ಟಿ20 ವಿಶ್ವಕಪ್ 2026: ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ 20 ರನ್ ಜಯ
ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಐರ್ಲೆಂಡ್ ವಿರುದ್ದ 20 ರನ್ ಗಳ ಜಯ ದಾಖಲಿಸಿದೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 164 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದೆ ಐರ್ಲೆಂಡ್ 19.5 ಓವರ್ ನಲ್ಲಿ 143 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 20 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಈ ಪಂದ್ಯದಲ್ಲಿ ಐರ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ 143 ರನ್ ಕಲೆಹಾಕಲಷ್ಟೇ ಶಕ್ತವಾಗಿ 20 ರನ್ಗಳಿಂದ ಸೋಲೊಪ್ಪಿಕೊಂಡಿತು.
ಶ್ರೀಲಂಕಾ ತಂಡದ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ ಮತೀಶ ಪತಿರಾನ ಕೂಡ ಎರಡು ವಿಕೆಟ್‌ಗಳನ್ನು ಪಡೆದರು.
ಶ್ರೀಲಂಕಾ ಬ್ಯಾಟಿಂಗ್
ತವರು ನೆಲದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಒಂದು ಹಂತದಲ್ಲಿ ಲಂಕಾ ತಂಡ 86 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆದರೆ ಕಮಿಂದು ಮೆಂಡಿಸ್ ಐರಿಶ್ ಬೌಲರ್ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಕೊನೆಯಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕಮಿಂದು 19 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 44 ರನ್ ಗಳಿಸಿದರು. ಕುಶಾಲ್ ಮೆಂಡಿಸ್ ಕೂಡ ಅದ್ಭುತ ಪ್ರದರ್ಶನ ನೀಡಿ 43 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 56 ರನ್ ಗಳಿಸಿದರು. ಹೀಗಾಗಿ ಶ್ರೀಲಂಕಾ 163 ರನ್‌ಗಳ ಸ್ಕೋರ್ ಗಳಿಸಿತು.

