ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಮರ ಸಾರಿದಂತಿದೆ. ಆರ್ಥಿಕ ಸಮಿತಿಯಲ್ಲಿ ಸ್ಥಾನ ನೀಡದಿರಲು ಐಸಿಸಿ ತೀರ್ಮಾನಿಸಿದ್ದು ಇದಕ್ಕೆ ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬಿಸಿಸಿಐ ಅನ್ನು ಕಡೆಗಣಿಸುವ ಐಸಿಸಿ ಧೋರಣೆ ಹೀಗೆಯೇ ಮುಂದುವರಿಸಿದರೆ ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲು ಹಿಂಜರಿಯುವುದರಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಎಚ್ಚರಿಕೆ ನೀಡಿದ್ದಾರೆ.
ಆರ್ಥಿಕ, ವಾಣಿಜ್ಯ ಕಾರ್ಯನಿರ್ವಾಹಕರ ಸಮಿತಿಗಳಲ್ಲಿ ಎಲ್ಲ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ ಆರ್ಥಿಕ ಸಮಿತಿಯಲ್ಲಿ ಬಿಸಿಸಿಐಗೆ ಸ್ಥಾನವಿಲ್ಲ . ಇದನ್ನು ಅವಮಾನವೆಂದೇ ಪರಿಗಣಿಸುತ್ತೇವೆ. ಬಿಸಿಸಐ ಹಿತಾಸಕ್ತಿ ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಆದ್ದರಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡದೆ ಇರಬಹುದು. ಇದೂ ಸೇರಿ ನಮ್ಮ ಬಳಿ ಬಳಿ ಹಲವು ಆಯ್ಕೆಗಳಿವೆ ಎಂದು ಅಜಯ್ ಶಿರ್ಕೆ ಕಟುವಾಗಿ ಹೇಳಿದ್ದಾರೆ.
ಐಸಿಸಿ ಬಿಸಿಸಿಐ ಅನ್ನು ಕಡೆಗಣಿಸಲು ಮುಖ್ಯ ಕಾರಣ ಇತ್ತೀಚೆಗೆ ಐಸಿಸಿ ತೆಗೆದುಕೊಂಡ ಬಹುತೇಕ ನಿರ್ಧಾರಗಳನ್ನು ಬಿಸಿಸಿಐ ವಿರೋಧಿಸುತ್ತಿರುವುದು ಎಂದು ಹೇಳಲಾಗುತ್ತಿದೆ. ಇದನ್ನು ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಮತ್ತು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ನಡುವಿನ ಹೋರಾಟವೆಂದೇ ಬರ್ಣಿಸಲಾಗಿದೆ.