟಿಸಿತ್ತು. ಆದರೆ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತಿದ್ದ ಮರ್ಲಾನ್ ಸ್ಯಾಮುಯೆಲ್ಸ್ (44ರನ್)ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರಬಡಾ ಎಸೆದ ಕೊನೇ ಓವರ್‌ನಲ್ಲಿ 9 ರನ್ ಅಗತ್ಯವಿದ್ದಾಗ ಬ್ರಾಥ್‌ವೇಟ್ (10*) ಸಿಕ್ಸರ್ ಸಿಡಿಸಿ ಗೆಲುವು ಸುಲಭಗೊಳಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 123 ಗಳಿಸಿ ಗೆಲುವಿನ ದಡ ಸೇರಿತು.
ದಕ್ಷಿಣ ಆಫ್ರಿಕಾ ಪರ ಇಮ್ರಾನ್ ತಾಹಿರ್ 2 ವಿಕೆಟ್ ಪಡೆದರೆ, ರಬಾಡ, ಮೊರಿಸ್, ವೀಸ್ ಮತ್ತು ಫಂಗೀಸೋ ತಲಾ 1 ವಿಕೆಟ್ ಪಡೆದರು. ಬಿರುಸಿನ ಬ್ಯಾಟಿಂಗ್ ಮಾಡಿ ವಿಂಡೀಸ್ ತಂಡದ ಗೆಲುವಿಗೆ ಕಾರಣರಾದ ಸ್ಯಾಮುಯೆಲ್ಸ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.