ಕ್ರಿಕೆಟ್

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಅಲಿಸ್ಟರ್ ಕುಕ್!

Srinivasamurthy VN

ಲಂಡನ್: ದಶಕಗಳ ಹಿಂದೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆಯೊಂದನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಅಲಿಸ್ಟರ್ ಕುಕ್  ಸೋಮವಾರ ಮುರಿದಿದ್ದಾರೆ.

ಇಂಗ್ಲೆಂಡ್ ದುರ್ಹ್ಯಾಮ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಕುಕ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 10 ಸಾವಿರ ರನ್ ಗಳ ಗಡಿ ದಾಟಿದ್ದು, ಈ ಸಾಧನೆ ಮಾಡಿದ ಇಂಗ್ಲೆಂಡ್ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಅಂತೆಯೇ ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಅತಿ ಚಿಕ್ಕ ವಯಸ್ಸಿನ ಕ್ರಿಕೆಟಿಗ ಎಂಬ ಕೀರ್ತಿಗೂ ಕುಕ್ ಭಾಜನರಾಗಿದ್ದಾರೆ.

ಈ ಹಿಂದೆ ಈ ದಾಖಲೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿತ್ತು. 31 ವರ್ಷ 326 ದಿನ ವಯಸ್ಸಾಗಿದ್ದ ವೇಳೆ ಸಚಿನ್ ತೆಂಡೂಲ್ಕರ್ ಭಾರತದ ಈಡನ್ ಗಾರ್ಡನ್ ಮೈದಾನದಲ್ಲಿ 2005ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 10 ಸಾವಿರ ರನ್ ಗಳ ಗಡಿ ದಾಟುವ ಮೂಲಕ 10 ಸಾವಿರ ರನ್ ಪೂರೈಸಿದ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದರು. ಆದರೆ ಇದೀಗ 31 ವರ್ಷ 158 ದಿನಗಳ ವಯಸ್ಸಿನ ಕುಕ್ 10 ಸಾವಿರ ರನ್ ಗಳ ಗಡಿ ದಾಟುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.128ನೇ ಟೆಸ್ಟ್ ಆಡುತ್ತಿರುವ ಕುಕ್ 10 ಸಾವಿರ ರನ್ ಪೂರೈಸಿದ ವಿಶ್ವದ 12 ಬ್ಯಾಟ್ಸಮನ್ ಆಗಿದ್ದಾರೆ.

SCROLL FOR NEXT