ದುಬೈ: ಏಷ್ಯಾಕಪ್ ಟಿ20 ಟೂರ್ನಿ ಮತ್ತು ಟಿ20 ವಿಶ್ವಕಪ್ ನಲ್ಲಿ ಹೀನಾಯ ಸೋಲು ಕಂಡ ಪಾಕಿಸ್ತಾನ ತಂಡದ ವಿರುದ್ಧ ತವರಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಕ್ಷಮೆ ಯಾಚಿಸಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸೋತ ಬಳಿಕ ಪಾಕಿಸ್ತಾನ ತಂಡ ತವರಿಗೆ ಮರಳಿತ್ತಾದರೂ, ನಾಯಕ ಅಫ್ರಿದಿ ಮಾತ್ರ ದುಬೈಗೆ ಹಾರಿದ್ದರು. ಇದೀಗ ಅಲ್ಲಿಂದಲೇ ಬುಧವಾರ ಅವರು ವಿಡಿಯೊ ಸಂದೇಶ ರವಾನಿಸಿದ್ದು, ನೀರಸ ಪ್ರದರ್ಶನ ಕುರಿತು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ‘ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗಳು ಸೇರಿದಂತೆ ಹಿಂದಿನ ಕೆಲ ಸರಣಿಗಳಲ್ಲಿ ನಾವು ನೀರಸವಾಗಿ ಆಡಿದ್ದೇವೆ. ಇದರಿಂದ ನಿಮಗೆಲ್ಲಾ ತುಂಬಾ ನೋವಾಗಿರಬಹುದು. ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ದಯಮಾಡಿ ಇದೊಂದು ಬಾರಿ ನಮ್ಮನ್ನು ನೀವು ಕ್ಷಮಿಸಿಬಿಡಿ’ ಎಂದು ಶಾಹಿದ್ ಅಫ್ರಿದಿ ಅವರು ಪಾಕಿಸ್ತಾನದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
‘ಬೇರೆಯವರು ಏನೇ ಹೇಳಲಿ ಅದರ ಬಗ್ಗೆ ನಾನು ಕಿಂಚಿತ್ತೂ ಯೋಚಿಸುವುದಿಲ್ಲ. ನಮಗೆ ಸಾಕಷ್ಟು ಪ್ರೀತಿ, ಪ್ರೋತ್ಸಾಹ ನೀಡಿ ಬೆಳೆಸಿದವರು ಪಾಕಿಸ್ತಾನದ ಅಭಿಮಾನಿಗಳು. ನಿಮಗೆ ನಾನು ಉತ್ತರ ನೀಡಲೇಬೇಕಿದ್ದು, ಇಲ್ಲದಿದ್ದರೆ ನಿಮ್ಮ ನಂಬಿಕೆಗೆ ದ್ರೋಹ ಮಾಡಿದಂತಾಗುತ್ತದೆ. ದಯವಿಟ್ಟು ಹಿಂದಿನದ್ದನ್ನೆಲ್ಲಾ ಮರೆತು ನಮ್ಮ ತಂಡವನ್ನು ಕ್ಷಮಿಸಿ’ ಎಂದು ಅಫ್ರಿದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.
ಟಿ20 ವಿಶ್ವಕಪ್ ವೇಳೆ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳಿಂದಲೂ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಅಫ್ರಿದಿ ಗುರಿಯಾಗಿದ್ದರು. ಇನ್ನು ಏಷ್ಯಾಕಪ್ ಟೂರ್ನಿ ಮತ್ತು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋತ ಬಳಿಕ ಪಿಸಿಬಿ ಅಫ್ರಿದಿ ವಿರುದ್ಧ ಕಠಿಣ ನಿಲುವು ತಳೆಯಲು ಮುಂದಾಗಿ, ಅಫ್ರಿದಿ ಅವರನ್ನು ತಂಡದಿಂದಲೇ ಹೊರಗಿಡುವ ಕಠಿಣ ನಿರ್ಧಾರ ತಳೆದಿದೆ. ಈಗಾಗಲೇ ಟೆಸ್ಟ್ ಮಾದರಿಗೆ ವಿದಾಯ ಹೇಳಿರುವ ಅಫ್ರಿದಿ 2 ಪಂದ್ಯಗಳಿಂದ 1716ರನ್ ಗಳಿಸಿದ್ದು 48 ವಿಕೆಟ್ ಉರುಳಿಸಿದ್ದಾರೆ. 398 ಏಕದಿನ ಪಂದ್ಯಗಳನ್ನು ಆಡಿರುವ ಆಲ್‌ರೌಂಡರ್ 8064ರನ್ ಹಾಗೂ 395 ವಿಕೆಟ್ ಕಬಳಿಸಿದ್ದಾರೆ. 98 ಟ್ವೆಂಟಿ–20 ಪಂದ್ಯಗಳಿಂದ 1405ರನ್ ಹಾಗೂ 97ವಿಕೆಟ್ ಗಳಿಸಿದ್ದಾರೆ.
ಮಗಳ ಅನರೋಗ್ಯ ನಿಮಿತ್ತ ಪಿಸಿಬಿ ವಿಚಾರಣೆಗೆ ಅಫ್ರಿದಿ ಗೈರು
ಇದೇ ವೇಳೆ ಲಾಹೋರ್ ನಲ್ಲಿ ಅಫ್ರಿದಿ ಪಿಸಿಬಿ ವಿಚಾರಣೆ ಎದುರಿಸಬೇಕಿತ್ತು. ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ಕುರಿತು ವರದಿ ನೀಡಲು ಮಾಜಿ ಆಟಗಾರರಾದ ಮಿಸ್ಬಾ ಉಲ್ ಹಕ್, ಯೂನಿಸ್ ಖಾನ್ ಮತ್ತು ಸುಭಾನ್ ಅಹ್ಮದ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯಬೇಕಿತ್ತು. ಅಫ್ರಿದಿ ಮಗಳು ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಫ್ರಿದಿ ವಿಚಾರಣೆಗೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ.
I have always been playing cricket for the nation and not for my self.pakistan zindabad