ಕ್ರಿಕೆಟ್

8 ವರ್ಷಗಳ ಕನಸು ನನಸಾಗಿಸಿಕೊಂಡ ಯುವಿ

Srinivasamurthy VN

ಬೆಂಗಳೂರು: ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾಗಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ತಮ್ಮ 8 ವರ್ಷಗಳ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ಐಪಿಎಲ್ ನ ಎಲ್ಲಾ ಟೂರ್ನಿಗಳಲ್ಲಿಯೂ ವಿವಿಧ ತಂಡಗಳ ಪ್ರತಿನಿಧಿಯಾಗಿ ಭಾಗವಹಿಸಿದ್ದ ಯುವರಾಜ್ ಸಿಂಗ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದರು. ಆದರೆ ಭಾನುವಾರ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ 8 ವರ್ಷಗಳ ಕನಸು ನನಸಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ಮೂಲಕ ಯುವಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಈ ಮೂಲಕ ಯುವಿ ರಣಜಿ ಹೊರತು ಪಡಿಸಿ ಕ್ರಿಕೆಟ್ ಎಲ್ಲ ಟ್ರೋಫಿಗಳನ್ನು ಎತ್ತಿಹಿಡಿದ ದಾಖಲೆ ಬರೆದಿದ್ದಾರೆ.

ಈ ಹಿಂದೆ 2000ನೇ ಇಸವಿಯಲ್ಲಿ ಕಿರಿಯರ ವಿಶ್ವಕಪ್ ಗೆದಿದ್ದ ಯುವಿ ಬಳಿಕ 2002-03ರಲ್ಲಿ ಚಾ೦ಪಿಯನ್ಸ್ ಟ್ರೋಫಿ ಗೆದ್ದಿದ್ದರು. ನಂತರ 2007ರಲ್ಲಿ ಟಿ20 ವಿಶ್ವಕಪ್ ಮತ್ತು ಆ ಬಳಿಕ 2011 ರಲ್ಲಿ ಏಕದಿನ ವಿಶ್ವಕಪ್ ಅನ್ನು ಯುವರಾಜ್ ಸಿಂಗ್ ಗೆದ್ದಿದ್ದರು. ಇದೀಗ 2016ರಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಯುವಿ ದಾಖಲೆ ಬರೆದಿದ್ದಾರೆ. ಸದ್ಯ ಯುವಿ ಪಾಲಿಗೆ ದೇಶೀಯ ಕ್ರಿಕೆಟ್‍ನ ರಣಜಿ ಟ್ರೋಫಿ ಗೆಲುವೊ೦ದು ಬಾಕಿ ಇದ್ದು, ಅದನ್ನೂ ಗೆದ್ದರೆ ಯುವಿ ಕ್ರಿಕೆಟ್ ನ ಎಲ್ಲ ಮಾದರಿಯ ಟ್ರೋಫಿಗಳನ್ನು ಎತ್ತಿ ಹಿಡಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.

ವಿಶ್ವಕಪ್ ಟ್ರೋಫಿಯಷ್ಟೇ ವಿಶೇಷ ಎಂದ ಯುವಿ!
ಇದೇ ವೇಳೆ ತಮ್ಮ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ಯುವಿ ತಮಗೆ ಈ ಐಪಿಎಲ್ ಟ್ರೋಫಿ ವಿಶ್ವಕಪ್ ನಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ಯುವರಾಜ್ ಸಿಂಗ್ "ತಾವು ಗೆದ್ದ ವಿಶ್ವಕಪ್ ಟ್ರೋಫಿ ಇರುವ ಸಾಲಿನಲ್ಲಿಯೇ ಐಪಿಎಲ್ ಟ್ರೋಫಿ ಕೂಡ ಸ್ಥಾನ ಪಡೆಯುತ್ತದೆ. ಐಪಿಎಲ್ ಟ್ರೋಫಿ ಗೆದ್ದ ಕ್ಷಣ ಸ್ಮರಣೀಯ. ನಾನು ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದ್ದೆ. ಆದರೆ, ಐಪಿಎಲ್ ಗೆದ್ದಿರಲಿಲ್ಲ. ಕೊನೆಗೂ ಟ್ರೋಫಿ ಗೆದ್ದಿದ್ದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ.

SCROLL FOR NEXT