ನವದೆಹಲಿ: ಮುಂಬರುವ ಬಹುರಾಷ್ಟ್ರೀಯ ಕ್ರಿಕೆಟ್ ಸರಣಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿಗೆ ಸೇರಿಸದಂತೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಐಸಿಸಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಕಾದಾಟಕ್ಕೆ ಹಾತೊರೆಯುತ್ತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಎದುರಾಗಿದ್ದು, ಮುಂಬರುವ ಐಸಿಸಿ ಸರಣಿಗಳಲ್ಲಿ ಉಭಯ ರಾಷ್ಟ್ರಗಳನ್ನು ಒಂದೇ ಗುಂಪಿಗೆ ಸೇರಿಸದಂತೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಐಸಿಸಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅನುರಾಗ್ ಠಾಕೂರ್ ಅವರು, ಉರಿ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರದ ನಿಲುವು ಹಾಗೂ ಭಾರತೀಯ ಪ್ರಜೆಗಳ ಭಾವನೆಯನ್ನು ಮನದಲ್ಲಿಟ್ಟುಕೊಂಡು ಮುಂಬರುವ ಐಸಿಸಿ ಬಹುರಾಷ್ಟ್ರೀಯ ಸರಣಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸದಂತೆ ಐಸಿಸಿಗೆ ಮನವಿ ಮಾಡಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಒಂದು ವೇಳೆ ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ ಆಗ ಅನಿವಾರ್ಯವಾಗಿ ಆಡಲೇ ಬೇಕಾಗುತ್ತದೆ. ಇದೊಂದು ಸನ್ನಿವೇಶವನ್ನು ನಾವು ತಡೆಯಲು ಸಾಧ್ಯವಿಲ್ಲ ಎಂದೂ ಠಾಕೂರ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 18 ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಾಳಾಗಿದ್ದು, ಇದೇ ವಿಚಾರವಾಗಿ ಕೆಂಗಣ್ಣು ಬೀರಿರುವ ಭಾರತ ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಯೋಜಿಸಿದೆ. ಇದೇ ಕಾರಣಕ್ಕೆ ಈ ಹಿಂದೆ ಇಸ್ಲಾಮಾಬಾದಿನಲ್ಲಿ ಆಯೋಜಿಸಲಾಗಿದ್ದ 19ನೇ ಸಾರ್ಕ್ ಶೃಂಗ ಸಮ್ಮೇಳನವನ್ನು ಭಾರತ ಬಹಿಷ್ಕರಿಸಿತ್ತು. ಭಾರತದ ನಿರ್ಧಾರಕ್ಕೆ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಆಫ್ಘಾನಿಸ್ತಾನ ಹಾಗೂ ಭೂತಾನ್ ರಾಷ್ಟ್ರಗಳು ಬೆಂಬಲ ನೀಡಿ ಶೃಂಗಸಭೆಯನ್ನು ಬಹಿಷ್ಕರಿಸಿದ್ದವು.
ಇನ್ನು ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ವೈಭವದ ಕ್ರಿಕೆಟ್ ಇತಿಹಾಸವೇ ಇದ್ದು, ಉಭಯ ತಂಡಗಳ ಕಾದಾಟ ವೀಕ್ಷಣೆಗೆ ಇಡೀ ವಿಶ್ವವೇ ಕಾದು ಕುಳಿತಿರುತ್ತದೆ. ಇದೇ ಕಾರಣಕ್ಕೆ ಈ ಹಿಂದೆ ಐಸಿಸಿ ಕೂಡ ತನ್ನ ನಿಯಮಾವಳಿಯನ್ನು ಸಡಿಲಗೊಳಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿತ್ತು. ಪರಿಣಾಮ ಭಾರತ ಮತ್ತು ಪಾಕಿಸ್ತಾನ ತಂಡಗಳು ಆ ಸರಣಿಯಲ್ಲಿ ಎರಡೆರಡು ಬಾರಿ ಮುಖಾಮುಖಿಯಾಗಿದ್ದವು.
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಐಸಿಸಿ, ಟಿ20 ವಿಶ್ವಕಪ್ ಪ್ರಚಾರಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಉತ್ತಮ ವೇದಿಕೆ ಎಂದು ಹೇಳಿಕೊಂಡಿತ್ತು. ಆದರೆ ಇದೀಗ ಉಭಯ ರಾಷ್ಟ್ರಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.