ಬೆಂಗಳೂರು: ಹೈದರಾಬಾದ್ ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ವಿರುದ್ಧ 35 ರನ್ ಗಳಿಂದ ಹೀನಾಯ ಸೋಲುಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಪುಟಿದೆದ್ದಿದ್ದು, ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ತನ್ನ ಮೊದಲ ಗೆಲುವು ದಾಖಲಿಸಲು ಹವಣಿಸುತ್ತಿದೆ.
ಟೂರ್ನಿ ಆರಂಭಕ್ಕೂ ಮುನ್ನವೇ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಆರ್ ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ. ಆದರೆ ಇಂದು ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ತವರು ಅಭಿಮಾನಿಗಳ ಬೆಂಬಲದೊಂದಿಗೆ ಇಂದು ದೆಹಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಬೆಂಗಳೂರು ತಂಡ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ಕ್ರೀಡಾಂಗಣದ ಸುತ್ತಮುತ್ತ ಭಾರಿ ಭದ್ರತೆ
ಏತನ್ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಬೆಂಗಳೂರು ಪೊಲೀಸರು ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಸಂಚಾರ ಮಾರ್ಗಗಳಲ್ಲಿ ಕೊಂಚ ಬದಲಾವಣೆ ಮಾಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ಈ ಸೀಸನ್ ಮೊದಲ ಪಂದ್ಯ ಇದಾಗಿದ್ದು, ಅಲ್ಲದೇ ಇಂದು ವಾರಾಂತ್ಯವಾದ್ದರಿಂದ ನಾಳೆ ಭಾನುವಾರ ರಜೆ ಇದೆ. ಇದೇ ಕಾರಣಕ್ಕೆ ಕ್ರೀಡಾಂಗಣಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬರುವ ಸಾಧ್ಯತೆ ಇದ್ದು, ಪ್ರೇಶ್ರಕರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಪೊಲೀಸರು ಸಕಲ ಕ್ರಮಗಳನ್ನೂ ಕೈಗೊಂಡಿದ್ದಾರೆ.
ಇನ್ನು ಭದ್ರತೆಗಾಗಿ ಸುಮಾರು 1100ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಆರ್ ಪಿಎಫ್, ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗತ್ಯ ಬಿದ್ದರೆ ಸ್ನಿಫರ್ ಡಾಗ್ ತಂಡ ಕೂಡ ಭದ್ರತೆಗಾಗಿ ನಿಯೋಜನೆಗೊಳ್ಳಲಿದೆ ಎಂದು ತಿಳಿದುಬಂದಿದೆ. ಅಂತೆಯೇ ಟ್ರಾಫಿಕ್ ನಿಯಂತ್ರಣಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆ ಅಥವಾ ಮೆಟ್ರೋ ರೈಲುಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ ಪಂದ್ಯ ನೋಡಲು ಆಗಮಿಸುವ ಪ್ರೇಕ್ಷಕರ ವಾಹನಗಳ ಪಾರ್ಕಿಂಗ್ ಗಾಗಿ ಸೆಂಟ್ ಮಾರ್ಕ್ಸ್ ಚರ್ಚ್ ಹಾಗೂ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲು ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ ಕ್ರೀಡಾಂಗಣದ ಒಳಗೆ, ಬೆಂಕಿ ಉತ್ಪತ್ತಿ ಮಾಡುವ ವಸ್ತುಗಳು, ಶಸ್ತ್ರಾಸ್ತ್ರಗಳನ್ನು ನಿಷೇಧಿಸಲಾಗಿದ್ದು, ಇದಲ್ಲದೆ ಲ್ಯಾಪ್ ಟಾಪ್, ಕ್ಯಾಮೆರಾ, ಆಹಾರ ಪೊಟ್ಟಣ, ಪಾನೀಯಗಳು, ನೀರಿನ ಬಾಟಲಿಗಳು, ಬ್ಯಾಗ್ ಗಳು ಮತ್ತು ಹೆಲ್ಮೆಟ್ ಗಳನ್ನು ತರುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಸಮಯದಲ್ಲಿ ಓಡಾಡಲಿದೆ ಮೆಟ್ರೋ
ಇನ್ನು ಇಂದು ಐಪಿಎಲ್ ಪಂದ್ಯವಿರುವುದರಿಂದ ನಮ್ಮ ಮೆಟ್ರೋ ಓಡಾಟದ ಸಮಯವನ್ನು ಹೆಚ್ಚಿಸಲಾಗಿದೆ. ಈ ಸೀಸನ್ ನಲ್ಲಿ ಬೆಂಗಳೂರಿನಲ್ಲಿ ಒಟ್ಟು 8 ಪಂದ್ಯಗಳು ನಡೆಯಲಿದ್ದು, ಪ್ರಯಾಣಿಕರಿಗೆ ಸಹಕಾರಿಯಾಗಲೆಂದು ಈ 8 ದಿನವೂ ಮೆಟ್ರೋ ಓಡಾಟದ ಸಮಯ ಹೆಚ್ಚಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ 10ರಿಂದ ಮಧ್ಯರಾತ್ರಿ 12.30ರವರೆಗೂ ಮೆಟ್ರೋ ವ್ಯವಸ್ಥೆ ಇರಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿ ಸಮಯದಲ್ಲಿ ಪ್ರತೀ 20 ನಿಮಿಷಕ್ಕೆ ಒಂದರಂತೆ ರೈಲು ಓಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.