ಕೊಲಂಬೊ ಟೆಸ್ಟ್ನಲ್ಲಿ ಲಂಕಾ ದಹನ; ಭಾರತಕ್ಕೆ 53 ರನ್ ಹಾಗೂ ಇನ್ನಿಂಗ್ಸ್ ಜಯ
ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 53 ರನ್ ಗಳಿಂದ ಜಯ ಸಾಧಿಸಿದೆ...
ಕೊಲಂಬೊ: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 53 ರನ್ ಗಳಿಂದ ಜಯ ಸಾಧಿಸಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ 622 ರನ್ ಗಳನ್ನು ಪೇರಿಸಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾ 183 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 439 ರನ್ ಗಳ ಮುನ್ನಡೆ ಪಡೆದಿದ್ದ ಟೀಂ ಇಂಡಿಯಾ ಲಂಕಾ ಮೇಲೆ ಫಾಲೋ ಆನ್ ಹೇರಿತು. ಇದರೊಂದಿಗೆ ಮತ್ತೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಾಲ್ಕನೇ ದಿನದಲ್ಲಿ 386 ರನ್ ಗಳಿಗೆ ಸರ್ವಪತನ ಕಂಡಿದ್ದು ಭಾರತ ಜಯ ದಾಖಲಿಸಿದೆ.
ಫಾಲೋ ಆನ್ ನಲ್ಲಿ ಶ್ರೀಲಂಕಾಗೆ ಕರುಣರತ್ನೆ ಮತ್ತು ಮೆಂಡಿಸ್ ಆಸರೆಯಾದರು. ಮೆಂಡಿಸ್ 110 ರನ್ ಹಾಗೂ ಕರುಣರತ್ನೆ ಅಜೇಯ 141 ಸಿಡಿಸಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ ಶ್ರೀಲಂಕಾ ಆಟಗಾರರಿಗೆ ರವೀಂದ್ರ ಜಡೇಜಾ ಸಿಂಹಸ್ವಪ್ನರಾದರು. ರವೀಂದ್ರ ಜಡೇಜಾ 5, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದಿದ್ದಾರೆ.
ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 35 ಮತ್ತು ಕೆಎಲ್ ರಾಹುಲ್ 57 ರನ್ ಗಳಿಗೆ ಔಟಾದರೆ ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ ಗಳಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಪೂಜಾರ 133 ಮತ್ತು ಅಜಿಂಕ್ಯ ರಹಾನೆ 132 ರನ್ ಗಳನ್ನು ಸಿಡಿಸಿ ಔಟಾದರು. ಈ ಮಧ್ಯೆ ಆರ್ ಅಶ್ವಿನ್ 54 ರನ್ ಸಿಡಿಸಿದರೆ, ವೃದ್ಧಿಮಾನ್ ಸಹಾ 67 ರನ್ ಸಿಡಿಸಿ ಔಟಾದರು. ನಂತರ ಬಂದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡ 600ರ ಗಡಿ ದಾಟಲು ಸಾಧ್ಯವಾಯಿತು.
ಶ್ರೀಲಂಕಾ ಪರ ಹೆರತ್ 4, ಪುಷ್ಪಕುಮಾರ 2 ಮತ್ತು ಕರುಣರತ್ನೆ ಹಾಗೂ ಪೆರೇರಾ ತಲಾ 1 ವಿಕೆಟ್ ಪಡೆದಿದ್ದಾರೆ.
ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.