ಕೋಲ್ಕತ್ತಾ: ಸ್ಪಿನ್ ದಂತಕತೆ ಕರ್ನಾಟಕದ ಸ್ಪಿನ್ನರ್ ಇ ಎ ಎಸ್ ಪ್ರಸನ್ನ, ರವಿಚಂದ್ರನ್ ಅಶ್ವಿನ್ ಅವರನ್ನು ಸದ್ಯದ ಕ್ರಿಕೆಟ್ ಲೋಕದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಕರೆದಿದ್ದಾರೆ.
ಭಾನುವಾರ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನಾಯಕ ಕೆನ್ ವಿಲಿಯಮ್ಸನ್ ಅವರ ವಿಕೆಟ್ ಪಡೆದಾಗ ಅತಿ ವೇಗವಾಗಿ 200 ನೇ ವಿಕೆಟ್ ಪಡೆದ ಬೌಲರ್ ಗಳಲ್ಲಿ ಅಶ್ವಿನ್ ಎರಡನೇ ಸ್ಥಾನ ಪಡೆದರು.
ಕಿವೀಸ್ ವಿರುದ್ಧ 197 ರನ್ ಗಳ ಅಂತರದಿಂದ ಗೆದ್ದ ಭಾರತದ ಈ ಪಂದ್ಯದಲ್ಲಿ ಅಶ್ವಿನ್ ಒಟ್ಟು 11 ವಿಕೆಟ್ ಗಳಿಸಿದ್ದಾರೆ.
"ಇದು ಅದ್ಭುತ ಪ್ರದರ್ಶನ. ಸದ್ಯಕ್ಕೆ ಕ್ರಿಕೆಟ್ ಲೋಕದಲ್ಲಿ ಆಡುತ್ತಿರುವ ಅತ್ಯುತ್ತಮ ಸ್ಪಿನ್ ಬೌಲರ್ ಅಶ್ವಿನ್" ಎಂದು ಪ್ರಸನ್ನ ಹೇಳಿದ್ದಾರೆ.
ಅಶ್ವಿನ್ ಇಲ್ಲಿಯವರೆಗೂ 19 ಬಾರಿ 5 ಕ್ಕೂ ಹೆಚ್ಚು ವಿಕೆಟ್ ಗಳಿಸಿದ್ದಾರೆ. "ಬ್ಯಾಟ್ಸ್ ಮೆನ್ ಆಗಿ ಪ್ರಾರಂಭಿಸಿ ಬೌಲಿಂಗ್ ಮಾಡುತ್ತಿದ್ದ ಆಟಗಾರ ಈಗ ಪೂರ್ಣ ಪ್ರಮಾಣದ ಬೌಲರ್ ಆಗಿ ಉತ್ತಮ ಬ್ಯಾಟಿಂಗ್ ಕೂಡ ಮಾಡುತ್ತಿದ್ದಾರೆ. ಇವರನ್ನು ಹೊಂದಿರುವುದು ಭಾರತೀಯ ಕ್ರಿಕೆಟ್ ತಂಡ ಅದೃಷ್ಟ" ಎಂದು ಪ್ರಸನ್ನ ಹೇಳಿದ್ದಾರೆ.