ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ತಂದೆ ಸಾವಿನ ದುಃಖದಲ್ಲೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಿದರು.
ಬುಧವಾರ ರಾತ್ರಿ ರಿಷಭ್ ಪಂತ್ ತಂದೆ ರಾಜೇಂದ್ರ ಪಂತ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಗುರುವಾರ ಹರಿದ್ವಾರದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿದ ರಿಷಭ್, ತಾಯಿ ಸರೋಜ್ ಮತ್ತು ಸಾಕ್ಷಿಗೆ ಸಾಂತ್ವಾನ ಹೇಳಿ ಶುಕ್ರವಾರ ಬೆಂಗಳೂರಿನಲ್ಲಿ ತಂಡವನ್ನು ಕೂಡಿಕೊಂಡಿದ್ದರು.
ರಿಷಭ್ ಪಂತ್ ಡೆಲ್ಲಿ ಪರ ಆಡುವ ಮೂಲಕ ಕ್ರೀಡಾಬದ್ಧತೆ, ವೃತ್ತಿಪರತೆ ಪ್ರದರ್ಶಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ಇನ್ನು ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 1999ರ ವಿಶ್ವಕಪ್ ನಲ್ಲಿ ಕೀನ್ಯಾ ವಿರುದ್ಧ ಮತ್ತು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 2006ರ ರಣಜಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಆಡಿದ್ದರು.
ನಿನ್ನೆ ನಡೆದ ಪಂದ್ಯದಲ್ಲಿ ಪಂತ್ ಉತ್ತಮವಾಗಿ ಆಡುವ ಮೂಲಕ ತಂಡವನ್ನು ಗೆಲುವಿನ ಮುಟ್ಟಿಸಲು ಶತ ಪ್ರಯತ್ನಪಟ್ಟರು. ಆದರೆ ಸಹ ಆಟಗಾರರು ಸಾಥ್ ನೀಡದೇ ಇದ್ದಿದ್ದರಿಂದ ಏಕಾಂಗಿಯಾಗಿ ಹೋರಾಟ ಮಾಡಿ 57 ರನ್ ಗಳಿಸಿದರು ತಂಡ ಸೋಲಿನಿಂದ ಪಾರಾಗಿಲ್ಲ. ಕೊನೆಗೆ ಬೆಂಗಳೂರು ತಂಡ 15 ರನ್ ಗಳಿಂದ ಜಯ ಗಳಿಸಿ ಗೆಲುವಿನ ನಗೆ ಬೀರಿತು.