ವಾರಣಾಸಿ: ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಅವರು ಡಿಸೆಂಬರ್ 9ರಂದು ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಸ್ಟಾರ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಪ್ರತಿಮಾ ಸಿಂಗ್ ಅವರೊಂದಿಗೆ ಕಳೆದ ಜೂನ್ 19ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಇಶಾಂತ್ ಶರ್ಮಾ ಅವರು ಡಿಸೆಂಬರ್ 9ರಂದು ಸಪ್ತಪದಿ ತುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮದುವೆ ಸಮಾರಂಭ ದೆಹಲಿಯಲ್ಲಿ ನಡೆಯಲಿದೆ. ವಾರಣಾಸಿಯಲ್ಲಿ ಮದುವೆಗೆ ಸಂಬಂಧಿಸಿದ ಕೆಲವೊಂದು ಕಾರ್ಯಗಳು ನೆರವೇರಲಿವೆ.
ಭಾರತೀಯ ಬಾಸ್ಕೆಟ್ ಬಾಲ್ ಪ್ರಪಂಚದಲ್ಲಿ ಸಿಂಗ್ ಸಿಸ್ಟರ್ ಹೆಸರು ಪ್ರಸಿದ್ಧಿ ಪಡೆದಿದೆ. ಈ ಸಿಂಗ್ ಸಿಸ್ಟರ್ಸ್ ರಲ್ಲಿ ಒಬ್ಬರು ಪ್ರತಿಮಾ. ಅಕ್ಕ ದಿವ್ಯಾ ಸಿಂಗ್ ಈಗ ದಕ್ಷಿಣ ಕೊರಿಯಾದಲ್ಲಿ ಬಾಸ್ಕೆಟ್ ಬಾಲ್ ತರಬೇತುದಾರರಾಗಿದ್ದಾರೆ. ಪ್ರತಿಮಾ ಸಿಂಗ್, ಪ್ರಶಾಂತಿ ಸಿಂಗ್ ಹಾಗೂ ಆಕಾಂಕ್ಷಾ ಸಿಂಗ್ ಅನೇಕ ಬಾರಿ ಭಾರತೀಯ ತಂಡದ ಪರ ಆಟವಾಡಿದ್ದಾರೆ.