ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಭಾರತ-ಪಾಕ್ ಕ್ರಿಕೆಟ್ ಪಂದ್ಯ ಆಯೋಜಿಸುವ ಪ್ರಶ್ನೆಯೇ ಇಲ್ಲ ಎಂದಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಹೇಳಿಕೆಯನ್ನು ಪುನರುಚ್ಚಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ಪಾಕಿಸ್ತಾನ ಗಡಿ ಭಯೋತ್ಪಾದನೆ ನಿಲ್ಲಿಸುವವರೆಗೂ ಉಭಯ ದೇಶಗಳ ಕ್ರಿಕೆಟ್ ಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಆಜ್ ತಕ್ ಗೆ ನೀಡಿದ ಸಂದರ್ಶನವೊಂದರಲ್ಲಿ, ಈ ಹಿಂದೆಯೂ ಹಲವು ಭಾರಿ ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಗಡಿಯಲ್ಲಿ ಉಗ್ರ ದಾಳಿಗಳು ನಡೆಯುತ್ತಿರುವಾಗ ಎರಡೂ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವುದು ಸರಿಯಲ್ಲ. ನಾವೇಲ್ಲರೂ ಭಾರತ-ಪಾಕ್ ಕ್ರಿಕೆಟ್ ಆಡಬೇಕು ಎಂದು ಬಯಸುತ್ತೇವೆ. ಆದರೆ ಕ್ರಿಕೆಟ್ ಆಡಬೇಕಾದರೆ ಅವರು ಮೊದಲು ಗಡಿ ಭಯೋತ್ಪಾದನೆಯನ್ನು ನಿಲ್ಲಿಸಲಿ ಎಂದಿದ್ದಾರೆ.
ಅನುರಾಗ್ ಠಾಕೂರ್ ಅವರ ಹೇಳಿಕೆಯನ್ನು ಬೆಂಬಲಿಸಿದ ದಾದಾ, 'ಅನುರಾಗ್ ಅವರು ಎಲ್ಲಿಂದ ಬಂದಿದ್ದಾರೆ ಅಂತ ನನಗೆ ಗೊತ್ತು. ಭಯೋತ್ಪಾದನೆಯ ನೆರಳಲ್ಲಿ ಕ್ರಿಕೆಟ್ ಆಡಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಮಾಜಿ ಆಟಗಾರ ಹಾಗೂ ಎರಡು ಬಾರಿ ಸಂಸದರಾಗಿರುವ ಚೇತನ್ ಚೌಹ್ವಾಣ್ ಅವರು ಸಹ ಪಾಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಿಕೆಟ್ ಮಾತ್ರವಲ್ಲ, ಭಾರತ ಪಾಕ್ ನೊಂದಿಗೆ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.