ಕ್ರಿಕೆಟ್

'ಆಟಗಾರರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ': MI ನಾಯಕರಾದ ಬಳಿಕ ತಂಡದ ಸಂಕಷ್ಟಗಳ ಬಗ್ಗೆ ರೋಹಿತ್ ಶರ್ಮಾ!

'ಆಟಗಾರರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ': MI ನಾಯಕರಾದ ಬಳಿಕ ತಂಡದ ಸಂಕಷ್ಟಗಳ ಬಗ್ಗೆ ರೋಹಿತ್ ಶರ್ಮಾ!
ರೋಹಿತ್ ಶರ್ಮಾ
Published On :

ಐಪಿಎಲ್ 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ (MI) ತಂಡವು ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಿದೆ. ಈ ಹಿಂದೆ 10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಅವರನ್ನು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ನೀಡುವ ನಿರ್ಧಾರದೊಂದಿಗೆ ಆ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಆದರೆ, ಪಾಂಡ್ಯ ಅವರ ನಾಯಕತ್ವದಲ್ಲಿ ಆಡಿದ ಮೂರು ಸೀಸನ್‌ಗಳ ಪೈಕಿ ಎರಡು ಸೀಸನ್‌ಗಳಲ್ಲಿ ಮುಂಬೈ ತಂಡವು ಪ್ಲೇಆಫ್‌ಗೆ ತಲುಪಲು ವಿಫಲವಾಯಿತು. 2024ರಲ್ಲಿ ಮುಂಬೈ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದರೆ, 2026ರಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದೀಗ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆಯಾಗಿದ್ದು, ಅವರ ಬದಲಿಗೆ ವೇಗದ ಬೌಲರ್ ಅರ್ಶದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಬೆಳವಣಿಗೆಯೊಂದಿಗೆ, ರೋಹಿತ್ ಶರ್ಮಾ ಮತ್ತೊಮ್ಮೆ ತಂಡದ ನಾಯಕನಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ತಮ್ಮ ಮರುನೇಮಕಾತಿಯ ನಂತರ ಮಾತನಾಡಿದ ರೋಹಿತ್, ತಂಡವು ಮೂಲಭೂತ ವಿಷಯಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಯಿತು ಮತ್ತು ಇದೇ ಕಾರಣದಿಂದಾಗಿ ಕಳೆದ ಕೆಲವು ಆವೃತ್ತಿಗಳಲ್ಲಿ ತಂಡದ ಪ್ರದರ್ಶನ ಕುಸಿಯಿತು. ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದವರ ವಿರುದ್ಧ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

'ಕಳೆದ ಮೂರು ಋತುಗಳಲ್ಲಿ- 2022ರಲ್ಲಿ (ನನ್ನ ಅವಧಿಯಲ್ಲಿದ್ದಾಗ), ನಂತರ 2024ರಲ್ಲಿ ಮತ್ತು ಆಮೇಲೆ 2026ರಲ್ಲಿ ಮುಂಬೈ ಇಂಡಿಯನ್ಸ್ (MI) ಅಂಕಪಟ್ಟಿಯ ತಳಭಾಗದಲ್ಲಿರುವುದು ಸರಿಯಲ್ಲ; ಇದು ಎಂಐ ತಂಡದ ನೈಜ ಸ್ವರೂಪವಲ್ಲ. ಎಂಐ ತಂಡವು ಇಂತಹ ಪ್ರದರ್ಶನಕ್ಕೆ ಹೆಸರಾದದ್ದಲ್ಲ. ನಾವು ಅಂಕಪಟ್ಟಿಯ ತಳಭಾಗದಲ್ಲಿ ಸಿಲುಕಿಕೊಂಡಿದ್ದ ಈ ಎಲ್ಲ ವರ್ಷಗಳಲ್ಲಿ, ನಾವು ಸಮರ್ಥವಾಗಿ ಪೈಪೋಟಿ ನೀಡಲಿಲ್ಲ' ಎಂದು ಎಂಐ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ರೋಹಿತ್ ಹೇಳಿದ್ದಾರೆ.

'ನಿರಾಶೆಗೆ ಕಾರಣ ಪ್ಲೇಆಫ್‌ಗೆ ಅರ್ಹತೆ ಪಡೆಯದಿರುವುದಲ್ಲ. ನಾವು ಸರಿಯಾಗಿ ಆಡುತ್ತಿರಲಿಲ್ಲ ಎಂಬುದೇ ನಿರಾಶೆಯ ವಿಷಯವಾಗಿತ್ತು. ಪ್ರತಿಯೊಬ್ಬರೂ ತಾವು ಹೊಂದಿದ್ದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿರಲಿಲ್ಲ' ಎಂದು ಅವರು ಹೇಳಿದರು.

ತಂಡದ ನಿರಾಶಾದಾಯಕ ಪ್ರದರ್ಶನಗಳಿಂದಾಗಿ ಕಳೆದ ಆವೃತ್ತಿಯ ನಂತರ ಹಲವು ಆಟಗಾರರು ಹತಾಶರಾಗಿದ್ದರು ಎಂದು 38 ವರ್ಷದ ಆಟಗಾರ ಹೇಳಿದರು. ಈ ಹಿನ್ನೆಲೆಯಲ್ಲಿ, ಸ್ಪರ್ಧೆಯಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಲು ಮುಂಬೈಗೆ ನೆರವಾಗಿದ್ದ ಆ ಗುಣಮಟ್ಟವನ್ನು ತಂಡವು ಹೇಗೆ ಮರಳಿ ಪಡೆಯಬಹುದು ಎಂಬುದರ ಕುರಿತು ಅವರು ಮಾತನಾಡಿದರು.

'ಐಪಿಎಲ್ ಮುಗಿದ ತಕ್ಷಣ, ನಮಗೆ ಅತ್ಯಂತ ನಿರಾಶಾದಾಯಕವಾದ ಸ್ಥಿತಿ ಎದುರಾಯಿತು. ಕೇವಲ ನನಗಷ್ಟೇ ಅಲ್ಲ, ನಾವು ಆಡುತ್ತಿದ್ದ ರೀತಿಯ ಬಗ್ಗೆ ಇತರ ಅನೇಕ ಆಟಗಾರರಿಗೂ ಸಾಕಷ್ಟು ಹತಾಶೆ ಉಂಟಾಗಿತ್ತು. ಸಹಜವಾಗಿಯೇ, ಯಾವುದೇ ಕ್ರೀಡಾಪಟುವಿಗೆ ಇದು ಸಾಮಾನ್ಯ ವಿಷಯ. ನೀವು ಚೆನ್ನಾಗಿ ಆಡದಿದ್ದಾಗ ಅಥವಾ ನಿಮ್ಮ ತಂಡವು ಉತ್ತಮ ಪ್ರದರ್ಶನ ನೀಡದಿದ್ದಾಗ, ಸಹಜವಾಗಿಯೇ ಹತಾಶೆ ಉಂಟಾಗುತ್ತದೆ. ಆ ಸಮಯದಲ್ಲಿ ಪ್ರತಿಯೊಬ್ಬರೂ ಇಂತಹ ಪರಿಸ್ಥಿತಿಯನ್ನೇ ಎದುರಿಸುತ್ತಿದ್ದರು' ಎಂದು ಅವರು ಹೇಳಿದರು.

2011ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ ರೋಹಿತ್, ಆ ತಂಡದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು 2013, 2015, 2017, 2019 ಮತ್ತು 2020ರಲ್ಲಿ ಐದು ಬಾರಿ ಐಪಿಎಲ್ (IPL) ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಈಗ ಅವರು ಈ ಫ್ರಾಂಚೈಸಿಯ ನಾಯಕರಾಗಿ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಲಿದ್ದು, 2027ರಲ್ಲಿ ನಡೆಯಲಿರುವ ಐಪಿಎಲ್‌ನ ಮೈಲಿಗಲ್ಲಾದ 20ನೇ ಆವೃತ್ತಿಗಾಗಿ ತಂಡವನ್ನು ಸಿದ್ಧಪಡಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.