ಮುಂಬೈ: ಟೀಂ ಇಂಡಿಯಾವನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ರಾಹುಲ್ ದ್ರಾವಿಡ್ ಗೆ ಇದೆ. ದ್ರಾವಿಡ್ ಭಾರತೀಯ ಕ್ರಿಕೆಟಿಗರ ನಾಡಿಮಿಡಿತ ಅರಿತುಕೊಂಡಿದ್ದಾರೆ, ಹೀಗಾಗಿ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಕ ಮಾಡಬೇಕೆಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಂಟಿಂಗ್, ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ, ಎಲ್ಲಾ ಕ್ರಿಕೆಟ್ ಪಂಡಿತರ ಸಲಹೆಯಾಗಿದೆ. ದ್ರಾವಿಡ್ ಗಿಂತ ಉತ್ತಮ ಕೋಚ್ ಸಿಗಲು ಸಾಧ್ಯವಿಲ್ಲ, ಹೀಗಾಗಿ ಈ ಸಂಬಂಧ ಬಿಸಿಸಿಐ ಚಿಂತಿಸಲಿ ಎಂದು ಸಲಹೆ ನೀಡಿದ್ದಾರೆ.
ಟೆಸ್ಟ್, ಏಕದಿನ ಹಾಗೂ ಟಿ 20 ಮೂರು ಮಾದರಿಯ ಪಂದ್ಯಗಳಲ್ಲೂ ದ್ರಾವಿಡ್ ಪರಿಣಿತಿ ಹೊಂದಿರುವುದು ತಂಡದ ನೆರವಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಕೂಡ ಯಶಸ್ಸಿನೆಡೆಗೆ ಕೊಂಡೊಯ್ಯಲು ದ್ರಾವಿಡ್ ಶ್ರಮಿಸಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು.
ಈ ಸದಂರ್ಭದಲ್ಲಿ ಮುಂಬೈನ ಸಹ ತರಬೇತುದಾರರಾದ ಶೇನ್ ಬಾಂಡ್, ಜಾಂಟಿ ರೋಡ್ಸ್ ಹಾಗೂ ಆಟಗಾರರಾದ ಪಾರ್ಥಿವ್ ಪಟೇಲ್, ಕುನಾಲ್ ಪಾಂಡ್ಯ ಉಪಸ್ಥಿತರಿದ್ದರು.